×
New!

Bayan Al Islam Encyclopedia Mobile Application

Get it now!

ಸರಿಯಾದ ವಿಶ್ವಾಸ ಮತ್ತು ಅದಕ್ಕೆ ವಿರುದ್ಧವಾಗಿರುವ ಕಾರ್ಯಗಳು ಹಾಗೂ ಇಸ್ಲಾಂ ಧರ್ಮವನ್ನು ಅಸಿಂಧುಗೊಳಿಸುವ ವಿಷಯಗಳು (ಕನ್ನಡ)

Даярдоо: ಅಬ್ದುಲ್ ಅಝೀಝ್ ಇಬ್ ಅಬ್ದಿಲ್ಲಾಹ್ ಇಬ್ನ್ ಬಾಝ್

ಸರಿಯಾದ ವಿಶ್ವಾಸ ಮತ್ತು ಅದಕ್ಕೆ ವಿರುದ್ಧವಾಗಿರುವ ಕಾರ್ಯಗಳು ಹಾಗೂ ಇಸ್ಲಾಂ ಧರ್ಮವನ್ನು ಅಸಿಂಧುಗೊಳಿಸುವ ವಿಷಯಗಳು

ಲೇಖಕರು:

ಶೇಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ

ಪೀಠಿಕೆ

ಸರ್ವ ಸ್ತುತಿ-ಸ್ತೋತ್ರಗಳು ಅಲ್ಲಾಹುವಿಗೆ ಮಾತ್ರ ಮೀಸಲು. ಯಾರ ನಂತರ ಬೇರೆ ಯಾವುದೇ ಪ್ರವಾದಿ ಬರಲಿಕ್ಕಿಲ್ಲವೋ ಅವರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ.

