الوصف
كتاب مترجم إلى اللغة الكنادية، عبارة عن نبذة موجزة عن رسول الإسلام محمد صلى الله عليه وسلم تحتوى على، اسمه ونسبه وبلده وزواجه، ورسالته، والذي دعا إليه، وآيات نبوته، وشريعته، وموقف خصومه منه.
ترجمات أخرى 47
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ صلى الله عليه وسلمರವರ ಸಂಕ್ಷಿಪ್ತ ಪರಿಚಯ. ಇದರಲ್ಲಿ ನಾನು ಅವರ ಹೆಸರು, ಅವರ ವಂಶ, ಅವರ ಊರು, ಅವರ ಮದುವೆ, ಅವರ ಸಂದೇಶ, ಅವರ ಧರ್ಮಪ್ರಚಾರ, ಅವರ ಪ್ರವಾದಿತ್ವದ ಚಿಹ್ನೆಗಳು, ಮತ್ತು ಧರ್ಮಶಾಸ್ತ್ರ ಮತ್ತು ಅವರ ಬಗ್ಗೆ ಅವರ ವಿರೋಧಿಗಳ ನಿಲುವನ್ನು ವಿವರಿಸುವೆನು.
ಮುಹಮ್ಮದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಮ್ ಇಸ್ಲಾಂ ಧರ್ಮದ ಸಂದೇಶವಾಹಕರಾಗಿದ್ದಾರೆ. ಅವರು ಇಸ್ಮಾಯೀಲ್ ಬಿನ್ ಇಬ್ರಾಹೀಮ್ عليه السلام ರವರ ವಂಶದವರು. ಪ್ರವಾದಿ ಇಬ್ರಾಹೀಮ್ عليه السلام ಶಾಮ್ನಿಂದ ಮಕ್ಕಾಗೆ ಬಂದರು. ಅವರ ಜೊತೆಗೆ ಅವರ ಪತ್ನಿ ಹಾಜರ್ ಮತ್ತು ಮಗ ಇಸ್ಮಾಯೀಲ್ ಇದ್ದರು. ಇಸ್ಮಾಯೀಲ್ عليه السلام ಆಗ ಇನ್ನೂ ತೊಟ್ಟಿಲಿನಲ್ಲಿದ್ದ ಚಿಕ್ಕ ಮಗುವಾಗಿದ್ದರು. ಅಲ್ಲಾಹನ ಆಜ್ಞೆಯಂತೆ ಇಬ್ರಾಹೀಮ್ عليه السلام ಅವರಿಬ್ಬರನ್ನು ಮಕ್ಕಾದಲ್ಲಿ ವಾಸ ಮಾಡಿಸಿದರು. ನಂತರ ಆ ಮಗು ಬೆಳೆದು ದೊಡ್ಡವನಾದಾಗ ಇಬ್ರಾಹೀಮ್ عليه السلام ಪುನಃ ಮಕ್ಕಾಗೆ ಬಂದರು. ಅವರು ಮತ್ತು ಅವರ ಮಗ ಇಸ್ಮಾಯೀಲ್ عليه السلام ಸೇರಿ ಪವಿತ್ರ ಕಅಬಾ ಭವನವನ್ನು ನಿರ್ಮಿಸಿದರು. ನಂತರ ಕಅಬಾದ ಸುತ್ತಮುತ್ತಲೂ ಜನರು ಹೆಚ್ಚಾದರು. ಮಕ್ಕಾ ಪಟ್ಟಣವು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನ ಆರಾಧಕರ ಹಾಗೂ ಹಜ್ಜ್ ಕರ್ಮವನ್ನು ನಿರ್ವಹಿಸಲು ಬಯಸುವವರ ತಾಣವಾಯಿತು. ಹೀಗೆ ಜನರು ಅಲ್ಲಾಹನ ಆರಾಧನೆ ಮತ್ತು ಅವನ ಏಕೈಕತೆಯ ನಂಬಿಕೆಯಲ್ಲಿ ಹಲವು ತಲೆಮಾರುಗಳ ತನಕ ಇಬ್ರಾಹೀಮ್ عليه السلام ರ ಮಾರ್ಗದಲ್ಲಿ ನಡೆದರು. ತದನಂತರ ಜನರು ನೇರ ಮಾರ್ಗದಿಂದ ತಪ್ಪತೊಡಗಿದರು. ಅರೇಬಿಯನ್ ಉಪದ್ವೀಪದ ಸ್ಥಿತಿ ಅದರ ಸುತ್ತಮುತ್ತಲ ಜಗತ್ತಿನ ಸ್ಥಿತಿಯಂತಾಯಿತು. ಅಲ್ಲಿ ವಿಗ್ರಹಾರಾಧನೆ, ಹೆಣ್ಣುಮಕ್ಕಳನ್ನು ಜೀವಂತ ದಫನ ಮಾಡುವುದು, ಸ್ತ್ರೀಯರ ಮೇಲೆ ದೌರ್ಜನ್ಯ, ಸುಳ್ಳು, ಮದ್ಯಪಾನ, ಹಾದರ, ಅನಾಥರ ಸೊತ್ತನ್ನು ಕಬಳಿಸುವುದು, ಬಡ್ಡಿ, ಮುಂತಾದ ಬಹುದೇವಾರಾಧನೆಗೆ ಸಂಬಂಧಪಟ್ಟ ಕಾರ್ಯಗಳು ಬಹಿರಂಗವಾಗಿ ನಡೆಯುತ್ತಿದ್ದವು. ಇಂತಹ ಸ್ಥಳದಲ್ಲಿ ಮತ್ತು ಇಂತಹ ಪರಿಸರದಲ್ಲಿ ಇಸ್ಲಾಮಿನ ಪ್ರವಾದಿ ಮುಹಮ್ಮದ್ ಬಿನ್ ಅಬ್ದುಲ್ಲಾ ರವರು ಇಸ್ಮಾಯೀಲ್ ಬಿನ್ ಇಬ್ರಾಹೀಮ್ عليه السلام ರ ವಂಶದಲ್ಲಿ ಕ್ರಿ.ಶ. 571 ರಲ್ಲಿ ಜನಿಸಿದರು. ಅವರ ಜನನಕ್ಕೆ ಮುಂಚೆಯೇ ಅವರ ತಂದೆ ತೀರಿಕೊಂಡರು. ಅವರು ಆರು ವರ್ಷದವರಾಗಿದ್ದಾಗ ಅವರ ತಾಯಿ ಸಹ ನಿಧನರಾದರು. ಅವರ ಚಿಕ್ಕಪ್ಪ ಅಬೂ ತಾಲಿಬರು ಅವರ ಪಾಲನೆ-ಪೋಷಣೆಯ ಹೊಣೆ ವಹಿಸಿಕೊಂಡರು. ಪ್ರವಾದಿ ಮುಹಮ್ಮದ್ صلى الله عليه وسلم ಅನಾಥರಾಗಿ ಮತ್ತು ಬಡವರಾಗಿ ಬೆಳೆದರು. ಅವರು ತಮ್ಮ ಸ್ವಂತ ದುಡಿಮೆಯಿಂದ ತಿನ್ನುತ್ತಿದ್ದರು.
ಅವರಿಗೆ 25 ವರ್ಷ ಪ್ರಾಯವಾದಾಗ ಮಕ್ಕಾದ ಸಭ್ಯ ಸ್ತ್ರೀಯರಲ್ಲೊಬ್ಬರಾದ ಖದೀಜಾ ಬಿಂತ್ ಖುವೈಲಿದ್(رضي الله عنها) ರನ್ನು ವಿವಾಹವಾದರು. ಅವರಿಗೆ ಆಕೆಯಿಂದ ನಾಲ್ಕು ಹೆಣ್ಣು ಮತ್ತು ಎರಡು ಗಂಡು ಮಕ್ಕಳು ಹುಟ್ಟಿದರು. ಗಂಡು ಮಕ್ಕಳು ಬಾಲ್ಯದಲ್ಲೇ ನಿಧನರಾದರು. ಅವರು ತಮ್ಮ ಪತ್ನಿ ಮತ್ತು ಕುಟುಂಬದೊಂದಿಗೆ ಅತ್ಯಂತ ಸೌಮ್ಯವಾಗಿ ಮತ್ತು ಪ್ರೀತಿಯಿಂದ ವರ್ತಿಸುತ್ತಿದ್ದರು. ಆದ್ದರಿಂದ ಅವರ ಪತ್ನಿ ಖದೀಜಾ ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಅವರು ಕೂಡ ಖದೀಜರನ್ನು ಅಷ್ಟೇ ಪ್ರೀತಿಸುತ್ತಿದ್ದರು. ಅವರು ತಮ್ಮ ಪತ್ನಿಯ ಮರಣಾನಂತರ ಹಲವಾರು ವರ್ಷಗಳ ಕಾಲ ಅವರನ್ನು ಮರೆತಿರಲಿಲ್ಲ. ಖದೀಜಾರೊಂದಿಗಿನ ಉತ್ತರ ವರ್ತನೆಗಾಗಿ ಮತ್ತು ಅವರ ಪ್ರೀತಿಯನ್ನು ನೆಲೆನಿಲ್ಲಿಸುವುದಕ್ಕಾಗಿ, ಅವರು ಕುರಿಯನ್ನು ವಧಿಸಿ ಅವರ ಮಾಂಸವನ್ನು ಖದೀಜಾರ ಗೆಳತಿಯರಿಗೆ ಗೌರವಪೂರ್ವಕವಾಗಿ ಹಂಚುತ್ತಿದ್ದರು.
ಪ್ರವಾದಿ ಮುಹಮ್ಮದ್ صلى الله عليه وسلم ರವರು ಜನ್ಮತಃ ಶ್ರೇಷ್ಠ ಸ್ವಭಾವದವರು. ಅವರ ಜನತೆ ಅವರನ್ನು ಸತ್ಯವಂತ ಹಾಗೂ ಪ್ರಾಮಾಣಿಕ ಎಂದು ಕರೆಯುತ್ತಿದ್ದರು. ಅವರು ತಮ್ಮ ಜನರೊಂದಿಗೆ ದೊಡ್ಡ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು. ಆದರೆ ಅದೇ ಸಮಯ, ಅವರು ಮಾಡುತ್ತಿದ್ದ ವಿಗ್ರಹಾರಾಧನೆಯನ್ನು ದ್ವೇಷಿಸುತ್ತಿದ್ದರು. ಆ ವಿಷಯದಲ್ಲಿ ಅವರೊಂದಿಗೆ ಅವರು ಭಾಗಿಯಾಗುತ್ತಿರಲಿಲ್ಲ.