ಮುಂದುವರಿದು ಹೇಳುವುದೇನೆಂದರೆ: ಸರಿಯಾದ ವಿಶ್ವಾಸವು ಇಸ್ಲಾಂ ಧರ್ಮದ ಆಧಾರ ಮತ್ತು ಅಡಿಪಾಯವಾಗಿರುವುದರಿಂದ ಅದನ್ನೇ ಉಪನ್ಯಾಸದ ವಿಷಯವನ್ನಾಗಿ ಮಾಡುವುದು ಸೂಕ್ತ ಎಂದು ನಾನು ಭಾವಿಸಿದೆ. ಕರ್ಮಗಳು ಮತ್ತು ಮಾತುಗಳು ಸರಿಯಾದ ವಿಶ್ವಾಸದ ಮೂಲಕ ಹೊರಹೊಮ್ಮಿದರೆ ಮಾತ್ರ ಸಿಂಧುವಾಗುತ್ತದೆ ಮತ್ತು ಸ್ವೀಕೃತವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ವಿಶ್ವಾಸವು ಸರಿಯಾಗಿರದಿದ್ದರೆ, ಅದರಿಂದ ಕವಲೊಡೆಯುವ ಕರ್ಮಗಳು ಮತ್ತು ಮಾತುಗಳು ಕೂಡ ಸರಿಯಾಗಿರುವುದಿಲ್ಲ ಮತ್ತು ಅವು ವ್ಯರ್ಥವಾಗುತ್ತವೆ ಸರ್ವಶಕ್ತನಾದ ಅಲ್ಲಾಹು ಹೇಳಿದಂತೆ: "ಇಂದು ನಿಮಗೆ ಎಲ್ಲ ಉತ್ತಮ ವಸ್ತುಗಳನ್ನೂ ಧರ್ಮಸಮ್ಮತಗೊಳಿಸಲಾಗಿದೆ. ಗ್ರಂಥ ನೀಡಲಾದವರ ಆಹಾರವು ನಿಮಗೆ ಧರ್ಮಸಮ್ಮತವಾಗಿದೆ. ನಿಮ್ಮ ಆಹಾರವು ಅವರಿಗೂ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿನಿಯರ ಪೈಕಿ ಪತಿವ್ರತೆಯರಾದ ಸ್ತ್ರೀಯರು ಮತ್ತು ನಿಮಗಿಂತ ಮುಂಚೆ ಗ್ರಂಥ ನೀಡಲ್ಪಟ್ಟವರ ಪೈಕಿ ಪತಿವ್ರತೆಯರಾದ ಸ್ತ್ರೀಯರು -ನೀವು ಅವರಿಗೆ ವಧುದಕ್ಷಿಣೆಯನ್ನು ನೀಡಿದ್ದರೆ- (ನಿಮಗೆ ಧರ್ಮಸಮ್ಮತವಾಗಿದ್ದಾರೆ). ನೀವು ವೈವಾಹಿಕ ಬದುಕು ಸಾಗಿಸುವುದನ್ನು ಬಯಸುವವರೂ, ವ್ಯಭಿಚಾರ ಮಾಡದವರೂ, ಗುಪ್ತ ಸಂಗಾತಿಗಳನ್ನು ಇಟ್ಟುಕೊಳ್ಳದವರೂ ಆಗಿರಬೇಕಾಗಿದೆ. ಯಾರಾದರೂ ಸತ್ಯವಿಶ್ವಾಸವನ್ನು ತಿರಸ್ಕರಿಸುವುದಾದರೆ ಅವನ ಕರ್ಮವು ನಿಷ್ಫಲವಾಗಿ ಬಿಡುವುದು. ಪರಲೋಕದಲ್ಲಿ ಅವನು ನಷ್ಟ ಹೊಂದಿದವರೊಂದಿಗೆ ಸೇರುವನು." [ಅಲ್-ಮಾಇದ:5] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ತಾವೇನಾದರೂ (ಅಲ್ಲಾಹನೊಂದಿಗೆ) ಸಹಭಾಗಿತ್ವ ಮಾಡಿದರೆ ಖಂಡಿತವಾಗಿಯೂ ತಮ್ಮ ಕರ್ಮಗಳು ನಿಷ್ಫಲವಾಗುವುದು ಮತ್ತು ಖಂಡಿತವಾಗಿಯೂ ತಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವಿರಿ ಎಂದು ತಮಗೂ ತಮಗಿಂತ ಮುಂಚಿನವರಿಗೂ ದಿವ್ಯ ಸಂದೇಶ ನೀಡಲಾಗಿದೆ." [ಅಝ್ಝುಮರ್:65] ಈ ಅರ್ಥವನ್ನು ಹೊಂದಿರುವ ಇನ್ನೂ ಅನೇಕ ಸೂಕ್ತಿಗಳಿವೆ. ಅಲ್ಲಾಹನ ದಿವ್ಯ ಗ್ರಂಥ ಮತ್ತು ಅಲ್ಲಾಹನ ಸಂದೇಶವಾಹಕರ(ಸ) ಸುನ್ನತ್ ಸೂಚಿಸುವಂತೆ ಸರಿಯಾದ ವಿಶ್ವಾಸ ಎಂಬುದು ಅಲ್ಲಾಹನಲ್ಲಿರುವ ವಿಶ್ವಾಸ, ಅವನ ದೇವದೂತರಲ್ಲಿರುವ ವಿಶ್ವಾಸ, ಅವನ ಗ್ರಂಥಗಳಲ್ಲಿರುವ ವಿಶ್ವಾಸ, ಅವನ ಸಂದೇಶವಾಹಕರುಗಳಲ್ಲಿರುವ ವಿಶ್ವಾಸ, ಅಂತಿಮ ದಿನದಲ್ಲಿರುವ ವಿಶ್ವಾಸ ಮತ್ತು ಒಳಿತು ಹಾಗೂ ಕೆಡುಕು ಸೇರಿದಂತೆ ಎಲ್ಲವೂ ಅಲ್ಲಾಹನ ವಿಧಿಯಾಗಿದೆ ಎಂಬ ವಿಧಿಯಲ್ಲಿರುವ ವಿಶ್ವಾಸಗಳಿಗೆ ಸೀಮಿತವಾಗಿದೆ. ಈ ಆರು ವಿಷಯಗಳು ಸರಿಯಾದ ವಿಶ್ವಾಸದ ಆಧಾರಗಳಾಗಿದ್ದು, ಈ ಆರು ವಿಷಯಗಳೊಂದಿಗೆ ಪವಿತ್ರ ಕುರ್ಆನ್ ಅವತೀರ್ಣವಾಗಿದೆ ಮತ್ತು ಮುಹಮ್ಮದ್(ಸ) ರನ್ನು ಕಳುಹಿಸಲಾಗಿದೆ. ಅಗೋಚರ ವಿಷಯಗಳ ಪೈಕಿ ವಿಶ್ವಾಸವಿಡಲು ಕಡ್ಡಾಯವಾಗಿರುವ ವಿಷಯಗಳು ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರು ಹೇಳಿದ ಎಲ್ಲಾ ವಿಷಯಗಳು