ಮಕ್ಕಾದಲ್ಲಿದ್ದು, ಅವರಿಗೆ 40 ವರ್ಷ ಪ್ರಾಯವಾದಾಗ ಅಲ್ಲಾಹನು ಅವರನ್ನು ಸಂದೇಶವಾಹಕನಾಗಿ ನೇಮಿಸಿದರು. ದೇವದೂತ ಜಿಬ್ರೀಲ್ عليه السلام ಕುರ್ಆನ್ನಲ್ಲಿ ಅವತೀರ್ಣವಾದ ಮೊಟ್ಟಮೊದಲ ಅಧ್ಯಾಯದೊಂದಿಗೆ ಅವರ ಬಳಿಗೆ ಬಂದರು. ಆ ವಚನಗಳು ಹೀಗಿವೆ: "ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ ಓದಿರಿ.(1) ಅವನು, ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು ಸೃಷ್ಟಿಸಿದನು.(2) ಓದಿರಿ, ಮತ್ತು ನಿಮ್ಮ ಪ್ರಭು ಅತ್ಯಧಿಕ ಔದಾರ್ಯವುಳ್ಳವನು.(3) ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿಕೊಟ್ಟನು.(4) ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಅವನು ಕಲಿಸಿಕೊಟ್ಟಿರುವನು.(5)" [ಅಲ್-ಅಲಖ್:1- 5] ಅವರು ನಡುಗುವ ಹೃದಯದೊಂದಿಗೆ ಪತ್ನಿ ಖದೀಜಾ رضي الله عنها ರವರ ಬಳಿಗೆ ಬಂದು ನಡೆದ ಘಟನೆಯನ್ನು ವಿವರಿಸಿದರು. ಆಕೆ ಅವರಿಗೆ ಸಾಂತ್ವನ ಹೇಳಿದರು. ನಂತರ ಅವರನ್ನು ತಮ್ಮ ಚಿಕ್ಕಪ್ಪನ ಮಗ ವರಖ ಬಿನ್ ನೌಫಲರ ಬಳಿಗೆ ಕರೆದುಕೊಂಡು ಹೋದರು. ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಇಂಜೀಲ್ ಮತ್ತು ತೌರಾತನ್ನು ಅಧ್ಯಯನ ಮಾಡಿದ್ದರು. ಖದೀಜಾ ಹೇಳಿದರು: "ಚಿಕ್ಕಪ್ಪನ ಮಗನೇ! ನಿನ್ನ ಸಹೋದರನ ಮಗ ಹೇಳುತ್ತಿರುವುದನ್ನು ಕೇಳು." ಆಗ ವರಖ ಹೇಳಿದರು: ಓ ನನ್ನ ಸಹೋದರನ ಮಗನೇ! ನೀನೇನು ನೋಡಿದೆ? ಆಗ ಪ್ರವಾದಿ صلى الله عليه وسلم ತಾವು ನೋಡಿದ್ದನ್ನು ವಿವರಿಸಿದರು. ಆಗ ವರಖ ಹೇಳಿದರು: "ಇದು ಮೂಸಾ عليه السلام ರವರ ಬಳಿಗೆ ಬಂದ ಅಲ್ಲಾಹನ ಅದೇ ದೇವದೂತ. ಆಗ ನಾನು ಯುವಕನಾಗಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ನಿಮ್ಮನ್ನು ನಿಮ್ಮ ಜನರು ನಿಮ್ಮ ಊರಿಂದ ಹೊರಗಟ್ಟುವ ಸಮಯದಲ್ಲಿ ನಾನು ಜೀವಂತವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಆಗ ಪ್ರವಾದಿ صلى الله عليه وسلم ಕೇಳಿದರು: "ಏನು ನನ್ನ ಜನರು ನನ್ನನ್ನು ಊರಿಂದ ಹೊರಗಟ್ಟುವುದೇ...?" ವರಖ ಹೇಳಿದರು: "ಹೌದು, ತಾವು ತಂದಂತಹ ಸಂದೇಶದೊಂದಿಗೆ ಬಂದ ಎಲ್ಲಾ ಪ್ರವಾದಿಗಳೂ ದೌರ್ಜನ್ಯಕ್ಕೊಳಗಾಗಿದ್ದಾರೆ. ಆ ದಿನಗಳಲ್ಲಿ ನಾನು ಜೀವಂತವಿದ್ದರೆ ನಾನು ನಿಮಗೆ ಬಲಿಷ್ಠ ಸಹಾಯ ಮಾಡುವೆನು."
ಮಕ್ಕಾದಲ್ಲಿ ಕುರ್ಆನ್ ಅವತೀರ್ಣವು ಸತತವಾಗಿ ಮುಂದುವರಿಯಿತು. ಪ್ರವಾದಿ صلى الله عليه وسلم ರ ಬಳಿಗೆ ಸಂದೇಶವಾಹಕತ್ವದ ವಿವರಣೆಗಳನ್ನು ತಂದಂತೆಯೇ ಜಿಬ್ರೀಲ್ عليه السلام ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನ ಬಳಿಯಿಂದ ಕುರ್ಆನ್ನೊಂದಿಗೆ ಇಳಿಯುತ್ತಿದ್ದರು.
ಪ್ರವಾದಿ صلى الله عليه وسلم ರು ತಮ್ಮ ಜನರನ್ನು ಇಸ್ಲಾಮಿನೆಡೆಗೆ ಆಹ್ವಾನಿಸಲು ಪ್ರಾರಂಭಿಸಿದರು. ಆದರೆ ಅವರ ಜನರು ಅವರನ್ನು ತಿರಸ್ಕರಿಸಿದರು ಹಾಗೂ ಅವರೊಂದಿಗೆ ತರ್ಕಿಸಿದರು. ಸಂದೇಶ ಪ್ರಚಾರವನ್ನು ನಿಲ್ಲಿಸಬೇಕೆಂದು ಹಣ ಮತ್ತು ಅಧಿಕಾರದ ಆಮಿಷವೊಡ್ಡಿದರು. ಆದರೆ ಪ್ರವಾದಿ صلي الله عليه وسلم ರು ಯಾವುದಕ್ಕೂ ಒಪ್ಪಲಿಲ್ಲ. ಗತಕಾಲದ ಸಂದೇಶವಾಹಕರನ್ನು ಅವರ ಜನತೆಯ ಮುಖಂಡರು ಕರೆದಂತೆ ಇವರು ಕೂಡ ಪ್ರವಾದಿ صلي الله عليه وسلم ರನ್ನು ಮಾಟಗಾರ, ಸುಳ್ಳುಗಾರ, ಅಲ್ಲಾಹನ ಮೇಲೆ ಸುಳ್ಳು ಹೆಣೆಯುವವ ಎಂದೆಲ್ಲಾ ಕರೆದರು. ಅವರ ಜೀವನವನ್ನು ಸಂಕುಚಿತಗೊಳಿಸಿದರು. ಅವರ ಪವಿತ್ರ ದೇಹದ ಮೇಲೆ ಕೈ ಮಾಡಿದರು. ಅವರ ಅನುಯಾಯಿಗಳಿಗೆ ಬಹಳ ಕಿರುಕುಳ ಕೊಟ್ಟರು. ಪ್ರವಾದಿ صلي الله عليه وسلم ರವರು ಮಕ್ಕಾದಲ್ಲಿ ಜನರನ್ನು ಅಲ್ಲಾಹನೆಡೆಗೆ ಕರೆಯುತ್ತಲೇ ಇದ್ದರು. ಅವರು ಹಜ್ಜಿನ ಕಾಲದಲ್ಲಿ ಹಾಗೂ ಅರಬರ ಸಂತೆಗಳು ನಡೆಯುವ ಸಂದರ್ಭಗಳಲ್ಲಿ ಜನರನ್ನು ಭೇಟಿಯಾಗಿ ಅವರಿಗೆ ಇಸ್ಲಾಮ್ ಧರ್ಮದ ಬಗ್ಗೆ ತಿಳಿಸುತ್ತಿದ್ದರು. ಅವರು ಭೌತಿಕ ಸುಖದ ಅಥವಾ ಅಧಿಕಾರದ ಆಮಿಷವೊಡ್ಡುತ್ತಿರಲಿಲ್ಲ. ಖಡ್ಗವನ್ನು ತೋರಿಸಿ ಜನರನ್ನು ಭಯಪಡಿಸುತ್ತಲೂ ಇರಲಿಲ್ಲ. ಆಗ ಅವರಲ್ಲಿ ಅಧಿಕಾರ ಅಥವಾ ರಾಜ್ಯವಿರಲಿಲ್ಲ. ಅವರು ಮೊತ್ತಮೊದಲು ಜನರನ್ನು ಇಸ್ಲಾಮಿಗೆ ಕರೆದಾಗಲೇ ಅವರು ತಂದಂತಹ ಒಂದು ಕುರ್ಆನನ್ನು ರಚಿಸಿ ತರುವಂತೆ ಜನರಿಗೆ ಸವಾಲು ಹಾಕಿದ್ದರು. ಅವರು ಕುರ್ಆನ್ನ ಮೂಲಕ ಸವಾಲು ಹಾಕುತ್ತಲೇ ಇದ್ದರು. ಆಗ ಸಹಾಬಿಗಳಲ್ಲಿ ಎಷ್ಟೋ ಮಂದಿ ಅವರಲ್ಲಿ ವಿಶ್ವಾಸವಿಟ್ಟರು. ಮಕ್ಕಾದಲ್ಲಿ ಅಲ್ಲಾಹನು ಅವರನ್ನು ಅತಿ ದೊಡ್ಡ ಪವಾಡದೊಂದಿಗೆ ಗೌರವಿಸಿದನು. ಅದು ಬೈತುಲ್ ಮುಕದ್ದಸ್ಗಿರುವ ರಾತ್ರಿ ಪ್ರಯಾಣ. ನಂತರ ಅವರು ಅಲ್ಲಿಂದ ಆಕಾಶಕ್ಕೆ ಏರಿ ಹೋದರು. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ನಂಬಿಕೆ ಪ್ರಕಾರ ಅಲ್ಲಾಹನು ಪ್ರವಾದಿ ಇಲ್ಯಾಸ್ ಮತ್ತು ಈಸಾ عليهما السلام ರನ್ನು ಕೂಡ ತನ್ನ ಬಳಿ ಆಕಾಶಕ್ಕೆ ಎತ್ತಿಕೊಂಡಿದ್ದನು. ಪ್ರವಾದಿ صلي الله عليه وسلم ರವರು ಆಕಾಶದಲ್ಲಿ ಅಲ್ಲಾಹನಿಂದ ನಮಾಜ್ ನಿರ್ವಹಿಸುವ ಆದೇಶವನ್ನು ಪಡೆದರು. ಮುಸಲ್ಮಾನರು ಈಗ ದಿನನಿತ್ಯ ಐದು ಹೊತ್ತಿನಲ್ಲಿ ನಿರ್ವಹಿಸುತ್ತಿರುವುದು ಇದೇ ನಮಾಜ್ ಆಗಿದೆ. ಮಕ್ಕಾದಲ್ಲೇ ಜರುಗಿದ ಇನ್ನೊಂದು ಪವಾಡ ಚಂದ್ರ ಇಬ್ಭಾಗವಾದದ್ದು. ಇದನ್ನು ಸತ್ಯ ನಿಷೇಧಿಗಳೂ ಕೂಡ ಕಣ್ಣಾರೆ ಕಂಡಿದ್ದರು.
ಖುರೈಷರ ಸತ್ಯನಿಷೇಧಿಗಳು ಪ್ರವಾದಿ صلي الله عليه وسلم ರವರನ್ನು ಸತ್ಯ ಸಂದೇಶದ ಪ್ರಚಾರದಿಂದ ತಡೆಯಲು ಮತ್ತು ಅವರ ವಿರುದ್ಧ ಷಡ್ಯಂತ್ರ ರೂಪಿಸಲು ಹಾಗೂ ಅವರಿಂದ ಜನರನ್ನು ವಿಮುಖಗೊಳಿಸಲು ಎಲ್ಲಾ ವಿಧಾನಗಳನ್ನು ಬಳಸಿದರು. ಪವಾಡಗಳನ್ನು ತೋರಿಸುವಂತೆ ಹೇಳುವ ಮೂಲಕ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದರು. ಅವರೊಂದಿಗೆ ವಾದಿಸಿ ಜನರನ್ನು ಅವರಿಂದ ದೂರಗೊಳಿಸಲು ಸಹಾಯ ಮಾಡುವ ಪುರಾವೆಗಳಿಗಾಗಿ ಯಹೂದರಿಂದ ನೆರವು ಬೇಡಿದರು.
ಸತ್ಯವಿಶ್ವಾಸಿಗಳ ವಿರುದ್ಧ ಖುರೈಷ್ ಸತ್ಯನಿಷೇಧಿಗಳ ಕಿರುಕುಳ ಮುಂದುವರಿದಾಗ, ಪ್ರವಾದಿ صلي الله عليه وسلم ರವರು ಅವರಿಗೆ ಅಬಿಸೀನಿಯಾಗೆ ವಲಸೆ ಹೋಗಲು ಅನುಮತಿ ನೀಡುತ್ತಾ ಹೇಳಿದರು: "ಅಲ್ಲಿ ಯಾರ ಮೇಲೂ ದಬ್ಬಾಳಿಕೆಯಾಗದ ರೀತಿಯಲ್ಲಿ ಆಡಳಿತ ಮಾಡುವ ಒಬ್ಬ ನ್ಯಾಯವಂತ ರಾಜನಿದ್ದಾನೆ." ಅವನು ಕ್ರಿಶ್ಚಿಯನ್ ರಾಜನಾಗಿದ್ದನು. ಸಹಾಬಿಗಳ ಎರಡು ಗುಂಪುಗಳು ಅಬಿಸೀನಿಯಾಗೆ ವಲಸೆ ಹೋದವು. ಸಹಾಬಿಗಳು ಅಬಿಸೀನಿಯಾ ತಲುಪಿ ಅಲ್ಲಿ ನಜ್ಜಾಶೀ ರಾಜನ ಮುಂದೆ ಪ್ರವಾದಿ ಮುಹಮ್ಮದ್ صلى الله عليه وسلم ರವರು ತಂದ ಧರ್ಮವನ್ನು ಪ್ರದರ್ಶಿಸಿದರು. ಆಗ ರಾಜ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಾ ಹೇಳಿದನು: "ಅಲ್ಲಾಹನಾಣೆ! ಇದು ಮತ್ತು ಮೂಸಾ عليه السلام ರವರು ತಂದ ಧರ್ಮ ಒಂದೇ ಮಾಡದಿಂದ ಹೊರಹೊಮ್ಮಿದೆ." ಪ್ರವಾದಿ صلى الله عليه وسلم ರಿಗೆ ಮತ್ತು ಸಹಾಬಾಗಳಿಗೆ ಜನರು ತೊಂದರೆ ಕೊಡುವುದನ್ನು ಮುಂದುವರಿಸಿದರು.
ಹಜ್ಜ್ನ ಸಮಯದಲ್ಲಿ ಮದೀನದಿಂದ ಬಂದ ಕೆಲವರು ಪ್ರವಾದಿ صلي الله عليه وسلم ರವರಲ್ಲಿ ವಿಶ್ವಾಸವಿಟ್ಟಿದ್ದರು. ಮದೀನಕ್ಕೆ ಬಂದರೆ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಸಹಾಯ ಮಾಡುವೆವು ಎಂದು ಅವರು ಪ್ರವಾದಿ صلى الله عليه وسلم ರೊಡನೆ ಪ್ರತಿಜ್ಞೆ ಮಾಡಿದರು. ಆಗ ಮದೀನವನ್ನು ಯಸ್ರಿಬ್ ಎಂದು ಕರೆಯಲಾಗುತ್ತಿತ್ತು. ಮಕ್ಕಾದಲ್ಲಿ ಉಳಿದ ಸಹಾಬಿಗಳಿಗೆ ಮದೀನಕ್ಕೆ ಹಿಜ್ರ ಹೋಗಲು ಪ್ರವಾದಿ صلى الله عليه وسلم ರವರು ಅನುಮತಿ ನೀಡಿದರು. ಅವರು ಮದೀನಾಕ್ಕೆ ಹಿಜ್ರ ಹೋದರು. ಮದೀನದಲ್ಲಿ ಇಸ್ಲಾಂ ಧರ್ಮವು ಹಬ್ಬಿತು. ಎಲ್ಲಿಯವರೆಗೆಂದರೆ ಅಲ್ಲಿನ ಪ್ರತಿಯೊಂದು ಮನೆಗೂ ಇಸ್ಲಾಂ ಧರ್ಮವು ಪ್ರವೇಶಿಸಿತು.
ಮಕ್ಕಾದಲ್ಲಿ ಜನರನ್ನು ಅಲ್ಲಾಹನೆಡೆಗೆ ಆಹ್ವಾನಿಸುತ್ತಾ ಹದಿಮೂರು ವರ್ಷಗಳನ್ನು ಕಳೆದ ನಂತರ ಅಲ್ಲಾಹನು ಪ್ರವಾದಿ صلى الله عليه وسلم ರಿಗೆ ಮದೀನಾಕ್ಕೆ ವಲಸೆ ಹೋಗಲು ಅನುಮತಿ ನೀಡಿದನು. ಪ್ರವಾದಿ صلي الله عليه وسلم ರವರು ವಲಸೆ ಹೋಗಿ ಅಲ್ಲಿ ಜನರನ್ನು ಅಲ್ಲಾಹನ ಕಡೆಗೆ ಆಹ್ವಾನಿಸುವುದನ್ನು ಮುಂದುವರಿಸಿದರು. ಅಲ್ಲಿ ಇಸ್ಲಾಮಿನ ಆದೇಶಗಳು ಸ್ವಲ್ಪ ಸ್ವಲ್ಪವಾಗಿ ನಿರಂತರ ಅವತೀರ್ಣವಾಗುತ್ತಿದ್ದವು. ಅವರು ವಿಭಿನ್ನ ಬುಡಕಟ್ಟುಗಳ ಮತ್ತು ಸಾಮ್ರಾಜ್ಯಗಳ ಮುಖಂಡರನ್ನು ಇಸ್ಲಾಮಿಗೆ ಕರೆಯಲು ಇಸ್ಲಾಮಿನ ಸಂದೇಶದೊಂದಿಗೆ ತಮ್ಮ ದೂತರನ್ನು ಕಳುಹಿಸತೊಡಗಿದರು. ರೋಮನ್ ದೊರೆ, ಪರ್ಶಿಯನ್ ದೊರೆ ಮತ್ತು ಈಜಿಪ್ಟಿನ ದೊರೆ ಅವರಲ್ಲಿ ಸೇರಿದ್ದರು.
ಒಮ್ಮೆ ಮದೀನಾದಲ್ಲಿ ಸೂರ್ಯಗ್ರಹಣ ಸಂಭವಿಸಿತು. ಜನರು ಭಯಭೀತರಾದರು. ಅನಿರೀಕ್ಷಿತವಾಗಿ ಅದೇ ದಿನ ಪ್ರವಾದಿ صلي الله عليه وسلم ರವರ ಮಗ ಇಬ್ರಾಹೀಮ್ ನಿಧನರಾದರು. ಇಬ್ರಾಹೀಮರ ಮರಣದಿಂದಾಗಿ ಸೂರ್ಯಗ್ರಹಣ ಸಂಭವಿಸಿತೆಂದು ಜನರು ಹೇಳ ತೊಡಗಿದರು. ಆಗ ಪ್ರವಾದಿ صلي الله عليه وسلم ರವರು ಹೇಳಿದರು: "ಯಾರದೇ ಹುಟ್ಟು ಅಥವಾ ಸಾವಿನಿಂದ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸುವುದಿಲ್ಲ. ಬದಲಾಗಿ, ಅವೆರಡೂ ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಅಲ್ಲಾಹನು ಅವುಗಳ ಮೂಲಕ ತನ್ನ ದಾಸರನ್ನು ಭಯಪಡಿಸುತ್ತಾನೆ.", ಒಂದು ವೇಳೆ ಪ್ರವಾದಿ صلي الله عليه وسلم ರವರು ಸುಳ್ಳುಗಾರನಾಗಿದ್ದರೆ ತನ್ನನ್ನು ನಿಷೇಧಿಸುವ ಜನರಿಗೆ (ಈ ಘಟನೆಯ ಮೂಲಕ) ಬೆದರಿಸಲು ಆತುರಪಡುತ್ತಿದ್ದರು ಮತ್ತು "ನನ್ನ ಮಗನ ಮರಣದಿಂದ ಸೂರ್ಯಗ್ರಹಣವಾಗಬಹುದಾದರೆ ನನ್ನನ್ನು ನಿಷೇಧಿಸುವವರಿಗೆ ಏನು ಸಂಭವಿಸಬಹುದು" ಎಂದು ಕೇಳುತ್ತಿದ್ದರು.
ಅಲ್ಲಾಹನು ಪ್ರವಾದಿ صلي الله عليه وسلم ರವರನ್ನು ಎಲ್ಲಾ ರೀತಿಯ ಸರ್ವಶ್ರೇಷ್ಠ ಸ್ವಭಾವಗಳಿಂದ ಸುಂದರಗೊಳಿಸಿದ್ದಾನೆ. ಅವನು ಅವರನ್ನು ಹೀಗೆ ಬಣ್ಣಿಸುತ್ತಾನೆ: "ಖಂಡಿತವಾಗಿಯೂ ತಾವು ಸರ್ವಶ್ರೇಷ್ಠ ಸ್ವಭಾವದಲ್ಲಿರುವಿರಿ." [ಅಲ್-ಖಲಮ್:4] ಪ್ರವಾದಿ صلي الله عليه وسلم ರವರು ಸತ್ಯವಂತಿಕೆ, ಪ್ರಾಮಾಣಿಕತೆ, ಧೈರ್ಯ, ನ್ಯಾಯ, ವಿರೋಧಿಗಳೊಂದಿಗೂ ಸಹ ನಿಷ್ಠೆ ತೋರುವವರು, ಉದಾರತೆ ಮುಂತಾದ ಉತ್ತಮ ಸ್ವಭಾವಗಳನ್ನು ಹೊಂದಿದ್ದರು. ಅವರು ಬಡವರಿಗೆ, ನಿರ್ಗತಿಕರಿಗೆ, ವಿಧವೆಯರಿಗೆ ಹಾಗೂ ಬೇಡುವವರಿಗೆ ದಾನ-ಧರ್ಮ ಮಾಡುವುದನ್ನು ಇಷ್ಟಪಡುತ್ತಿದ್ದರು. ಜನರಿಗೆ ಮಾರ್ಗದರ್ಶನ ಮಾಡಲು, ದಯೆ ತೋರಲು ಮತ್ತು ವಿನಯತೆ ತೋರಲು ಅವರು ಬಹಳ ಆಸಕ್ತಿ ವಹಿಸುತ್ತಿದ್ದರು. ಎಲ್ಲಿಯವರೆಗೆಂದರೆ ಒಬ್ಬ ಅಪರಿಚಿತ ವ್ಯಕ್ತಿ ಪ್ರವಾದಿ صلي الله عليه وسلم ರವರನ್ನು ಹುಡುಕುತ್ತಾ ಅವರ ಸಹಚರರೊಡನೆ, ನಿಮ್ಮಲ್ಲಿ ಮುಹಮ್ಮದ್ ಯಾರು ಎಂದು ಕೇಳುತ್ತಿದ್ದರು. ಪ್ರವಾದಿ صلى الله عليه وسلم ರವರು ಅವರ ಮಧ್ಯದಲ್ಲೇ ಇದ್ದರೂ ಸಹ ಅವರನ್ನು (ಅವರ ಸರಳತೆಯಿಂದಾಗಿ) ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ.
ಅವರ ಜೀವನ ಚರಿತ್ರೆಯು ಶತ್ರುಗಳು, ಮಿತ್ರರು, ಆಪ್ತರು, ದೂರದವರು, ಹಿರಿಯರು, ಕಿರಿಯರು, ಮಹಿಳೆಯರು, ಪುರುಷರು, ಪ್ರಾಣಿಗಳು, ಪಕ್ಷಿಗಳು ಮುಂತಾದ ಎಲ್ಲರ ಜೊತೆ ಅವರ ವರ್ತನೆಯು ಸಮಗ್ರತೆ ಹಾಗೂ ಉದಾರತೆಯಲ್ಲಿ ಒಂದು ದೊಡ್ಡ ಮಾದರಿಯಾಗಿದೆ.
ಅಲ್ಲಾಹು ಪ್ರವಾದಿ صلي الله عليه وسلم ರವರಿಗೆ ಧರ್ಮವನ್ನು ಪೂರ್ತೀಕರಿಸಿಕೊಟ್ಟು, ಅವರು ಅಲ್ಲಾಹನ ಸಂದೇಶವನ್ನು ಸಂಪೂರ್ಣವಾಗಿ ಜನರಿಗೆ ತಲುಪಿಸಿದ ನಂತರ, ತಮ್ಮ 63ನೇ ವಯಸ್ಸಿನಲ್ಲಿ ಅವರು ಈ ಭೂಲೋಕಕ್ಕೆ ವಿದಾಯಕೋರಿದರು. ಅವರು ಪ್ರವಾದಿತ್ವಕ್ಕೆ ಮುಂಚೆ 40 ವರ್ಷ ಮತ್ತು ಪ್ರವಾದಿ ಹಾಗೂ ಸಂದೇಶವಾಹಕರಾಗಿ 23 ವರ್ಷ ಬದುಕಿದರು. ಅವರನ್ನು ಮದೀನಾದಲ್ಲಿ ದಫನ ಮಾಡಲಾಯಿತು. ಅವರು ಸವಾರಿ ಮಾಡುತ್ತಿದ್ದ ಒಂದು ಬಿಳಿ ಹೇಸರಗತ್ತೆ ಹಾಗೂ ಯಾತ್ರಿಕರಿಗೆ ದಾನವಾಗಿ ಬಿಟ್ಟುಕೊಟ್ಟ ಒಂದು ತುಂಡು ಭೂಮಿಯ ಹೊರತು ಅವರು ಯಾವುದೇ ಹಣ ಹಾಗೂ ಸಂಪತ್ತನ್ನು ಉತ್ತರಾಧಿಕಾರವಾಗಿ ಬಿಟ್ಟು ಹೋಗಲಿಲ್ಲ.
ಅಸಂಖ್ಯಾತ ಜನರು ಇಸ್ಲಾಂ ಸ್ವೀಕರಿಸಿ, ಅವರಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸಿದ್ದರು. ಒಂದು ಲಕ್ಷಕ್ಕಿಂತಲೂ ಹೆಚ್ಚು ಸಹಾಬಾಗಳು ಅವರೊಡನೆ ವಿದಾಯದ ಹಜ್ಜ್ನಲ್ಲಿ ಪಾಲ್ಗೊಂಡಿದ್ದರು. ಇದು ಅವರ ಮರಣದ ಸುಮಾರು ಮೂರು ತಿಂಗಳ ಮೊದಲು ನಡೆದ ಹಜ್ಜ್. ಬಹುಶಃ ಇದು ಅವರ ಧರ್ಮದ ರಕ್ಷಣೆ ಹಾಗೂ ಪ್ರಸಾರದ ರಹಸ್ಯಗಳಲ್ಲಿ ಸೇರಿದ್ದಾಗಿರಬಹುದು. ಇಸ್ಲಾಂ ಧರ್ಮದ ಮೌಲ್ಯಗಳು ಹಾಗೂ ತತ್ವಗಳ ಮೇಲೆ ಅವರು ಬೆಳೆಸಿದ ಅವರ ಸಹಾಬಾಗಳು ನ್ಯಾಯ, ನಿಷ್ಠೆ, ದೇವಭಯ, ಧರ್ಮನಿಷ್ಠೆ ಮತ್ತು ತಾವು ವಿಶ್ವಾಸವಿಟ್ಟಿರುವ ಈ ಮಹಾನ್ ಧರ್ಮಕ್ಕೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡ ಅತ್ಯುತ್ತಮ ಸಹಾಬಾಗಳಾಗಿದ್ದರು.