ಈ ಆರು ಮೂಲಗಳಿಂದಲೇ ಹೊರಬರುತ್ತವೆ. ಈ ಆರು ಮೂಲಭೂತ ವಿಷಯಗಳಿಗೆ ಅಲ್ಲಾಹನ ಗ್ರಂಥ ಮತ್ತು ಅವನ ಸಂದೇಶವಾಹಕರ ಸುನ್ನತ್ನಲ್ಲಿ ಅನೇಕ ಪುರಾವೆಗಳಿವೆ. ಅವುಗಳಲ್ಲಿ ಒಂದು ಸರ್ವಶಕ್ತನಾದ ಅಲ್ಲಾಹನ ಈ ಮಾತು: "ನೀವು ನಿಮ್ಮ ಮುಖಗಳನ್ನು ಪೂರ್ವದೆಡೆಗೆ ಅಥವಾ ಪಶ್ಚಿಮದೆಡೆಗೆ ತಿರುಗಿಸುವುದಲ್ಲ ಪುಣ್ಯ. ಆದರೆ ಅಲ್ಲಾಹನಲ್ಲ್ಲಿ, ಅಂತ್ಯದಿನದಲ್ಲಿ, ಮಲಕ್ಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುವವನು.",(ಇದು ಪುಣ್ಯವಾಗಿದೆ) [ಅಲ್-ಬಖರ:177]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ತಮ್ಮ ಪ್ರಭುವಿನ ವತಿಯಿಂದ ತಮಗೆ ಅವತೀರ್ಣಗೊಳಿಸಲಾಗಿರುವುದರಲ್ಲಿ ಸಂದೇಶವಾಹಕರು ವಿಶ್ವಾಸವಿಟ್ಟಿರುವರು. (ತರುವಾಯ) ಸತ್ಯವಿಶ್ವಾಸಿಗಳು ಸಹ ವಿಶ್ವಾಸವಿಟ್ಟಿರುವರು. ಅವರೆಲ್ಲರೂ ಅಲ್ಲಾಹನಲ್ಲಿ, ಅವನ ಮಲಕ್ಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟಿರುವರು." [ಅಲ್-ಬಖರ:285]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನಲ್ಲಿಯೂ, ಅವನ ಸಂದೇಶವಾಹಕರಲ್ಲಿಯೂ, ಅವನ ಸಂದೇಶವಾಹಕರಿಗೆ ಅವನು ಅವತೀರ್ಣಗೊಳಿಸಿದ ಗ್ರಂಥದಲ್ಲಿಯೂ ಮತ್ತು ಅವರಿಗಿಂತ ಮುಂಚೆ ಅವತೀರ್ಣಗೊಳಿಸಿದ ಗ್ರಂಥದಲ್ಲಿಯೂ ವಿಶ್ವಾಸವಿಡಿರಿ. ಯಾರು ಅಲ್ಲಾಹನಲ್ಲಿ, ಅವನ ಮಲಕ್ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ ಮತ್ತು ಅಂತ್ಯದಿನದಲ್ಲಿ ಅವಿಶ್ವಾಸವಿಡುತ್ತಾನೋ ಖಂಡಿತವಾಗಿಯೂ ಅವನು ವಿದೂರವಾದ ಪಥಭ್ರಷ್ಟತೆಯಲ್ಲಿರುವನು." [ಅನ್ನಿಸಾ:136] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಆಕಾಶದಲ್ಲಿ ಮತ್ತು ಭೂಮಿಯಲ್ಲಿರುವುದನ್ನು ಅಲ್ಲಾಹು ಅರಿಯುತ್ತಾನೆಂದು ತಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದೊಂದು ದಾಖಲೆಯಲ್ಲಿದೆ. ಖಂಡಿತವಾಗಿಯೂ ಅದು ಅಲ್ಲಾಹನಿಗೆ ಸರಳವಾದ ವಿಷಯವಾಗಿದೆ." [ಅಲ್-ಹಜ್ಜ್:70] ಈ ಆರು ಮೂಲಭೂತ ವಿಷಯಗಳನ್ನು ಸೂಚಿಸುವ ಅನೇಕ ಅಧಿಕೃತ ಹದೀಸ್ಗಳಿವೆ. ಇಮಾಮ್ ಮುಸ್ಲಿಂ ಉಮರ್ ಬಿನ್ ಅಲ್-ಖತ್ತಾಬ್(ರ) ರಿಂದ ವರದಿ ಮಾಡಿದ ಅಧಿಕೃತವಾದ ಪ್ರಸಿದ್ಧ ಹದೀಸ್ ಇದರಲ್ಲಿ ಒಂದಾಗಿದೆ. ಈ ಹದೀಸಿನಲ್ಲಿರುವಂತೆ, ಜಿಬ್ರೀಲ್(ಅ) ಪ್ರವಾದಿ(ಸ) ರೊಡನೆ ವಿಶ್ವಾಸದ ಬಗ್ಗೆ ಕೇಳಿದಾಗ, ಅವರು ಹೀಗೆ ಉತ್ತರಿಸುತ್ತಾರೆ: "ವಿಶ್ವಾಸವೆಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯ ದಿನದಲ್ಲಿ ಮತ್ತು ವಿಧಿಯಲ್ಲಿ – ಅದರ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿರಿಸುವುದು"ಎಂಬ ಹದೀಸ್. ಇದನ್ನು ಬುಖಾರಿ ಮತ್ತು ಮುಸ್ಲಿಂ ಅಬೂ ಹುರೈರ(ರ) ರಿಂದ ವರದಿ ಮಾಡಿದ್ದಾರೆ. ಒಬ್ಬ ಮುಸಲ್ಮಾನನು ಸರ್ವಶಕ್ತನಾದ ಅಲ್ಲಾಹನ ವಿಷಯದಲ್ಲಿ, ಪರಲೋಕದ ವಿಷಯದಲ್ಲಿ ಹಾಗೂ ಇತರ ಅಗೋಚರ ವಿಷಯಗಳಲ್ಲಿ ಕಡ್ಡಾಯವಾಗಿ ವಿಶ್ವಾಸವಿಡಬೇಕಾದುದೆಲ್ಲವೂ ಈ ಆರು ಮೂಲಭೂತ ವಿಷಯಗಳಿಂದ ಹೊರಹೊಮ್ಮುತ್ತವೆ.