ಅವರ ಸಹಾಬಾಗಳ ಪೈಕಿ ವಿಶ್ವಾಸ, ಜ್ಞಾನ, ಕರ್ಮ, ನಿಷ್ಕಳಂಕತೆ, ದೃಢವಿಶ್ವಾಸ, ಧೈರ್ಯ, ತ್ಯಾಗ ಹಾಗೂ ಉದಾರತೆಯಲ್ಲಿ ಅತ್ಯುನ್ನತ ಪದವಿಗೇರಿದವರು: ಅಬೂಬಕರ್ ಸಿದ್ದೀಕ್, ಉಮರ್ ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಫಾನ್, ಅಲೀ ಬಿನ್ ಅಬೀ ತಾಲಿಬ್ رضي الله عنهم ಆಗಿದ್ದಾರೆ. ಇವರೆಲ್ಲರೂ ಆದ್ಯಕಾಲದಲ್ಲಿ ಅವರಲ್ಲಿ ವಿಶ್ವಾಸವಿಟ್ಟು ಅವರನ್ನು ದೃಢೀಕರಿಸಿದವರಾಗಿದ್ದರು. ಇವರು ಪ್ರವಾದಿಯವರ ಮರಣಾನಂತರ ಇಸ್ಲಾಮಿನ ಧ್ವಜವನ್ನು ಎತ್ತಿ ಹಿಡಿದ ಅವರ ಉತ್ತರಾಧಿಕಾರಿಗಳಾಗಿದ್ದರು. ಅವರಿಗೆ ಪ್ರವಾದಿತ್ವದ ಯಾವುದೇ ವಿಶೇಷತೆಗಳಿರಲಿಲ್ಲ. ಪ್ರವಾದಿಯವರು ಯಾವುದೇ ವಿಷಯದಲ್ಲೂ ಇವರಿಗೆ ಇತರ ಸಹಾಬಿಗಳಿಗಿಂತ ಹೆಚ್ಚಿನ ವಿಶೇಷತೆ ನೀಡಿರಲಿಲ್ಲ.
ಪ್ರವಾದಿ صلى الله عليه وسلم ರವರು ತಂದ ಗ್ರಂಥವನ್ನು (ಕುರ್ಆನ್), ಅವರ ಚರ್ಯೆಗಳ ಸಂಗ್ರಹವಾದ ಸುನ್ನತ್ತನ್ನು, ಅವರ ಜೀವನಚರಿತ್ರೆಯನ್ನು ಮತ್ತು ಅವರ ಕ್ರಿಯೆಗಳನ್ನು ಅವರು ಮಾತನಾಡಿದ ಅವರ ಭಾಷೆಯಲ್ಲೇ ಅಲ್ಲಾಹನು ಸಂರಕ್ಷಿಸಿದ್ದಾನೆ. ಇತಿಹಾಸದುದ್ದಕ್ಕೂ ಪ್ರವಾದಿ صلى الله عليه وسلم ರವರ ಜೀವನ ಚರಿತ್ರೆಯನ್ನು ಸಂರಕ್ಷಿಸಲಾದಂತೆ ಇತರ ಯಾರ ಜೀವನ ಚರಿತ್ರೆಯನ್ನೂ ಸಂರಕ್ಷಿಸಲಾಗಿಲ್ಲ. ಅಷ್ಟೇ ಅಲ್ಲ, ಅವರು ಹೇಗೆ ಮಲಗುತ್ತಿದ್ದರು, ಹೇಗೆ ತಿನ್ನುತ್ತಿದ್ದರು, ಹೇಗೆ ಕುಡಿಯುತ್ತಿದ್ದರು ಹಾಗೂ ಹೇಗೆ ನಗುತ್ತಿದ್ದರು ಎಂಬುದನ್ನು ಸಹ ಸಂರಕ್ಷಿಸಲಾಗಿದೆ. ಅವರು ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಹೇಗೆ ವರ್ತಿಸುತ್ತಿದ್ದರು? ಪ್ರವಾದಿ صلى الله عليه وسلم ರವರ ಎಲ್ಲಾ ಚಲನವಲನಗಳು ಅವರ ಜೀವನ ಚರಿತ್ರೆಯಲ್ಲಿ ದಾಖಲಿಸಿ ಸಂರಕ್ಷಿಸಲಾಗಿದೆ. ಅವರೊಬ್ಬ ಮನುಷ್ಯ ರೂಪದ ಪ್ರವಾದಿ. ಅಲ್ಲಾಹನ ಪ್ರಭುತ್ವದಲ್ಲಿ ಅವರಿಗೆ ಯಾವುದೇ ಪಾಲಿಲ್ಲ. ಅವರು ಸ್ವತಃ ಯಾವುದೇ ಲಾಭ ಹಾಗೂ ನಷ್ಟವನ್ನು ಅಧೀನದಲ್ಲಿಟ್ಟುಕೊಂಡಿಲ್ಲ.
ಭೂಮಿಯ ನಾನಾ ಭಾಗಗಳಲ್ಲಿ ಬಹುದೇವ ವಿಶ್ವಾಸ, ಸತ್ಯನಿಷೇಧ ಮತ್ತು ಅಜ್ಞಾನವು ವ್ಯಾಪಕವಾಗಿ ಹಬ್ಬಿದಾಗ ಅಲ್ಲಾಹನು ಪ್ರವಾದಿ ಮುಹಮ್ಮದ್ صلى الله عليه وسلم ರವರನ್ನು ಕಳುಹಿಸಿದನು. ಗ್ರಂಥದವರಲ್ಲಿ ಬಾಕಿಯುಳಿದ ಕೆಲವರ ಹೊರತು ಅಲ್ಲಾಹನ ಜೊತೆ ಇತರರನ್ನು ಸಹಭಾಗಿಯನ್ನಾಗಿ ಮಾಡದೆ ಕೇವಲ ಏಕೈಕ ಅಲ್ಲಾಹನ ಆರಾಧನೆ ಮಾಡುವ ಯಾವೊಬ್ಬ ವ್ಯಕ್ತಿಯೂ ಭೂಲೋಕದಲ್ಲಿರಲಿಲ್ಲ. ಆಗ ಅಲ್ಲಾಹನು ತನ್ನ ಸಂದೇಶವಾಹಕರಾದ ಮುಹಮ್ಮದ್ صلى الله عليه وسلم ರವರನ್ನು ಎಲ್ಲಾ ಪ್ರವಾದಿಗಳು ಹಾಗೂ ಸಂದೇಶವಾಹಕರಿಗೆ ಮುದ್ರೆಯಾಗಿ (ಕೊನೆಯ ಪ್ರವಾದಿಯಾಗಿ) ಕಳುಹಿಸಿದನು. ಜನರನ್ನು ಬಹುದೇವಾರಾಧನೆ, ಸತ್ಯನಿಷೇಧ ಮತ್ತು ಅಜ್ಞಾನದ ಅಂಧಕಾರಗಳಿಂದ ತೌಹೀದ್ ಹಾಗೂ ವಿಶ್ವಾಸದ ಪ್ರಕಾಶಕ್ಕೆ ಹೊರತರಲು ಅಲ್ಲಾಹನು ಅವರನ್ನು ಇಡೀ ಮಾನವಕುಲಕ್ಕಿರುವ ಮಾರ್ಗದರ್ಶನ ಮತ್ತು ಸತ್ಯಧರ್ಮದೊಂದಿಗೆ, ಅದು(ಸತ್ಯಧರ್ಮವು) ಇತರ ಎಲ್ಲಾ ಧರ್ಮಗಳ ಮೇಲೂ ಮೇಲುಗೈ ಸಾಧಿಸಲೆಂದು ಕಳುಹಿಸಿದನು. ಅವರ ಸಂದೇಶವು ಹಿಂದಿನ ಪ್ರವಾದಿಗಳ عليهم السلام ಸಂದೇಶಗಳನ್ನು ಸಂಪೂರ್ಣಗೊಳಿಸುವಂತದ್ದಾಗಿದೆ.
ನೂಹ್, ಇಬ್ರಾಹೀಮ್, ಸುಲೈಮಾನ್, ದಾವೂದ್, ಈಸಾ عليهم السلام ಮುಂತಾದ ಪ್ರವಾದಿಗಳು ಮತ್ತು ಸಂದೇಶವಾಹಕರು ಯಾವುದರ ಕಡೆಗೆ ಜನರನ್ನು ಆಹ್ವಾನಿಸಿದರೋ ಅದರ ಕಡೆಗೇ ಅವರು ಕೂಡ ತಮ್ಮ ಜನರನ್ನು ಆಹ್ವಾನಿಸಿದರು. ಅಂದರೆ ಪರಿಪಾಲಕನಾದ ಪ್ರಭು ಸೃಷ್ಟಿಕರ್ತನು, ಜೀವನಾಧಾರ ನೀಡುವವನು, ಜೀವಂತಗೊಳಿಸುವವನು, ಮೃತಪಡಿಸುವವನು ಮತ್ತು ಸರ್ವ ಆಧಿಪತ್ಯದ ಒಡೆಯನಾದ ಅಲ್ಲಾಹನಾಗಿದ್ದಾನೆ, ಅವನೇ ಕಾರ್ಯಗಳನ್ನು ನಿಯಂತ್ರಿಸುವವನು, ಅವನು ಮಹಾ ಕರುಣಾಮಯಿ ಮತ್ತು ಬಹಳ ದಯೆ ತೋರುವವನು, ಈ ಜಗತ್ತಿನಲ್ಲಿ ನಮಗೆ ಗೋಚರವಾಗಿರುವ ಮತ್ತು ಅಗೋಚರವಾಗಿರುವ ಸರ್ವ ವಸ್ತುಗಳನ್ನು ಸೃಷ್ಟಿಸಿದವನು ಅವನೇ ಆಗಿದ್ದಾನೆ, ಅಲ್ಲಾಹನ ಹೊರತಾದ ಎಲ್ಲವೂ ಅವನ ಸೃಷ್ಟಿಗಳಾಗಿವೆ ಎಂಬ ವಿಶ್ವಾಸದ ಕಡೆಗೆ.
ಅದೇ ರೀತಿ ಅವರು ಏಕೈಕ ಅಲ್ಲಾಹನನ್ನು ಆರಾಧಿಸಿರಿ ಹಾಗೂ ಅವನ ಹೊರತಾಗಿರುವ ಮಿಥ್ಯ ದೇವರುಗಳ ಆರಾಧನೆಯನ್ನು ಬಿಟ್ಟುಬಿಡಿರೆಂದು ಕರೆ ನೀಡಿದರು. ಅಲ್ಲಾಹನು ಏಕೈಕನಾಗಿದ್ದಾನೆ ಅವನ ಆರಾಧನೆಯಲ್ಲಿ, ಆಧಿಪತ್ಯದಲ್ಲಿ, ಸೃಷ್ಟಿಯಲ್ಲಿ ಅಥವಾ ಅವನ ಕಾರ್ಯ ನಿಯಂತ್ರಣದಲ್ಲಿ ಅವನ ಜೊತೆ ಯಾರೂ ಸಹಭಾಗಿಗಳಿಲ್ಲವೆಂದು ಅವರು ಬಹಳ ಸ್ಪಷ್ಟವಾಗಿ ಜನರಿಗೆ ವಿವರಿಸಿದರು. ಸರ್ವಶಕ್ತನಾದ ಅಲ್ಲಾಹನು ಯಾರಿಂದಲೂ ಜನಿಸಿಲ್ಲ, ಅವನು ಯಾರಿಗೂ ಜನ್ಮ ನೀಡಿಲ್ಲ, ಅವನಿಗೆ ಸರಿಸಮಾನರಾಗಿ ಅಥವಾ ಸಾದೃಶ್ಯರಾಗಿ ಯಾರೂ ಇಲ್ಲ, ಅವನು ತನ್ನ ಸೃಷ್ಟಿಗಳಲ್ಲಿ ಯಾರಲ್ಲೂ ಅವತಾರವಾಗುವುದಿಲ್ಲ ಮತ್ತು ಅವನು ಯಾರ ರೂಪವನ್ನೂ ಪಡೆಯುವುದಿಲ್ಲವೆಂದು ಅವರು ಜನರಿಗೆ ವಿವರಿಸಿದರು.
ಇಬ್ರಾಹೀಮ್ ಮತ್ತು ಮೂಸಾ عليهما السلام ರ ಗ್ರಂಥಗಳಲ್ಲಿ, ತೌರಾತ್, ಜಬೂರ್, ಹಾಗೂ ಇಂಜೀಲ್ ಮುಂತಾದ ಎಲ್ಲಾ ದೈವಿಕ ಗ್ರಂಥಗಳಲ್ಲಿ ವಿಶ್ವಾಸವಿಡಲು ಅವರು ಕರೆ ನೀಡಿದರು. ಅದೇ ರೀತಿ ಎಲ್ಲಾ ಪ್ರವಾದಿಗಳ ಮೇಲೆ عليهم السلام ವಿಶ್ವಾಸವಿಡಲು ಕರೆ ನೀಡಿದರು. ಒಬ್ಬ ಪ್ರವಾದಿಯನ್ನು ನಿಷೇಧಿಸಿದರೆ ಅದು ಎಲ್ಲಾ ಪ್ರವಾದಿಗಳನ್ನು ನಿಷೇಧಿಸುವುದಕ್ಕೆ ಸಮ ಎಂದು ಪರಿಗಣಿಸಿದರು.
ಅವರು ಅಲ್ಲಾಹನ ಕರುಣೆಯ ಬಗ್ಗೆ ಮತ್ತು ಇಹಲೋಕದಲ್ಲಿ ಅಲ್ಲಾಹನೇ ಅವರ ಅವಶ್ಯಕತೆಗಳನ್ನು ಪೂರೈಸುವವನು, ಅಲ್ಲಾಹನು ಪರಿಪಾಲಕನು ಹಾಗೂ ದಯೆ ತೋರುವವನು ಎಂದು ಇಡೀ ಮಾನವ ಕುಲಕ್ಕೆ ಶುಭವಾರ್ತೆ ನೀಡಿದರು. ಪುನರುತ್ಥಾನ ದಿನದಂದು ಸೃಷ್ಟಿಗಳೆಲ್ಲರನ್ನೂ ಅವರ ಸಮಾಧಿಗಳಿಂದ ಎಬ್ಬಿಸಿ ಅವನೊಬ್ಬನೇ ಅವರನ್ನು ವಿಚಾರಣೆಗೆ ಒಳಪಡಿಸುವನು ಮತ್ತು ಅವನೇ ಸತ್ಯ ವಿಶ್ವಾಸಿಗಳಿಗೆ ಅವರು ಮಾಡಿದ ಸತ್ಕರ್ಮಗಳಿಗೆ ಹತ್ತು ಪಟ್ಟು ಪ್ರತಿಫಲವನ್ನು ಮತ್ತು ಅವರು ಮಾಡಿದ ಕೆಡುಕಿಗೆ ಅದಕ್ಕೆ ಸಮಾನವಾದ ಶಿಕ್ಷೆಯನ್ನು ನೀಡುವನು. ಅವರಿಗೆ ಪರಲೋಕದಲ್ಲಿ ಶಾಶ್ವತವಾದ ಸುಖಗಳಿವೆ. ಆದರೆ ಸತ್ಯವನ್ನು ನಿಷೇಧಿಸಿ ದುಷ್ಕೃತ್ಯವೆಸಗಿದವರು ಇಹಲೋಕದಲ್ಲೂ ಪರಲೋಕದಲ್ಲೂ ಅದರ ಕೆಟ್ಟ ಪ್ರತಿಫಲವನ್ನು ಪಡೆಯುವರು.
ಪ್ರವಾದಿ ಮುಹಮ್ಮದ್ صلى الله عليه وسلم ರವರು ತಮ್ಮ ಸಂದೇಶದಲ್ಲಿ ತಮ್ಮ ಗೋತ್ರವನ್ನು, ತಮ್ಮ ನಗರವನ್ನು, ಅಥವಾ ತಮ್ಮ ಗೌರವಾನ್ವಿತ ವ್ಯಕ್ತಿತ್ವವನ್ನು ಶ್ಲಾಘಿಸಲಿಲ್ಲ. ಬದಲಾಗಿ, ಪವಿತ್ರ ಕುರ್ಆನ್ನಲ್ಲಿ ಅವರ ಹೆಸರಿಗಿಂತಲೂ ಹೆಚ್ಚು ನೂಹ್, ಇಬ್ರಾಹೀಮ್, ಮೂಸಾ, ಈಸಾ عليهم السلام ಮುಂತಾದ ಪ್ರವಾದಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅವರ ತಾಯಿಯ ಅಥವಾ ಮಡದಿಯರ ಹೆಸರುಗಳನ್ನು ಪವಿತ್ರ ಕುರ್ಆನ್ನಲ್ಲಿ ಉಲ್ಲೇಖಿಸಲಾಗಿಲ್ಲ. ಬದಲಾಗಿ, ಪವಿತ್ರ ಕುರ್ಆನ್ನಲ್ಲಿ ಮೂಸಾ عليهم السلامರ ತಾಯಿಯ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಬಂದಿದೆ. ಅದೇ ರೀತಿ ಮರ್ಯಮ್ عليها السلام ರ ಹೆಸರು 35 ಬಾರಿ ಉಲ್ಲೇಖಿಸಲಾಗಿದೆ.
ಧರ್ಮಶಾಸ್ತ್ರ, ಬುದ್ಧಿ ಮತ್ತು ಪ್ರಕೃತಿಗೆ ವಿರುದ್ಧವಾದ ಹಾಗೂ ಆರೋಗ್ಯಕರ ಸ್ವಭಾವವನ್ನು ನಿರಾಕರಿಸುವ ಎಲ್ಲದ್ದರಿಂದಲೂ ಪ್ರವಾದಿ ಮುಹಮ್ಮದ್ صلي الله عليه وسلم ರನ್ನು ಸಂರಕ್ಷಿಸಲಾಗಿದೆ. ಏಕೆಂದರೆ ಪ್ರವಾದಿಗಳು عليهم السلام ಅಲ್ಲಾಹನ ಸಂದೇಶವನ್ನು ತಲುಪಿಸುವ ವಿಷಯದಲ್ಲಿ ಪ್ರಮಾದಗಳಿಂದ ಸಂರಕ್ಷಣೆ ನೀಡಲ್ಪಟ್ಟವರಾಗಿದ್ದಾರೆ ಮತ್ತು ಅಲ್ಲಾಹನ ಆದೇಶಗಳನ್ನು ಅವನ ದಾಸರಿಗೆ ತಲುಪಿಸುವ ಹೊಣೆಯನ್ನು ಅವರಿಗೆ ವಹಿಸಿಕೊಡಲಾಗಿದೆ. ಅಲ್ಲಾಹನ ರುಬೂಬಿಯ್ಯತ್ (ಪ್ರಭುತ್ವ) ಅಥವಾ ಉಲೂಹಿಯ್ಯತ್ (ಆರಾಧನೆ)ನ ವಿಶೇಷತೆಗಳಲ್ಲಿ ಸಂದೇಶವಾಹಕರಿಗೆ ಯಾವುದೇ ಪಾಲಿಲ್ಲ. ಬದಲಾಗಿ ಇತರೆಲ್ಲಾ ಮನುಷ್ಯರಂತೆ ಅವರು ಕೂಡ ಮನುಷ್ಯರಾಗಿದ್ದಾರೆ. ಅಲ್ಲಾಹನು ಅವರಿಗೆ ತನ್ನ ಸಂದೇಶಗಳನ್ನು ದಿವ್ಯವಾಣಿಯ ಮೂಲಕ ತಿಳಿಸುತ್ತಾನೆ.
ಪ್ರವಾದಿ ಮುಹಮ್ಮದ್ صلى الله عليه وسلم ರವರ ಸಂದೇಶವು ಅಲ್ಲಾಹನ ವತಿಯ ದಿವ್ಯವಾಣಿಯಾಗಿದೆ ಎಂಬುದಕ್ಕೆ ಅತ್ಯಂತ ದೊಡ್ಡ ಪುರಾವೆಯು ಅದು ಅವರ ಜೀವನ ಕಾಲದಲ್ಲಿದ್ದಂತೆ ಇಂದಿಗೂ ಅದೇ ರೂಪದಲ್ಲಿ ಅಸ್ತಿತ್ವದಲ್ಲಿರುವುದು ಮತ್ತು ಶತ ಕೋಟಿಗಿಂತಲೂ ಹೆಚ್ಚು ಮುಸ್ಲಿಮರು ಅದರಲ್ಲಿ ಯಾವುದೇ ಬದಲಾವಣೆ ಮಾಡದೆ ಅಥವಾ ಅದನ್ನು ವಿರೂಪಗೊಳಿಸದೆ ನಮಾಜ್, ಜಕಾತ್, ಉಪವಾಸ, ಹಜ್ಜ್ ಮುಂತಾದ ಅದರ ಕಡ್ಡಾಯ ಕರ್ಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು.
ಅಲ್ಲಾಹು ತನ್ನ ಸಂದೇಶವಾಹಕರನ್ನು ಅವರ ಪ್ರವಾದಿತ್ವವನ್ನು ಸಾಬೀತುಪಡಿಸುವ ನಿದರ್ಶನಗಳೊಂದಿಗೆ ಬಲಪಡಿಸುತ್ತಾನೆ. ಅವರ ಸಂದೇಶಕ್ಕೆ ಸಾಕ್ಷಿಯಾಗಿ ಪುರಾವೆ ಮತ್ತು ಆಧಾರಗಳನ್ನು ನೆಲೆನಿಲ್ಲಿಸುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲಾ ಪ್ರವಾದಿಗಳಿಗೂ ಮನುಷ್ಯರು ಅವರ ಮೇಲೆ ವಿಶ್ವಾಸವಿಡಲು ಸಾಕಾಗುವಂತಹ ಪವಾಡಗಳನ್ನು ನೀಡಿದ್ದಾನೆ. ಪ್ರವಾದಿಗಳಿಗೆ ನೀಡಲಾದ ಪವಾಡಗಳಲ್ಲಿ ಅತ್ಯಂತ ದೊಡ್ಡ ಪವಾಡ ನಮ್ಮ ಪ್ರವಾದಿ ಮುಹಮ್ಮದ್ صلي الله عليه وسلم ರವರಿಗೆ ನೀಡಲಾದ ಪವಾಡವಾಗಿದೆ. ಅಲ್ಲಾಹನು ಅವರಿಗೆ ಪವಿತ್ರ ಕುರ್ಆನ್ ಅನ್ನು ನೀಡಿದನು. ಅದು ಸಂದೇಶವಾಹಕರ ಪವಾಡಗಳ ಪೈಕಿ ಪುನರುತ್ಥಾನದ ದಿನದವರೆಗೂ ಶಾಶ್ವತವಾಗಿರುವ ಪವಾಡವಾಗಿದೆ. ಅದನ್ನು ಅಲ್ಲಾಹನು ಮಹಾ ದೃಷ್ಟಾಂತಗಳ (ಪವಾಡಗಳ) ಮೂಲಕ ಬೆಂಬಲಿಸಿದ್ದಾನೆ. ಪ್ರವಾದಿ ಮುಹಮ್ಮದ್ صلى الله عليه وسلم ರವರಿಗೆ ಹಲವಾರು ಪವಾಡಗಳನ್ನು ನೀಡಲಾಗಿದೆ. ಅವುಗಳಲ್ಲಿ ಕೆಲವು ಹೀಗಿವೆ:
ಇಸ್ರಾ ಮತ್ತು ಮೆಅರಾಜ್, ಚಂದ್ರ ಇಬ್ಭಾಗವಾದದ್ದು, ಬರಗಾಲವುಂಟಾದಾಗ ಪ್ರವಾದಿಯವರು ಮಳೆಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿದ ನಂತರ ಹಲವಾರು ಬಾರಿ ಮಳೆ ಸುರಿದದ್ದು.
ಆಹಾರ ಹೆಚ್ಚಾದದ್ದು, ಸ್ವಲ್ಪವೇ ಇದ್ದ ನೀರು ಹೆಚ್ಚಾದದ್ದು ಮತ್ತು ಅಸಂಖ್ಯ ಜನರು ಆ ಆಹಾರವನ್ನು ಮತ್ತು ನೀರನ್ನು ಸೇವಿಸಿದ್ದು.