ಅಲ್ಲಾಹನಲ್ಲಿ ವಿಶ್ವಾಸವಿಡುವುದು

ಅಲ್ಲಾಹನಲ್ಲಿ ವಿಶ್ವಾಸವಿಡುವುದು ಎಂದರೆ, ಅವನು ಸತ್ಯದೇವ, ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ವಿಶ್ವಾಸವಿಡುವುದು.

ಅಲ್ಲಾಹು ಸತ್ಯದೇವನು, ಅವನ ಹೊರತು ಆರಾಧನೆಗೆ ಅರ್ಹರಾದ ಯಾರು ಅನ್ಯರಿಲ್ಲ; ಏಕೆಂದರೆ, ಅವನು ಮನುಷ್ಯರನ್ನು ಸೃಷ್ಟಿಸಿದವನು, ಅವರಿಗೆ ಒಳಿತು ಮಾಡುವವನು, ಅವರಿಗೆ ಆಹಾರ ನೀಡಿ ಅವರನ್ನು ಪೋಷಿಸುವವನು, ಅವರ ರಹಸ್ಯ ಮತ್ತು ಬಹಿರಂಗಗಳನ್ನು ತಿಳಿದವನು, ಅವರ ಪೈಕಿ ಸಜ್ಜನರಿಗೆ ಪ್ರತಿಫಲವನ್ನು ಮತ್ತು ದುರ್ಜನರಿಗೆ ಶಿಕ್ಷೆಯನ್ನು ನೀಡುವ ಸಾಮರ್ಥ್ಯವುಳ್ಳವನು ಅವನು ಮಾತ್ರ. ಅವನನ್ನು ಆರಾಧಿಸುವುದಕ್ಕಾಗಿಯೇ ಅವನು ಜಿನ್ನ್ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹನು ಹೇಳಿದಂತೆ: "ನನ್ನನ್ನು ಆರಾಧಿಸುವುದಕ್ಕಾಗಿಯೇ ವಿನಾ ನಾನು ಜಿನ್ನ್ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿಲ್ಲ." [ಅದ್ದಾರಿಯಾತ್:56]. "ನಾನು ಅವರಿಂದ ಅನ್ನಾಧಾರವನ್ನು ಬಯಸುವುದಿಲ್ಲ. ಅವರು ನನಗೆ ಆಹಾರ ಒದಗಿಸಬೇಕೆಂದೂ ನಾನು ಬಯಸುವುದಿಲ್ಲ." [ಅದ್ದಾರಿಯಾತ್:57]. "ಖಂಡಿತವಾಗಿಯೂ ಅನ್ನಾಧಾರ ಒದಗಿಸುವವನು, ಶಕ್ತನು ಮತ್ತು ಬಲಿಷ್ಠನು ಅಲ್ಲಾಹನಾಗಿರುವನು." [ಅದ್ದಾರಿಯಾತ್:58]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ." [ಅಲ್-ಬಖರ:21]. "ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟಿರುವ, ಹಾಗೂ ಆಕಾಶದಿಂದ ನೀರನ್ನು ಇಳಿಸಿ ತನ್ಮೂಲಕ ನಿಮಗೆ ಭಕ್ಷ್ಯಯೋಗ್ಯ ಫಲಗಳನ್ನು ಉತ್ಪಾದಿಸಿಕೊಟ್ಟಿರುವ (ಪ್ರಭುವನ್ನು ಆರಾಧಿಸಿರಿ). ಆದ್ದರಿಂದ (ಇವೆಲ್ಲವನ್ನೂ) ಅರಿತವರಾಗಿದ್ದೂ ಸಹ ನೀವು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನು ಮಾಡದಿರಿ." [ಅಲ್-ಬಖರ:22]. ಈ ಸತ್ಯವನ್ನು ವಿವರಿಸಲು, ಇದರೆಡೆಗೆ ಜನರನ್ನು ಆಹ್ವಾನಿಸಲು ಮತ್ತು ಇದಕ್ಕೆ ವಿರುದ್ಧವಾಗಿರುವುದರ ಬಗ್ಗೆ ಎಚ್ಚರಿಸಲು ಅಲ್ಲಾಹನು ಸಂದೇಶವಾಹಕರನ್ನು ಕಳುಹಿಸಿದ್ದಾನೆ ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತನ್ನು ವರ್ಜಿಸಿರಿ (ಎಂದು ಬೋಧಿಸುವ ಸಲುವಾಗಿ) ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯಕ್ಕೂ ಸಂದೇಶವಾಹಕರನ್ನು ಕಳುಹಿಸಿರುವೆವು." [ಅನ್ನಹ್ಲ್:36]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನನ್ನ ಹೊರತು ಅನ್ಯ ಆರಾಧ್ಯರಿಲ್ಲ. ಆದ್ದರಿಂದ ನನ್ನನ್ನು ಆರಾಧಿಸಿರಿ ಎಂಬ ದಿವ್ಯಸಂದೇಶವನ್ನು ನೀಡಿಯೇ ಹೊರತು ತಮಗಿಂತ ಮುಂಚೆ ಯಾವುದೇ ಸಂದೇಶವಾಹಕರನ್ನೂ ನಾವು ಕಳುಹಿಸಿಲ್ಲ." [ಅಲ್-ಅಂಬಿಯಾ:25] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಲಿಫ್, ಲಾಮ್, ರಾ. ಇದು ಗ್ರಂಥವಾಗಿದೆ. ಇದರಲ್ಲಿರುವ ಸೂಕ್ತಿಗಳನ್ನು ವಿಚಾರಭದ್ರಗೊಳಿಸಲಾಗಿದೆ. ತರುವಾಯ ಅವುಗಳನ್ನು ವಿಶದೀಕರಿಸಲಾಗಿದೆ. ಇದು ಯುಕ್ತಿಪೂರ್ಣನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹನ ಬಳಿಯಿಂದಿರುವುದಾಗಿದೆ. ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬಾರದು ಎಂಬುದಕ್ಕಾಗಿ. ಖಂಡಿತವಾಗಿಯೂ ನಾನು ನಿಮಗೆ ಅವನಿಂದಿರುವ ಒಬ್ಬ ಮುನ್ನೆಚ್ಚರಿಕೆ ನೀಡುವವನೂ, ಶುಭವಾರ್ತೆ ತಿಳಿಸುವವನೂ ಆಗಿರುವೆನು." [ಹೂದ್:1-2]. ಜನರು ನಿರ್ವಹಿಸುವ ಆರಾಧನಾ ಕರ್ಮಗಳಾದ ಪ್ರಾರ್ಥನೆ, ಭಯ, ನಿರೀಕ್ಷೆ, ನಮಾಝ್, ಉಪವಾಸ, ಬಲಿ, ಹರಕೆ ಇತ್ಯಾದಿಗಳನ್ನು ವಿನಮ್ರ ಸ್ಥಿತಿಯಲ್ಲಿ — ಅಲ್ಲಾಹನ ಪ್ರತಿಫಲದ ನಿರೀಕ್ಷೆ ಮತ್ತು ಶಿಕ್ಷೆಯ ಭಯದೊಂದಿಗೆ, ಅವನಲ್ಲಿರುವ ಪರಿಪೂರ್ಣ ಪ್ರೀತಿ ಮತ್ತು ಅವನ ಮಹಾತ್ಮೆಗೆ ಸಂಪೂರ್ಣ ಶರಣಾಗಿ — ಅಲ್ಲಾಹನಿಗಾಗಿ ಮಾತ್ರ ಅರ್ಪಿಸುವುದೇ ಆರಾಧನೆಯ ನಿಜವಾದ ಅರ್ಥ. ಈ ಮಹಾ ತತ್ವವನ್ನು ವಿವರಿಸುವುದಕ್ಕಾಗಿಯೇ ಪವಿತ್ರ ಕುರ್ಆನ್ನ ಹೆಚ್ಚಿನ ಭಾಗಗಳು ಅವತೀರ್ಣವಾಗಿವೆ. ಸರ್ವಶಕ್ತನಾದ ಅವನು ಹೇಳಿದಂತೆ: "ಆದ್ದರಿಂದ ಶರಣಾಗತಿಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಿರಿ. ಅರಿಯಿರಿ! ನಿಷ್ಕಳಂಕವಾದ ಶರಣಾಗತಿಯು ಅಲ್ಲಾಹನಿಗೆ ಮಾತ್ರ ಅರ್ಹವಾದುದಾಗಿದೆ." [ಅಝ್ಝುಮರ್:2-3] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸದಿರಲು ತಮ್ಮ ಪ್ರಭು ವಿಧಿಸಿರುವನು." [ಅಲ್-ಇಸ್ರಾ:23] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಆದ್ದರಿಂದ ಶರಣಾಗತಿಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನೊಂದಿಗೆ ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ." [ಗಾಫಿರ್:14]. ಸಹೀಹುಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಂನಲ್ಲಿರುವ ಮುಆದ್(ರ) ರವರ ವರದಿಯಂತೆ ಪ್ರವಾದಿ(ಸ) ಹೇಳಿದರು: "ಅಲ್ಲಾಹನನ್ನು ಮಾತ್ರ ಆರಾಧಿಸುವುದು ಮತ್ತು ಅವನೊಡನೆ ಯಾರನ್ನೂ ಸಹಭಾಗಿಯಾಗಿ ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ.".