ಪ್ರವಾದಿಗಳ ಮತ್ತು ಅವರ ಜನತೆಗಳ ಚರಿತ್ರೆ, ಗುಹಾ ನಿವಾಸಿಗಳ ಚರಿತ್ರೆ ಮುಂತಾದ ಯಾರೂ ತಿಳಿದಿರದ ಅಗೋಚರ ವಿಷಯಗಳ ಕುರಿತು ಅಲ್ಲಾಹನು ತಿಳಿಸಿಕೊಟ್ಟಂತೆ ಮಾಹಿತಿ ನೀಡಿದ್ದು.
ಶಾಮ್ನಲ್ಲಿರುವವನು ಕೂಡ ನೋಡುವ ರೀತಿಯಲ್ಲಿ ಹಿಜಾಜ್ ಪ್ರದೇಶದಿಂದ ಬೆಂಕಿ ಹೊರಡುವುದು, ಜನರು ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಪೈಪೋಟಿ ನಡೆಸುವುದು ಮುಂತಾದ ಭವಿಷ್ಯದಲ್ಲಿ ನಡೆಯುವ ಘಟನೆಗಳ ಕುರಿತು ಅಲ್ಲಾಹನು ತಿಳಿಸಿಕೊಟ್ಟ ಆಧಾರದಲ್ಲಿ ಭವಿಷ್ಯ ನುಡಿದದ್ದು.
(ಐಹಿಕ ಕಷ್ಟ ಕಾರ್ಯಗಳಲ್ಲಿ) ಅವರಿಗೆ ಅಲ್ಲಾಹನು ಸಾಕಾದದ್ದು ಮತ್ತು ಅಲ್ಲಾಹನು ಅವರನ್ನು ಜನರಿಂದ ಕಾಪಾಡಿದ್ದು.
ಅವರು ತಮ್ಮ ಸಹಚರರಿಗೆ ನೀಡಿದ ವಾಗ್ದಾನಗಳು ಈಡೇರಿದ್ದು, ಉದಾಹರಣೆಗೆ ಅವರು ಹೇಳಿದ ಈ ಮಾತು: "ಖಂಡಿತವಾಗಿಯೂ ನೀವು ಪರ್ಶಿಯಾ ಮತ್ತು ರೋಮನ್ನು ಜಯಿಸುವಿರಿ. ಅವುಗಳ ಖಜಾನೆಗಳನ್ನು ನೀವು ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವಿರಿ."
ಅಲ್ಲಾಹನು ದೇವದೂತರ ಮೂಲಕ ಅವರನ್ನು ಬಲಪಡಿಸಿದ್ದು.
ಪ್ರವಾದಿ ಮುಹಮ್ಮದ್ صلى الله عليه وسلم ರವರ ಪ್ರವಾದಿತ್ವದ ಬಗ್ಗೆ ಗತ ಪ್ರವಾದಿಗಳು ತಮ್ಮ ಜನರಿಗೆ ಶುಭವಾರ್ತೆ ನೀಡಿದ್ದು. ಮೂಸಾ, ದಾವೂದ್, ಸುಲೈಮಾನ್, ಈಸಾ ಮತ್ತು ಬನೀ ಇಸ್ರಾಯೀಲರಲ್ಲಿ ಸೇರಿದ ಇತರ ಪ್ರವಾದಿಗಳು ಪ್ರವಾದಿ ಮುಹಮ್ಮದ್ صلى الله عليه وسلمರ ಆಗಮನದ ಬಗ್ಗೆ ಶುಭವಾರ್ತೆ ನೀಡಿದ್ದರು.
ತರ್ಕಬದ್ಧವಾದ ಮತ್ತು ಆರೋಗ್ಯಪೂರ್ಣ ಬುದ್ಧಿಗಳು ಒಪ್ಪಿಕೊಳ್ಳುವಂತಹ ಉಪಮೆ ಮತ್ತು ಉದಾಹರಣೆಗಳಮೂಲಕ ಅವರನ್ನು ಬಲಪಡಿಸಿದ್ದು.
ಇಂತಹ ಪವಾಡಗಳು, ಪುರಾವೆಗಳು ಮತ್ತು ತರ್ಕಬದ್ಧ ಉದಾಹರಣೆಗಳು ಕುರ್ಆನ್ ಮತ್ತು ಪ್ರವಾದಿಯವರ ವಚನಗಳಲ್ಲಿ ಹೇರಳವಾಗಿ ಹರಡಿಕೊಂಡಿವೆ. ಇಂತಹ ಪವಾಡಗಳು ಎಣಿಸಲಾಗದಷ್ಟು ಸಂಖ್ಯೆಯಲ್ಲಿವೆ. ಇವುಗಳ ಕುರಿತು ತಿಳಿಯಲು ಬಯಸುವವರು ಪವಿತ್ರ ಕುರ್ಆನ್, ಪ್ರವಾದಿ ಚರ್ಯೆ ಮತ್ತು ಪ್ರವಾದಿ ಚರಿತ್ರೆಯನ್ನು ಪರಾಮರ್ಶಿಸಲಿ. ಈ ಪವಾಡಗಳ ಬಗ್ಗೆ ಅವುಗಳಲ್ಲಿ ಖಚಿತವಾದ ಮಾಹಿತಿಗಳಿವೆ.
ಒಂದು ವೇಳೆ ಈ ಪವಾಡಗಳು ಸಂಭವಿಸದೆ ಇರುತ್ತಿದ್ದರೆ ಅರೇಬಿಯಾದಲ್ಲಿದ್ದ ಖುರೈಶ್ ಗೋತ್ರದವರು, ಯಹೂದಿ ಮತ್ತು ಕ್ರಿಶ್ಚಿಯನ್ ಸತ್ಯನಿಷೇಧಿಗಳು ಮುಂತಾದ ಪ್ರವಾದಿಯವರ ವಿರೋಧಿಗಳು ಅವರನ್ನು ನಿಷೇಧಿಸಲು ಮತ್ತು ಜನರಿಗೆ ಅವರ ಬಗ್ಗೆ ಎಚ್ಚರಿಕೆ ನೀಡಲು ಇದನ್ನೊಂದು ಅವಕಾಶವಾಗಿ ಬಳಸುತ್ತಿದ್ದರು.
ಪವಿತ್ರ ಕುರ್ಆನ್ ಅಲ್ಲಾಹನು ಪ್ರವಾದಿ ಮುಹಮ್ಮದ್ صلى الله عليه وسلم ರಿಗೆ ಅವತೀರ್ಣಗೊಳಿಸಿದ ಗ್ರಂಥವಾಗಿದೆ. ಅದು ಸರ್ವಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನ ವಚನವಾಗಿದೆ. ಅದರಂತಿರುವ ಒಂದು ಗ್ರಂಥವನ್ನು ಅಥವಾ ಅದರಂತಿರುವ ಒಂದು ಅಧ್ಯಾಯವನ್ನಾದರೂ ರಚಿಸಿ ತರಲು ಅಲ್ಲಾಹನು ಜಿನ್ನ್ ಮತ್ತು ಮನುಷ್ಯ ವರ್ಗಕ್ಕೆ ಸವಾಲು ಹಾಕಿದ್ದಾನೆ. ಆ ಸವಾಲು ಇಂದೂ ಅಸ್ತಿತ್ವದಲ್ಲಿದೆ. ಮಿಲಿಯನ್ಗಟ್ಟಲೆ ಜನರನ್ನು ದಿಗ್ಭ್ರಮೆಗೊಳಿಸುವ ಪ್ರಮುಖ ಪ್ರಶ್ನೆಗಳಿಗೆ ಪವಿತ್ರ ಕುರ್ಆನ್ ಉತ್ತರಿಸುತ್ತದೆ. ಪವಿತ್ರ ಕುರ್ಆನ್ ಅದು ಅವತೀರ್ಣವಾದ ಅರಬಿ ಭಾಷೆಯಲ್ಲಿ ಇಂದಿನವರೆಗೂ ಸಂರಕ್ಷಿಸಲಾಗಿದೆ. ಅದರಿಂದ ಒಂದೇ ಒಂದು ಅಕ್ಷರ ಲೋಪವಾಗಿಲ್ಲ. ಅದನ್ನು ಮುದ್ರಿಸಲಾಗುತ್ತದೆ ಹಾಗೂ ಪ್ರಕಟಿಸಲಾಗುತ್ತದೆ. ಅದು ಒಂದು ಮಹಾನ್ ಪವಾಡ ಗ್ರಂಥವಾಗಿದೆ. ಅದು ಜನರ ಬಳಿಗೆ ಬಂದ ಅತ್ಯುನ್ನತ ಗ್ರಂಥವಾಗಿದೆ. ಅದು ಪಠಿಸಲು ಅಥವಾ ಅದರ ಅರ್ಥ ಅನುವಾದವನ್ನು ಓದಲು ಅತ್ಯಂತ ಅರ್ಹವಾಗಿದೆ. ಅದನ್ನು ಅಧ್ಯಯನ ಮಾಡಲು ಮತ್ತು ಅದರಲ್ಲಿ ವಿಶ್ವಾಸವಿಡಲು ವಿಫಲನಾದವನು ಎಲ್ಲಾ ಒಳಿತುಗಳನ್ನೂ ಕಳಕೊಂಡವನಾಗಿದ್ದಾನೆ. ಅದೇ ರೀತಿ ಪ್ರವಾದಿ ಮುಹಮ್ಮದ್ صلى الله عليه وسلم ರವರ ಚರ್ಯೆ, ಅವರ ಮಾರ್ಗದರ್ಶನ ಮತ್ತು ಅವರ ಚರಿತ್ರೆಯನ್ನು ಸಂರಕ್ಷಿಸಲಾಗಿದೆ. ವಿಶ್ವಾಸಾರ್ಹ ವರದಿಗಾರರ ಸರಣಿಯ ಮೂಲಕ ಅದನ್ನು ವರ್ಗಾಯಿಸಲಾಗಿದೆ. ಅದು ಪ್ರವಾದಿ ಮುಹಮ್ಮದ್ صلى الله عليه وسلم ರವರು ಮಾತನಾಡಿದ ಅರೇಬಿಕ್ ಭಾಷೆಯಲ್ಲೇ ಮುದ್ರಿಸಲಾಗಿದೆ. ಅವರು ಈಗ ನಮ್ಮ ಮಧ್ಯೆ ಬದುಕಿದ್ದಾರೋ ಎಂಬಂತೆ. ಅದನ್ನು ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ. ಕುರ್ಆನ್ ಮತ್ತು ಪ್ರವಾದಿ صلى الله عليه وسلم ರವರ ವಚನಗಳು ಇಸ್ಲಾಮಿನ ನಿಯಮಗಳ ಮತ್ತು ಅದರ ಧರ್ಮಶಾಸ್ತ್ರದ ಏಕೈಕ ಮೂಲವಾಗಿದೆ.
ಪ್ರವಾದಿ ಮುಹಮ್ಮದ್ صلي الله عليه وسلم ರವರು ತಂದ ಧರ್ಮಶಾಸ್ತ್ರವು ಇಸ್ಲಾಮಿನ ಧರ್ಮಶಾಸ್ತ್ರವಾಗಿದೆ. ಅದು ದೈವಿಕ ಧರ್ಮಶಾಸ್ತ್ರಗಳು ಮತ್ತು ಸಂದೇಶಗಳಲ್ಲಿ ಕಟ್ಟಕಡೆಯದ್ದಾಗಿದೆ. ವಿಧಾನಗಳಲ್ಲಿ ವ್ಯತ್ಯಾಸಗಳಿದ್ದರೂ ಅದು ಮೂಲಭೂತ ವಿಷಯಗಳಲ್ಲಿ ಗತ ಪ್ರವಾದಿಗಳ ಧರ್ಮಶಾಸ್ತ್ರಗಳಿಗೆ ಹೊಂದಾಣಿಕೆಯಾಗುತ್ತದೆ.
ಅದು ಪರಿಪೂರ್ಣ ಧರ್ಮಶಾಸ್ತ್ರವಾಗಿದೆ. ಎಲ್ಲಾ ಕಾಲ ಮತ್ತು ಸ್ಥಳಗಳಿಗೂ ಅದು ಯೋಗ್ಯವಾಗಿದೆ. ಅದರಲ್ಲಿ ಜನರ ಧಾರ್ಮಿಕ ಮತ್ತು ಐಹಿಕ ಒಳಿತುಗಳಿವೆ. ನಮಾಜ್, ಜಕಾತ್ ಮುಂತಾದ, ದಾಸರು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಕಡ್ಡಾಯವಾಗಿ ಅರ್ಪಿಸಬೇಕಾದ ಎಲ್ಲಾ ಆರಾಧನೆಗಳನ್ನು ಅದು ಒಳಗೊಂಡಿದೆ. ಹಣಕಾಸು, ಆರ್ಥಿಕತೆ, ಸಮಾಜ, ರಾಜಕಾರಣ, ಯುದ್ಧ, ಅನುಮತಿಸಲಾಗಿರುವ ಹಾಗೂ ನಿಷೇಧಿತ ಪರಿಸರ ಮುಂತಾದವುಗಳಿಗೆ ಸಂಬಂಧಿಸಿದ, ಮನುಷ್ಯರ ಇಹಲೋಕ ಮತ್ತು ಪರಲೋಕ ಜೀವನಕ್ಕೆ ಅಗತ್ಯವಿರುವ ಎಲ್ಲಾ ವ್ಯವಹಾರಗಳನ್ನೂ ಅದು ವಿವರಿಸಿಕೊಡುತ್ತದೆ.