ಇಸ್ಲಾಮಿನ ಐದು ಬಾಹ್ಯ ಸ್ತಂಭಗಳಲ್ಲಿ ವಿಶ್ವಾಸವಿಡುವುದು ಸೇರಿದಂತೆ ಅಲ್ಲಾಹು ವಿಶ್ವಾಸವಿಡಲು ಕಡ್ಡಾಯಗೊಳಿಸಿದ ಎಲ್ಲದರಲ್ಲೂ ವಿಶ್ವಾಸವಿಡುವುದು.

ಇಸ್ಲಾಮಿನ ಐದು ಬಾಹ್ಯ ಸ್ತಂಭಗಳಲ್ಲಿ ವಿಶ್ವಾಸವಿಡುವುದು ಸೇರಿದಂತೆ ಅಲ್ಲಾಹು ವಿಶ್ವಾಸವಿಡಲು ಕಡ್ಡಾಯಗೊಳಿಸಿದ ಎಲ್ಲದರಲ್ಲೂ ವಿಶ್ವಾಸವಿಡುವುದು ಅಲ್ಲಾಹನಲ್ಲಿ ವಿಶ್ವಾಸವಿಡುವುದರ ಭಾಗವಾಗಿದೆ. ಆ ಐದು ಸ್ತಂಭಗಳು ಹೀಗಿವೆ: ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಸಾಧ್ಯವಿರುವವರು ಅಲ್ಲಾಹನ ಪವಿತ್ರ ಭವನಕ್ಕೆ ಹಜ್ಜ್ ನಿರ್ವಹಿಸುವುದು. ಇವುಗಳ ಹೊರತಾಗಿ, ಪರಿಶುದ್ಧ ಧರ್ಮಸಂಹಿತೆಯಲ್ಲಿ ಬಂದಿರುವ ಇತರ ಎಲ್ಲಾ ಕಡ್ಡಾಯಕಾರ್ಯಗಳಲ್ಲೂ ವಿಶ್ವಾಸವಿಡಬೇಕಾಗಿದೆ.

ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿವಹಿಸುವುದು ಈ ಸ್ತಂಭಗಳಲ್ಲಿ ಅತಿಪ್ರಮುಖವಾಗಿದೆ. ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಎಂಬ ಸಾಕ್ಷ್ಯವು ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಎಂಬುದನ್ನು ಬೇಡುತ್ತದೆ. ಇದು "ಲಾ ಇಲಾಹ ಇಲ್ಲಲ್ಲಾ" ಎಂಬ ಸಾಕ್ಷಿವಚನದ ಅರ್ಥವಾಗಿದೆ. ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಎಂಬುದು ಇದರ ಅರ್ಥವಾಗಿರುವುದರಿಂದ, ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಮಾನವರು, ದೇವದೂತರು, ಜಿನ್ನ್ಗಳು ಮುಂತಾದವರೆಲ್ಲರೂ ಮಿಥ್ಯ ದೇವರುಗಳಾಗಿದ್ದಾರೆ ಮತ್ತು ಅಲ್ಲಾಹು ಮಾತ್ರ ಸತ್ಯದೇವರಾಗಿದ್ದಾನೆ ಎಂದು ತಿಳಿಯುತ್ತದೆ. ಸರ್ವಶಕ್ತನಾದ ಅಲ್ಲಾಹು ಹೇಳಿದಂತೆ: "ಅದು ಏಕೆಂದರೆ ಅಲ್ಲಾಹು ಸತ್ಯವಾಗಿರುವನು, ಅವನ ಹೊರತು ಅವರು ಏನನ್ನು ಕರೆದು ಪ್ರಾರ್ಥಿಸುತ್ತಿರುವರೋ ಅದು ಮಿಥ್ಯೆಯಾಗಿದೆ." [ಅಲ್-ಹಜ್ಜ್:62] ಅಲ್ಲಾಹನು ಜಿನ್ನ್ ಮತ್ತು ಮಾನವರನ್ನು ಈ ಮಹಾ ತತ್ವಕ್ಕಾಗಿ ಸೃಷ್ಟಿಸಿದ್ದಾನೆ, ಅದನ್ನು ಅವರಿಗೆ ಆಜ್ಞಾಪಿಸಿದ್ದಾನೆ ಮತ್ತು ಅದಕ್ಕಾಗಿಯೇ ಪ್ರವಾದಿಗಳನ್ನು ಕಳುಹಿಸಿದ್ದಾನೆ ಹಾಗೂ ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಾನೆ ಎಂದು ಈಗಾಗಲೇ ವಿವರಿಸಲಾಗಿದೆ. ಆದ್ದರಿಂದ, ಇದರ ಬಗ್ಗೆ ನೀವು ಸರಿಯಾಗಿ ಆಲೋಚಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಮುಸ್ಲಿಮರಲ್ಲಿ ಹೆಚ್ಚಿನವರು ಅಲ್ಲಾಹನೊಂದಿಗೆ ಇತರರನ್ನು ಆರಾಧಿಸುವ ಮತ್ತು ಅಲ್ಲಾಹನಿಗೆ ಮಾತ್ರ ಸೀಮಿತವಾದ ಹಕ್ಕನ್ನು ಇತರರಿಗೆ ನೀಡುವ ತನಕ ಈ ಮಹಾ ತತ್ವದ ಬಗ್ಗೆ ಎಷ್ಟರ ಮಟ್ಟಿಗೆ ಅಜ್ಞಾನದಲ್ಲಿದ್ದಾರೆಂದು ನಿಮಗೆ ಸ್ಪಷ್ಟವಾಗಬಹುದು. ಅಲ್ಲಾಹು ನಮ್ಮನ್ನು ಇವುಗಳಿಂದ ರಕ್ಷಿಸಲಿ.

ಸರ್ವಶಕ್ತನಾದ ಅಲ್ಲಾಹು ತನ್ನ ಜ್ಞಾನ ಮತ್ತು ಸಾಮರ್ಥ್ಯದಿಂದ ಪ್ರಪಂಚವನ್ನು ಸೃಷ್ಟಿಸಿದ್ದಾನೆ, ಅದರ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾನೆ ಮತ್ತು ನಿಯಂತ್ರಿಸುತ್ತಿದ್ದಾನೆಂದು ವಿಶ್ವಾಸವಿಡುವುದು.

ಅಲ್ಲಾಹು ತನ್ನ ಜ್ಞಾನ ಮತ್ತು ಸಾಮರ್ಥ್ಯದಿಂದ ಪ್ರಪಂಚವನ್ನು ಸೃಷ್ಟಿಸಿದ್ದಾನೆ, ಅದರ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾನೆ ಮತ್ತು ತನ್ನ ಇಚ್ಛೆಯಂತೆ ನಿಯಂತ್ರಿಸುತ್ತಿದ್ದಾನೆಂದು ವಿಶ್ವಾಸವಿಡುವುದು; ಮತ್ತು ಅದೇ ರೀತಿ, ಅವನು ಇಹಲೋಕ ಮತ್ತು ಪರಲೋಕಗಳ ಯಜಮಾನ, ಸರ್ವಲೋಕಗಳ ಒಡೆಯ; ಅವನ ಹೊರತಾದ ಬೇರೆ ಸೃಷ್ಟಿಕರ್ತರಿಲ್ಲ ಮತ್ತು ಅವನ ಹೊರತಾದ ಬೇರೆ ಯಜಮಾನನಿಲ್ಲ ಎಂದು ವಿಶ್ವಾಸವಿಡುವುದು ಅಲ್ಲಾಹನಲ್ಲಿರುವ ವಿಶ್ವಾಸದಲ್ಲಿ ಒಳಗೊಳ್ಳುತ್ತದೆ. ಅದೇ ರೀತಿ, ಜನರ ಸುಧಾರಣೆಗಾಗಿ ಮತ್ತು ಇಹಲೋಕ ಹಾಗೂ ಪರಲೋಕದಲ್ಲಿ ಅವರ ಮೋಕ್ಷ ಮತ್ತು ಯಶಸ್ಸು ಇರುವ ದಾರಿಯ ಕಡೆಗೆ ಅವರನ್ನು ಆಹ್ವಾನಿಸಲು ಅವನು ಸಂದೇಶವಾಹಕರುಗಳನ್ನು ಕಳುಹಿಸಿದನು ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದನು ಎಂದು ವಿಶ್ವಾಸವಿಡುವುದು. ಪರಮ ಪರಿಶುದ್ಧನಾದ ಅವನಿಗೆ ಈ ಯಾವುದೇ ವಿಷಯಗಳಲ್ಲೂ ಸಹಭಾಗಿಗಳಿಲ್ಲ ಎಂದು ವಿಶ್ವಾಸವಿಡುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಲ್ಲಾಹು ಎಲ್ಲ ವಸ್ತುಗಳ ಸೃಷ್ಟಿಕರ್ತನಾಗಿರುವನು. ಅವನು ಎಲ್ಲ ವಸ್ತುಗಳ ಮೇಲೂ ಕಾರ್ಯನಿರ್ವಾಹಕನಾಗಿರುವನು." [ಅಝ್ಝುಮರ್:62] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಖಂಡಿತವಾಗಿಯೂ ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹನಾಗಿರುವನು ನಿಮ್ಮ ಪ್ರಭು. ತರುವಾಯ ಅವನು ಸಿಂಹಾಸನಾರೂಢನಾದನು.ಅವನು ಹಗಲನ್ನು ರಾತ್ರಿಯಿಂದ ಮುಚ್ಚುವನು. ಕ್ಷಿಪ್ರಗತಿಯಲ್ಲಿ ಅದು ಹಗಲನ್ನು ಹುಡುಕುತ್ತಾ ಸಾಗುವುದು. ತನ್ನ ಆಜ್ಞೆಗೆ ವಿಧೇಯಗೊಳಿಸಲಾದ ರೀತಿಯಲ್ಲಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು (ಅವನು ಸೃಷ್ಟಿಸಿರುವನು). ತಿಳಿಯಿರಿ! ಸೃಷ್ಟಿ ಮತ್ತು ಆಜ್ಞಾಧಿಕಾರವು ಅವನಿಗೇ ಆಗಿವೆ. ಸರ್ವಲೋಕಗಳ ಪ್ರಭುವಾದ ಅಲ್ಲಾಹು ಅನುಗ್ರಹಪೂರ್ಣನಾಗಿರುವನು." [ಅಲ್-ಅಅ್ರಾಫ್:54]