ಈ ಧರ್ಮಶಾಸ್ತ್ರವು ಜನರ ಧರ್ಮ, ರಕ್ತ, ಘನತೆ, ಸಂಪತ್ತು, ಬುದ್ಧಿ ಮತ್ತು ಸಂತತಿಗಳನ್ನು ಸಂರಕ್ಷಿಸುತ್ತದೆ. ಅದು ಎಲ್ಲಾ ರೀತಿಯ ಪುಣ್ಯ ಹಾಗೂ ಶ್ರೇಷ್ಠತೆಗಳಿಂದ ತುಂಬಿಕೊಂಡಿದೆ. ಎಲ್ಲಾ ರೀತಿಯ ಹೊಲಸು ಮತ್ತು ಕೆಡುಕುಗಳ ಬಗ್ಗೆ ಅದು ಎಚ್ಚರಿಸುತ್ತದೆ. ಅದು ಮಾನವನ ಘನತೆ, ಸಂಯಮ, ನ್ಯಾಯ, ನಿಷ್ಕಳಂಕತೆ, ಶುಚಿತ್ವ, ಪರಿಪೂರ್ಣತೆ, ಪ್ರೀತಿ, ಜನರಿಗೆ ಒಳ್ಳೆಯದನ್ನು ಬಯಸುವುದು, ರಕ್ತಪಾತದಿಂದ ತಡೆಯುವುದು, ಇತರ ರಾಷ್ಟ್ರಗಳ ಸುರಕ್ಷತೆ, ಜನರನ್ನು ಅನ್ಯಾಯವಾಗಿ ಬೆದರಿಸುವುದು ಹಾಗೂ ಹೆದರಿಸುವುದು ಮುಂತಾದವುಗಳ ಕಡೆಗೆ ಆಮಂತ್ರಿಸುತ್ತದೆ. ಪ್ರವಾದಿ ಮುಹಮ್ಮದ್ صلي الله عليه وسلم ರವರು ದಬ್ಬಾಳಿಕೆ ಮತ್ತು ಭ್ರಷ್ಟಾಚಾರದ ಎಲ್ಲಾ ರೂಪ ಮತ್ತು ಆಕೃತಿಗಳ ವಿರುದ್ಧ, ಮತ್ತು ಅದೇ ರೀತಿ ಮೂಡನಂಬಿಕೆ, ಪ್ರತ್ಯೇಕತೆ ಮತ್ತು ಸನ್ಯಾಸತ್ವದ ವಿರುದ್ಧ ಹೊರಾಡುತ್ತಿದ್ದರು.
ಅಲ್ಲಾಹನು ಮಾನವನನ್ನು – ಪುರುಷರನ್ನು ಮತ್ತು ಸ್ತ್ರೀಯರನ್ನು – ಗೌರವಿಸಿದ್ದಾನೆ, ಅವನ ಎಲ್ಲಾ ಹಕ್ಕುಗಳ ಹೊಣೆಯನ್ನು ಅವನಿಗೆ ವಹಿಸಿಕೊಟ್ಟಿದ್ದಾನೆ, ಅವನ ಎಲ್ಲಾ ಸ್ವತಂತ್ರ ಆಯ್ಕೆಗಳಲ್ಲಿ, ಅವನ ಎಲ್ಲಾ ಕರ್ಮಗಳಲ್ಲಿ ಮತ್ತು ಅವನ ಎಲ್ಲಾ ವರ್ತನೆಗಳಲ್ಲಿ ಅವನನ್ನೇ ಹೊಣೆಗಾರನನ್ನಾಗಿ ಮಾಡಿದ್ದಾನೆ, ಅವನಿಗೆ ಅಥವಾ ಇತರರಿಗೆ ಹಾನಿ ಮಾಡುವ ಯಾವುದೇ ಕ್ರಿಯೆಗೂ ಅವನನ್ನೇ ಹೊಣೆಗಾರನನ್ನಾಗಿ ಮಾಡಿದ್ದಾನೆ, ಸತ್ಯವಿಶ್ವಾಸ, ಹೊಣೆಗಾರಿಕೆ, ಶಿಕ್ಷೆ ಮತ್ತು ಪ್ರತಿಫಲದ ವಿಷಯದಲ್ಲಿ ಸ್ತ್ರೀ-ಪುರುಷರನ್ನು ಸಮಾನರನ್ನಾಗಿ ಮಾಡಿದ್ದಾನೆ ಎಂದು ಪ್ರವಾದಿ ಮುಹಮ್ಮದ್ -صلي الله عليه وسلم- ರವರು ಹೇಳಿದ್ದಾರೆ. ತಾಯಿ, ಪತ್ನಿ, ಮಗಳು, ಸಹೋದರಿ ಮುಂತಾದ ಜೀವನದ ಎಲ್ಲ ಹಂತಗಳಲ್ಲೂ ಈ ಧರ್ಮಶಾಸ್ತ್ರವು ಮಹಿಳೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ.
ಪ್ರವಾದಿ ಮುಹಮ್ಮದ್ صلى الله عليه وسلم ರವರು ತಂದ ಈ ಧರ್ಮಶಾಸ್ತ್ರವು ಮನುಷ್ಯನ ಬುದ್ಧಿಯನ್ನು ರಕ್ಷಿಸುತ್ತದೆ ಮತ್ತು ಅದನ್ನು ಭ್ರಷ್ಟಗೊಳಿಸುವ ಮದ್ಯ ಮುಂತಾದ ಎಲ್ಲಾ ವಸ್ತುಗಳನ್ನು ನಿಷೇಧಿಸಿದೆ. ಧರ್ಮ ಎಂದರೆ ಮಾನವನ ಬುದ್ಧಿಗೆ ಅದರ ಮಾರ್ಗವನ್ನು ತೋರಿಸಿಕೊಡುವ ಬೆಳಕು ಎಂದು ಇಸ್ಲಾಂ ಪರಿಗಣಿಸುತ್ತದೆ. ಇದರಿಂದ ಮಾನವನು ತನ್ನ ಸೃಷ್ಟಿಕರ್ತನನ್ನು ಜ್ಞಾನ ಮತ್ತು ಒಳದೃಷ್ಟಿಯಿಂದ ಆರಾಧಿಸುವವನಾಗುತ್ತಾನೆ. ಇಸ್ಲಾಮೀ ಧರ್ಮಶಾಸ್ತ್ರವು ಬುದ್ಧಿಯ ಮಹತ್ವವನ್ನು ಎತ್ತರಕ್ಕೇರಿಸಿದೆ. ಒಬ್ಬ ವ್ಯಕ್ತಿ ಧರ್ಮಶಾಸ್ತ್ರದಂತೆ ಬದುಕಬೇಕೋ ಬೇಡವೋ ಎನ್ನುವುದಕ್ಕೆ ಬುದ್ಧಿಯನ್ನು ಕಾರಣವನ್ನಾಗಿ ಮಾಡಿದೆ. ಅದನ್ನು ಮೂಢನಂಬಿಕೆ ಹಾಗೂ ಬಹುದೇವಾರಾಧನೆಯ ಸಂಕೋಲೆಗಳಿಂದ ಬಂಧಮುಕ್ತಗೊಳಿಸಿದೆ.
ಇಸ್ಲಾಮೀ ಧರ್ಮಶಾಸ್ತ್ರವು ಸರಿಯಾದ ಜ್ಞಾನವನ್ನು ಗೌರವಿಸುತ್ತದೆ ಮತ್ತು ದೇಹೇಚ್ಛೆಗಳಿಲ್ಲದ ವೈಜ್ಞಾನಿಕ ಸಂಶೋಧನೆಯನ್ನು ಪ್ರೇರೇಪಿಸುತ್ತದೆ. ನಮ್ಮ ದೇಹದ ಬಗ್ಗೆ ಮತ್ತು ಜಗತ್ತಿನ ಬಗ್ಗೆ ಆಲೋಚಿಸಲು ಆಹ್ವಾನಿಸುತ್ತದೆ. ಸರಿಯಾದ ವೈಜ್ಞಾನಿಕ ಸಂಶೋಧನೆಯ ಫಲಿತಾಂಶಗಳು ಪ್ರವಾದಿ صلى الله عليه وسلم ರವರು ತಂದ ಧರ್ಮಶಾಸ್ತ್ರದೊಂದಿಗೆ ಸಂಘರ್ಷಿಸುವುದಿಲ್ಲ.
ಇಸ್ಲಾಮೀ ಧರ್ಮಶಾಸ್ತ್ರದಲ್ಲಿ ಒಂದು ಲಿಂಗಕ್ಕೆ ಇನ್ನೊಂದು ಲಿಂಗಕ್ಕಿಂತ ಯಾವುದೇ ಶ್ರೇಷ್ಠತೆಯಿಲ್ಲ. ಅದೇ ರೀತಿ ಒಂದು ಜನಾಂಗಕ್ಕೆ ಇನ್ನೊಂದು ಜನಾಂಗದ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ, ಬದಲಾಗಿ ಇಸ್ಲಾಮೀ ಧರ್ಮಶಾಸ್ತ್ರದ ಮುಂದೆ ಎಲ್ಲರೂ ಸಮಾನರು. ಏಕೆಂದರೆ ಮೂಲತಃ ಎಲ್ಲಾ ಮನುಷ್ಯರೂ ಸಮಾನರು. ಒಂದು ಲಿಂಗಕ್ಕೆ ಇನ್ನೊಂದು ಲಿಂಗಕ್ಕಿಂತ, ಒಂದು ಜನಾಂಗಕ್ಕೆ ಇನ್ನೊಂದು ಜನಾಂಗಕ್ಕಿಂತ ಯಾವುದೇ ಶ್ರೇಷ್ಠತೆಯಿಲ್ಲ. ಶ್ರೇಷ್ಠತೆ ಇರುವುದು ಭಯ-ಭಕ್ತಿ ಪಾಲಿಸುವವರಿಗೆ ಮಾತ್ರ. ಪ್ರತಿಯೊಂದು ಮಗುವೂ ಪ್ರಕೃತಿಯಲ್ಲಿಯೇ (ಇಸ್ಲಾಮಿನಲ್ಲಿಯೇ) ಹುಟ್ಟುತ್ತದೆ ಎಂದು ಪ್ರವಾದಿ صلى الله عليه وسلم ರವರು ಹೇಳಿದ್ದಾರೆ. ಯಾವುದೇ ವ್ಯಕ್ತಿ ಕೂಡ ಪಾಪಿಯಾಗಿ ಅಥವಾ ಇನ್ನೊಬ್ಬನ ಪಾಪವನ್ನು ವಹಿಸುವವನಾಗಿ ಹುಟ್ಟುವುದಿಲ್ಲ.
ಇಸ್ಲಾಮೀ ಧರ್ಮಶಾಸ್ತ್ರದಲ್ಲಿ ಅಲ್ಲಾಹನು ಪಶ್ಚಾತ್ತಾಪವನ್ನು ನಿರ್ದೇಶಿಸಿದ್ದಾನೆ. ಪಶ್ಚಾತ್ತಾಪ ಎಂದರೆ ಮನುಷ್ಯನು ಪಾಪ ಕೃತ್ಯವನ್ನು ತೊರೆದು ತನ್ನ ಪರಿಪಾಲಕ ಪ್ರಭುವಿನ ಕಡೆಗೆ ಮರಳುವುದು. ಇಸ್ಲಾಂ ಧರ್ಮವನ್ನು ಸ್ವೀಕರಿಸುವುದರೊಂದಿಗೆ ಹಿಂದಿನ ಎಲ್ಲಾ ಪಾಪಗಳು ನಾಶವಾಗುತ್ತವೆ. ಪಶ್ಚಾತ್ತಾಪವೂ ಅದರ ಹಿಂದಿನ ಪಾಪಗಳನ್ನು ಅಳಿಸುತ್ತದೆ. ಮನುಷ್ಯನು ತನ್ನ ಪಾಪವನ್ನು ಇನ್ನೊಬ್ಬರ ಮುಂದೆ ಒಪ್ಪಿಕೊಳ್ಳಬೇಕಾದ ಯಾವ ಅವಶ್ಯಕತೆಯೂ ಇಲ್ಲ. ಇಸ್ಲಾಮಿನಲ್ಲಿ ಮನುಷ್ಯ ಮತ್ತು ಅಲ್ಲಾಹನ ನಡುವಿನ ಸಂಬಂಧವು ನೇರವಾಗಿರುತ್ತದೆ. ತನ್ನ ಮತ್ತು ಅಲ್ಲಾಹನ ಮಧ್ಯೆ ಯಾವ ಮಧ್ಯವರ್ತಿಯ ಅವಶ್ಯಕತೆ ಯಾರಿಗೂ ಇಲ್ಲ. ಮನುಷ್ಯರನ್ನು ದೇವರನ್ನಾಗಿ, ಅಥವಾ ಅಲ್ಲಾಹನ ಪ್ರಭುತ್ವ ಅಥವಾ ಆರಾಧನಾರ್ಹತೆಯಲ್ಲಿ ಪಾಲುದಾರರನ್ನಾಗಿ ಮಾಡುವುದನ್ನು ಇಸ್ಲಾಂ ಧರ್ಮವು ವಿರೋಧಿಸುತ್ತದೆ.
ಪ್ರವಾದಿ ಮುಹಮ್ಮದ್ صلى الله عليه وسلم ರವರು ತಂದ ಧರ್ಮಶಾಸ್ತ್ರವು ಹಿಂದಿನ ಧರ್ಮಶಾಸ್ತ್ರಗಳನ್ನು ರದ್ದುಗೊಳಿಸುತ್ತದೆ. ಏಕೆಂದರೆ ಪ್ರವಾದಿ ಮುಹಮ್ಮದ್ صلى الله عليه وسلم ರವರು ಅಲ್ಲಾಹನ ಬಳಿಯಿಂದ ತಂದ ಇಸ್ಲಾಮೀ ಧರ್ಮಶಾಸ್ತ್ರವು ಅಂತ್ಯದಿನದ ವರೆಗಿನ ಕೊನೆಯ ಧರ್ಮಶಾಸ್ತ್ರವಾಗಿದೆ. ಅದು ಸರ್ವಲೋಕಗಳ ಜನರಿಗೂ ಪರ್ಯಾಪ್ತವಾಗಿದೆ. ಆದ್ದರಿಂದಲೇ ಹಿಂದಿನ ಧರ್ಮಶಾಸ್ತ್ರಗಳು ಒಂದು ಇನ್ನೊಂದನ್ನು ರದ್ದುಗೊಳಿಸಿದಂತೆ ಇಸ್ಲಾಮೀ ಧರ್ಮಶಾಸ್ತ್ರವು ಅದಕ್ಕಿಂತ ಮುಂಚಿನ ಎಲ್ಲಾ ಧರ್ಮಶಾಸ್ತ್ರಗಳನ್ನು ರದ್ದುಗೊಳಿಸಿದೆ. ಸರ್ವಶಕ್ತನಾದ ಅಲ್ಲಾಹನು ಇಸ್ಲಾಮೀ ಧರ್ಮಶಾಸ್ತ್ರದ ಹೊರತು ಇತರ ಯಾವುದೇ ಧರ್ಮಶಾಸ್ತ್ರವನ್ನು ಸ್ವೀಕರಿಸುವುದಿಲ್ಲ. ಪ್ರವಾದಿ ಮುಹಮ್ಮದ್ صلى الله عليه وسلم ರವರು ತಂದ ಇಸ್ಲಾಂ ಧರ್ಮದ ಹೊರತು ಇತರ ಯಾವುದೇ ಧರ್ಮವನ್ನು ಅಂಗೀಕರಿಸುವುದಿಲ್ಲ. ಇಸ್ಲಾಂ ಅಲ್ಲದ ಇತರ ಧರ್ಮಗಳನ್ನು ಯಾರಾದರೂ ಸ್ವೀಕರಿಸಿದರೆ ಅದು ಅಲ್ಲಾಹನ ಬಳಿ ಎಂದಿಗೂ ಸ್ವೀಕಾರಾರ್ಹವಲ್ಲ. ಇಸ್ಲಾಮೀ ಶರಿಯತ್ತಿನ ಕಾನೂನುಗಳ ಬಗ್ಗೆ ವಿವರವಾಗಿ ತಿಳಿಯಲು ಬಯಸುವವರು ಇಸ್ಲಾಂ ಧರ್ಮವನ್ನು ಪರಿಚಯಿಸುವ ಅಧಿಕೃತ ಪುಸ್ತಕಗಳನ್ನು ಓದಿಕೊಳ್ಳಲಿ.
ಅಲ್ಲಾಹನ ಬಳಿಯಿಂದ ಅವತೀರ್ಣಗೊಂಡ ಹಿಂದಿನ ಎಲ್ಲಾ ದೈವಿಕ ಸಂದೇಶಗಳ ಗುರಿಯಂತೆ, ಸತ್ಯಧರ್ಮವು ಮನುಷ್ಯನನ್ನು ಉತ್ತುಂಗಕ್ಕೇರಿಸುವ ಮೂಲಕ ಅವನನ್ನು ಸರ್ವಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನ ನಿಷ್ಕಳಂಕ ದಾಸನಾಗುವಂತೆ ಮತ್ತು ಇತರ ಮನುಷ್ಯರ, ಭೌತಿಕತೆಯ ಅಥವಾ ಅಂಧವಿಶ್ವಾಸಗಳ ಗುಲಾಮಗಿರಿಯಿಂದ ಮುಕ್ತನಾಗುವಂತೆ ಮಾಡಬೇಕು ಎಂಬುದು ಇಸ್ಲಾಮೀ ಧರ್ಮಶಾಸ್ತ್ರದ ಗುರಿಯೂ ಆಗಿದೆ.
ಇಸ್ಲಾಮೀ ಧರ್ಮಶಾಸ್ತ್ರವು ಎಲ್ಲಾ ಸ್ಥಳ-ಕಾಲಗಳಿಗೆ ಯೋಗ್ಯವಾಗಿದೆ. ಅದರಲ್ಲಿ ಮನುಷ್ಯರ ಆರೋಗ್ಯಪೂರ್ಣ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವಂತಹದ್ದು ಏನೂ ಇಲ್ಲ. ಏಕೆಂದರೆ ಅದು ಜನರ ಅವಶ್ಯಕತೆಗಳನ್ನು ಸರಿಯಾಗಿ ತಿಳಿದಿರುವ ಅಲ್ಲಾಹನ ಬಳಿಯಿಂದ ಅವತೀರ್ಣಗೊಂಡದ್ದಾಗಿದೆ. ಮನುಷ್ಯನಿಗೆ ಸ್ವತಃ ಸರಿಯಾದ ಕಾನೂನಿನ ಅಗತ್ಯವಿದೆ. ಅದು ಪರಸ್ಪರ ಸಂಘರ್ಷಿಸಬಾರದು. ಅದರಲ್ಲಿ ಇಡೀ ಮಾನವಕುಲದ ಹಿತವಿರಬೇಕು. ಅದು ಮನುಷ್ಯನು ರಚಿಸಿದ್ದಾಗಿರಬಾರದು. ಬದಲಾಗಿ ಅದು ಅಲ್ಲಾಹನಿಂದಲೇ ಪಡೆದದ್ದಾಗಿರಬೇಕು. ಅದು ಜನರನ್ನು ಒಳಿತಿನ ಮತ್ತು ನೇರವಾದ ಮಾರ್ಗಕ್ಕೆ ಒಯ್ಯಬೇಕು. ಅದರಲ್ಲಿ ತೀರ್ಪನ್ನು ಹುಡುಕಿದಾಗ ಅವರ ವ್ಯವಹಾರಗಳು ಸರಿಯಾಗಬೇಕು ಮತ್ತು ಅವರು ಪರಸ್ಪರರ ಅನ್ಯಾಯ-ಅಕ್ರಮಗಳಿಂದ ಸುರಕ್ಷಿತರಾಗಬೇಕು.
ನಿಸ್ಸಂದೇಹವಾಗಿಯೂ ಪ್ರತಿಯೊಬ್ಬ ಪ್ರವಾದಿಗೂ ವಿರೋಧಿಗಳಿದ್ದರು. ಅವರು ಆ ಪ್ರವಾದಿಯ ವಿರುದ್ಧ ಹೋರಾಡುತ್ತಿದ್ದರು, ಅವರ ಧರ್ಮಪ್ರಚಾರಕ್ಕೆ ತಡೆಯೊಡ್ಡುತ್ತಿದ್ದರು ಮತ್ತು ಅವರಲ್ಲಿ ವಿಶ್ವಾಸವಿಡದಂತೆ ಜನರನ್ನು ತಡೆಯುತ್ತಿದ್ದರು. ಪ್ರವಾದಿ ಮುಹಮ್ಮದ್ صلى الله عليه وسلم ರವರಿಗೆ ಅವರ ಜೀವಿತಕಾಲದಲ್ಲೂ ಮರಣಾನಂತರವೂ ಬಹಳಷ್ಟು ವಿರೋಧಿಗಳಿದ್ದರು. ಅಲ್ಲಾಹನು ತನ್ನ ಪ್ರವಾದಿಗೆ ಅವರೆಲ್ಲರ ವಿರುದ್ಧ ಸಹಾಯ ಮಾಡಿದ್ದನು. ಮುಹಮ್ಮದ್ صلى الله عليه وسلم ರವರು ಅಲ್ಲಾಹನ ಪ್ರವಾದಿಯಾಗಿದ್ದಾರೆ ಮತ್ತು ಗತ ಪ್ರವಾದಿಗಳು عليهم الصلاة و السلام ತಂದ ಸಂದೇಶವನ್ನೇ ಇವರೂ ತಂದಿದ್ದಾರೆ ಎಂದು – ಪ್ರಾಚೀನ ಕಾಲದಲ್ಲೂ ಆಧುನಿಕ ಕಾಲದಲ್ಲೂ – ಬಹಳಷ್ಟು ವಿರೋಧಿಗಳು ನುಡಿದ ಸಾಕ್ಷಿಗಳು ಎಡೆಬಿಡದೆ ಪರಂಪರಾಗತವಾಗಿ ಹರಿದು ಬಂದಿದೆ. ಪ್ರವಾದಿಯವರು ಸತ್ಯಮಾರ್ಗದಲ್ಲಿದ್ದಾರೆಂದು ಅವರೆಲ್ಲರೂ ತಿಳಿದಿದ್ದರು. ಆದರೆ ಅಧಿಕಾರದ ಲಾಲಸೆ, ಸಮಾಜದ ಭಯ, ತನ್ನ ಸ್ಥಾನದಿಂದ ತಾನು ಸಂಪಾದಿಸುವ ಸಂಪತ್ತನ್ನು ಕಳೆದುಕೊಳ್ಳಬಹುದೆಂಬ ಆತಂಕ ಮುಂತಾದ ಅನೇಕ ಅಡೆತಡೆಗಳು ಪ್ರವಾದಿಯವರಲ್ಲಿ ವಿಶ್ವಾಸವಿಡದಂತೆ ಅವರಲ್ಲಿ ಹೆಚ್ಚಿನವರನ್ನು ತಡೆಯುತ್ತಿತ್ತು.
ಸರ್ವಸ್ತುತಿ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು.
ಲೇಖಕರು: ಪ್ರೊಫೆಸರ್ ಡಾ. ಮುಹಮ್ಮದ್ ಬಿನ್ ಅಬ್ದುಲ್ಲಾ ಅಸ್ಸುಹೈಮ್
ಮಾಜಿ ಅಧ್ಯಾಪಕರು, ಅಕೀದ, ಇಸ್ಲಾಮಿಕ್ ಸ್ಟಡೀಸ್ ವಿಭಾಗ
ಕುಲ್ಲಿಯತುತ್ತರ್ಬಿಯಾ, ಕಿಂಗ್ ಸವೂದ್ ವಿಶ್ವವಿದ್ಯಾಲಯ
ರಿಯಾದ್, ಸೌದಿ ಅರೇಬಿಯ.
ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ صلى الله عليه وسلم
1- ಅವರ ಹೆಸರು, ವಂಶ ಮತ್ತು ಹುಟ್ಟಿ ಬೆಳೆದ ಊರು
2- ಅನುಗ್ರಹೀತ ಮಹಿಳೆಯೊಡನೆ ಅನುಗ್ರಹೀತ ವಿವಾಹ
5- ಅವರ ಪ್ರವಾದಿತ್ವದ ನಿದರ್ಶನಗಳು, ಚಿಹ್ನೆಗಳು ಮತ್ತು ಪುರಾವೆಗಳು
6- ಪ್ರವಾದಿ ಮುಹಮ್ಮದ್ صلى الله عليه وسلم ರವರು ತಂದ ಷರಿಯತ್ (ಧರ್ಮಶಾಸ್ತ್ರ).