ಅದೇ ರೀತಿ, ಅಲ್ಲಾಹನ ಅತ್ಯುತ್ತಮ ಹೆಸರುಗಳಲ್ಲಿ ಮತ್ತು ಅತ್ಯುನ್ನತ ಗುಣಲಕ್ಷಣಗಳಲ್ಲಿ – ಅವುಗಳನ್ನು (ಅಥವಾ ಅವುಗಳ ಅರ್ಥವನ್ನು) ವಿರೂಪಗೊಳಿಸದೆ, ಅವುಗಳನ್ನು (ಅಥವಾ ಅವುಗಳ ಅರ್ಥವನ್ನು) ನಿಷೇಧಿಸದೆ, ಅವು ಇಂತಿಂತಹ ರೀತಿಯಲ್ಲಿವೆ ಎಂದು ಅವುಗಳಿಗೆ ವಿಧಾನವನ್ನು ನೀಡದೆ ಮತ್ತು ಅವುಗಳನ್ನು ಸೃಷ್ಟಿಗಳ ಗುಣಲಕ್ಷಣಗಳಿಗೆ ಹೋಲಿಸದೆ – ವಿಶ್ವಾಸವಿಡುವುದು.

ಪವಿತ್ರ ಕುರ್ಆನ್ನಲ್ಲಿ ಬಂದಿರುವ ಮತ್ತು ಪ್ರವಾದಿಯವರ ಸುನ್ನತ್ತಿನಲ್ಲಿ ಬಂದಿರುವ ಅಲ್ಲಾಹನ ಅತಿಸುಂದರವಾದ ಹೆಸರುಗಳು ಮತ್ತು ಅತ್ಯುನ್ನತವಾದ ಗುಣಲಕ್ಷಣಗಳಲ್ಲಿ ವಿಶ್ವಾಸವಿಡುವುದು ಅಲ್ಲಾಹನಲ್ಲಿ ವಿಶ್ವಾಸವಿಡುವುದರ ಭಾಗವಾಗಿದೆ. ಆದರೆ ಅವುಗಳನ್ನು (ಅಥವಾ ಅವುಗಳ ಅರ್ಥವನ್ನು) ವಿರೂಪಗೊಳಿಸಬಾರದು, ಅವುಗಳನ್ನು (ಅಥವಾ ಅವುಗಳ ಅರ್ಥವನ್ನು) ನಿಷೇಧಿಸಬಾರದು, ಅವು ಇಂತಿಂತಹ ರೀತಿಯಲ್ಲಿವೆ ಎಂದು ಅವುಗಳಿಗೆ ವಿಧಾನವನ್ನು ನೀಡಬಾರದು ಮತ್ತು ಅವುಗಳನ್ನು ಸೃಷ್ಟಿಗಳ ಗುಣಲಕ್ಷಣಗಳಿಗೆ ಹೋಲಿಸಬಾರದು. ಬದಲಿಗೆ, ಅವು ಹೇಗೆ ಬಂದಿವೆಯೋ ಹಾಗೆಯೇ ಅವುಗಳಲ್ಲಿ ವಿಶ್ವಾಸವಿಡಬೇಕು. ಅವು ಸೂಚಿಸುವ ಮಹಾನ್ ಅರ್ಥಗಳಾದ ಅಲ್ಲಾಹನ ವರ್ಣನೆಗಳಲ್ಲಿ ವಿಶ್ವಾಸವಿಡಬೇಕು ಮತ್ತು ಅವುಗಳ ಮೂಲಕ ಅಲ್ಲಾಹನಿಗೆ ಹೊಂದಿಕೆಯಾಗುವ ವಿಧದಲ್ಲಿ ಅಲ್ಲಾಹನನ್ನು ವರ್ಣಿಸಬೇಕು. ವರ್ಣಿಸುವಾಗ ಅವನ ಗುಣಲಕ್ಷಣಗಳನ್ನು ಅವನ ಸೃಷ್ಟಿಗಳ ಗುಣಲಕ್ಷಣಗಳಿಗೆ ಹೋಲಿಕೆ ಮಾಡಬಾರದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಆಲಿಸುವವನೂ ಎಲ್ಲವನ್ನು ವೀಕ್ಷಿಸುವವನೂ ಆಗಿರುವನು." [ಅಶ್ಶೂರಾ:11]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಆದ್ದರಿಂದ ನೀವು ಅಲ್ಲಾಹನಿಗೆ ಉಪಮೆಗಳನ್ನು ಹೇಳದಿರಿ. ಖಂಡಿತವಾಗಿಯೂ ಅಲ್ಲಾಹು ಅರಿಯುವನು ಮತ್ತು ನೀವು ಅರಿಯಲಾರಿರಿ." [ಅನ್ನಹ್ಲ್:74]. ಇದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು ಮತ್ತು ಅವರನ್ನು ಅತ್ಯುತ್ತಮವಾಗಿ ಅನುಸರಿಸಿದ ಅಹ್ಲು ಸ್ಸುನ್ನ ವಲ್ ಜಮಾಅದ ವಿಶ್ವಾಸವಾಗಿದೆ. ಇಮಾಂ ಅಬುಲ್ ಹಸನ್ ಅಶ್ಅರಿರವರು (ಅಲ್ಲಾಹು ಅವರಿಗೆ ಕರುಣೆ ತೋರಲಿ) ತಮ್ಮ ಅಲ್-ಮಕಾಲಾತು ಅನ್ ಅಸ್ಹಾಬಿಲ್ ಹದೀಸ್ ವಅಹ್ಲಿ ಸ್ಸುನ್ನ ಎಂಬ ಪುಸ್ತಕದಲ್ಲಿ ಇದೇ ವಿಶ್ವಾಸವನ್ನು ಉಲ್ಲೇಖಿಸಿದ್ದಾರೆ. ಇತರ ವಿದ್ವಾಂಸರು ಕೂಡ ಇದೇ ವಿಶ್ವಾಸವನ್ನು ಉಲ್ಲೇಖಿಸಿದ್ದಾರೆ. ಔಝಾಈ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೇಳುತ್ತಾರೆ: ಝುಹ್ರಿ ಮತ್ತು ಮಕ್ಹೂಲ್ರೊಡನೆ ಗುಣಲಕ್ಷಣಗಳನ್ನು ಹೊಂದಿರುವ ಕುರ್ಆನ್ ವಚನಗಳ ಬಗ್ಗೆ ಕೇಳಲಾಯಿತು. ಆಗ ಅವರು ಹೇಳಿದರು: "ಅವು ಹೇಗೆ ಬಂದಿವೆಯೋ ಹಾಗೆಯೇ ಅವುಗಳನ್ನು ಸ್ವೀಕರಿಸಿರಿ." ವಲೀದ್ ಬಿನ್ ಮುಸ್ಲಿಂ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೇಳುತ್ತಾರೆ: ಮಾಲಿಕ್, ಔಝಾಈ, ಲೈಸ್ ಬಿನ್ ಸಅದ್, ಸುಫ್ಯಾನ್ ಅಸ್ಸೌರಿ (ಅಲ್ಲಾಹು ಅವರೆಲ್ಲರಿಗೆ ಕರುಣೆ ತೋರಲಿ) ಮುಂತಾದವರಲ್ಲಿ ಗುಣಲಕ್ಷಣಗಳನ್ನು ಹೊಂದಿರುವ ಹದೀಸ್ ಮತ್ತು ವರದಿಗಳ ಬಗ್ಗೆ ಕೇಳಲಾದಾಗ, ಅವರೆಲ್ಲರೂ ಹೀಗೆ ಹೇಳಿದರು: "ಅವು ಹೇಗೆ ಬಂದಿವೆಯೋ ಹಾಗೆಯೇ ಅವುಗಳನ್ನು ಸ್ವೀಕರಿಸಿರಿ. ಮತ್ತು ಅವುಗಳ ಸ್ಥಿತಿಗಳನ್ನು ವಿವರಿಸಿ ಹೇಳಬೇಡಿ." ಔಝಾಈ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೇಳುತ್ತಾರೆ: ತಾಬಿಯೀನ್ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗಲೇ ನಾವು ಹೀಗೆ ಹೇಳುತ್ತಿದ್ದೆವು: "ನಿಶ್ಚಯವಾಗಿಯೂ ಅಲ್ಲಾಹು ಅವನ ಸಿಂಹಾಸನದ ಮೇಲಿದ್ದಾನೆ. ಸುನ್ನತ್ನಲ್ಲಿ ಬಂದಿರುವ ಗುಣಲಕ್ಷಣಗಳಲ್ಲಿ ನಾವು ವಿಶ್ವಾಸವಿಡುತ್ತೇವೆ." ಇಮಾಮ್ ಮಾಲಿಕ್ರ ಗುರು ರಬೀಅ ಬಿನ್ ಅಬ್ದುರ್ರಹ್ಮಾನ್ರೊಡನೆ (ಅಲ್ಲಾಹು ಅವರಿಬ್ಬರಿಗೂ ಕರುಣೆ ತೋರಲಿ) ಇಸ್ತಿವಾ (ಸಿಂಹಾಸನಾರೂಢನಾಗುವುದು) ಬಗ್ಗೆ ಕೇಳಿದಾಗ ಅವರು ಹೇಳಿದರು: "ಸಿಂಹಾಸನಾರೂಢನಾಗುವುದು ತಿಳಿಯದ ವಿಷಯವಲ್ಲ, ಆದರೆ ಅದು ಹೇಗೆಂಬುದು ಬುದ್ಧಿಗೆ ನಿಲುಕುವಂತದ್ದಲ್ಲ. ಅಲ್ಲಾಹನು ಸಂದೇಶವನ್ನು ನೀಡಿದನು. ಸಂದೇಶವಾಹಕರು ಅದನ್ನು ಸ್ಪಷ್ಟವಾಗಿ ತಲುಪಿಸಿದರು. ಅದರಲ್ಲಿ ನಂಬಿಕೆಯಿಡುವುದು ನಮ್ಮ ಕರ್ತವ್ಯವಾಗಿದೆ." ಇದೇ ಪ್ರಶ್ನೆಯನ್ನು ಇಮಾಂ ಮಾಲಿಕ್ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರೊಡನೆ ಕೇಳಲಾದಾಗ ಅವರು ಹೀಗೆ ಉತ್ತರಿಸಿದರು: "ಸಿಂಹಾಸನಾರೂಢನಾಗುವುದು ಎಲ್ಲರಿಗೂ ತಿಳಿದಿದೆ. ಆದರೆ ಅದು ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ. ಅದರಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ. ಅದರ ಬಗ್ಗೆ ಪ್ರಶ್ನಿಸುವುದು ನೂತನವಾದವಾಗಿದೆ." ನಂತರ ಅವರು ಪ್ರಶ್ನೆ ಕೇಳಿದವನೊಡನೆ ಹೇಳಿದರು: "ನಾನು ನಿನ್ನನ್ನು ಒಬ್ಬ ಕೆಟ್ಟ ಮನುಷ್ಯನಾಗಿ ಕಾಣುತ್ತೇನೆ." ನಂತರ ಅವರ ಆಜ್ಞೆಯಂತೆ ಆ ವ್ಯಕ್ತಿಯನ್ನು ಹೊರಕಳುಹಿಸಲಾಯಿತು. ಸತ್ಯವಿಶ್ವಾಸಿಗಳ ಮಾತೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದಲೂ ಇದೇ ಅರ್ಥವು ವರದಿಯಾಗಿದೆ. ಇಮಾಂ ಅಬೂ ಅಬ್ದುರ್ರಹ್ಮಾನ್ ಬಿನ್ ಮುಬಾರಕ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ನಾವು ನಮ್ಮ ರಬ್ಬ್ನನ್ನು ತಿಳಿದ ಪ್ರಕಾರ ಅವನು ಆಕಾಶಗಳ ಮೇಲೆ ಅವನ ಸಿಂಹಾಸನದಲ್ಲಿ ಅವನ ಸೃಷ್ಟಿಗಳಿಂದ ಸಂಪೂರ್ಣ ಪ್ರತ್ಯೇಕವಾಗಿ ಇದ್ದಾನೆ." ಈ ವಿಷಯದಲ್ಲಿ ವಿದ್ವಾಂಸರ ಹೇಳಿಕೆಗಳು ಹೇರಳವಾಗಿದ್ದು ಅವೆಲ್ಲವನ್ನೂ ಇಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಬಯಸುವವರು ಅಹ್ಲುಸ್ಸುನ್ನದ ವಿದ್ವಾಂಸರು ಈ ವಿಷಯದಲ್ಲಿ ಬರೆದ ಪುಸ್ತಕಗಳನ್ನು ಅವಲೋಕನ ಮಾಡಿಕೊಳ್ಳಬೇಕು. ಉದಾಹರಣೆಗೆ, ಅಬ್ದುಲ್ಲಾ ಬಿನ್ ಇಮಾಂ ಅಹ್ಮದ್ ರವರ ಕಿತಾಬುಸ್ಸುನ್ನ, ಪ್ರಮುಖ ಇಮಾಮರಾದ ಮುಹಮ್ಮದ್ ಬಿನ್ ಖುಝೈಮರ ಕಿತಾಬು ತ್ತೌಹೀದ್, ಅಬುಲ್ ಕಾಸಿಂ ಲಾಲ್ಕಾಈ ತಬರಿಯವರ ಕಿತಾಬುಸ್ಸುನ್ನ, ಅಬೂಬಕರ್ ಬಿನ್ ಅಬೂ ಆಸಿಮ್ರವರ ಕಿತಾಬುಸ್ಸುನ್ನ, ಶೈಖುಲ್ ಇಸ್ಲಾಂ ಇಬ್ನ್ ತೈಮಿಯ್ಯರವರು ಹುಮಾತ್ ನಿವಾಸಿಗಳಿಗೆ ಬರೆದ ಉತ್ತರ, ಇದೊಂದು ಶ್ರೇಷ್ಠ ಉತ್ತರವಾಗಿದ್ದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಅದರಲ್ಲಿ ಅವರು ಅಹ್ಲುಸ್ಸುನ್ನದವರ ವಿಶ್ವಾಸವನ್ನು ವಿವರಿಸಿದ್ದಾರೆ ಮತ್ತು ಅವರ ಅನೇಕ ಅಭಿಪ್ರಾಯಗಳನ್ನು ಉಲ್ಲೇಖಿಸಿದ್ದಾರೆ. ಅದೇ ರೀತಿ, ಅಹ್ಲುಸ್ಸುನ್ನದವರ ಅಭಿಪ್ರಾಯ ಸರಿಯೆನ್ನುವುದಕ್ಕೆ ಮತ್ತು ಅವರ ವಿರೋಧಿಗಳ ಅಭಿಪ್ರಾಯ ತಪ್ಪೆನ್ನುವುದಕ್ಕೆ ಅನೇಕ ಧಾರ್ಮಿಕ ಮತ್ತು ಬೌದ್ಧಿಕ ಪುರಾವೆಗಳನ್ನು ಉಲ್ಲೇಖಿಸಿದ್ದಾರೆ. ಅದೇ ರೀತಿ, ತದ್ಮೀರಿಯ್ಯ ಎಂಬ ಅವರ ಇನ್ನೊಂದು ಪುಸ್ತಕ. ಅದರಲ್ಲಿ ಅವರು ಈ ವಿಷಯವನ್ನು ಸರಳವಾಗಿ ವಿವರಿಸಿದ್ದಾರೆ. ಧಾರ್ಮಿಕ ಮತ್ತು ಬೌದ್ಧಿಕ ಪುರಾವೆಗಳ ಮೂಲಕ ಅಹ್ಲುಸ್ಸುನ್ನದ ವಿಶ್ವಾಸವನ್ನು ಅದರಲ್ಲಿ ವಿವರಿಸಿದ್ದಾರೆ. ಉತ್ತಮ ಉದ್ದೇಶದಿಂದ ಮತ್ತು ಸತ್ಯವನ್ನು ತಿಳಿಯಬೇಕೆಂಬ ಉತ್ಸುಕತೆಯಿಂದ ಓದುವವರಿಗೆ ಸತ್ಯವು ಸ್ಪಷ್ಟವಾಗುವ ಮತ್ತು ಸುಳ್ಳು ನಾಶವಾಗುವ ರೀತಿಯಲ್ಲಿ ಅವರು ಅದರಲ್ಲಿ ವಿರೋಧಿಗಳ ವಾದಗಳಿಗೆ ಉತ್ತರಿಸಿದ್ದಾರೆ. ಅಲ್ಲಾಹನ ಹೆಸರುಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಅಹ್ಲುಸ್ಸುನ್ನದ ವಿಶ್ವಾಸಕ್ಕೆ ವಿರುದ್ಧವಾಗಿ ಸಾಗುವವರು, ಧಾರ್ಮಿಕ ಮತ್ತು ಬೌದ್ಧಿಕ ಪುರಾವೆಗಳಿಗೆ ವಿರುದ್ಧವಾಗುವುದು ಮಾತ್ರವಲ್ಲದೆ ಅವರು ಸಾಬೀತುಪಡಿಸುವ ಮತ್ತು ನಿರಾಕರಿಸುವ ಎಲ್ಲಾ ವಿಷಯಗಳಲ್ಲೂ ಅವರು ಸ್ಪಷ್ಟ ವಿರೋಧಾಭಾಸವನ್ನು ಹೊಂದಿರುವುದು ಅನಿವಾರ್ಯವಾಗಿ ಬಿಡುತ್ತದೆ. ಆದರೆ ಅಹ್ಲುಸ್ಸುನ್ನ ವಲ್ ಜಮಾಅದವರು ಅಲ್ಲಾಹು ಸ್ವಯಂ ಅವನ ವಿಷಯದಲ್ಲಿ ಅವನ ಪವಿತ್ರ ಗ್ರಂಥದ ಮೂಲಕ ಏನು ದೃಢೀಕರಿಸಿದ್ದಾನೋ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸುನ್ನತ್ತಿನ ಮೂಲಕ ಏನು ದೃಢೀಕರಿಸಿದ್ದಾರೋ, ಅವುಗಳನ್ನು ಯಾವುದೇ ಹೋಲಿಕೆ ಮಾಡದೆ ದೃಢೀಕರಿಸುತ್ತಾರೆ. ಅವರು ಅಲ್ಲಾಹನನ್ನು ಸೃಷ್ಟಿಗಳ ಹೋಲಿಕೆಯಿಂದ ಸಂಪೂರ್ಣ ಮುಕ್ತವಾಗಿಸಿದ್ದಾರೆ. ಆದ್ದರಿಂದ ಅವರ ಮಾತುಗಳಲ್ಲಿ ಯಾವುದೇ ವಿರೋಧಾಭಾಸ ಕಂಡುಬರುವುದಿಲ್ಲ. ಅವರು ಎಲ್ಲಾ ಪುರಾವೆಗಳನ್ನೂ ಕಾರ್ಯರೂಪಕ್ಕೆ ತಂದರು. ಅಲ್ಲಾಹನ ಸಂದೇಶವಾಹಕರು ತಂದ ಸುನ್ನತ್ತನ್ನು ಬಿಗಿಯಾಗಿ ಹಿಡಿಯುವವರು ಮತ್ತು ಅದಕ್ಕಾಗಿ ಪರಿಶ್ರಮಿಸುವವರು ಹಾಗೂ ಸತ್ಯದ ಕಡೆಗೆ ಮುನ್ನಡೆಸಬೇಕು, ಅದರ ಆಧಾರವನ್ನು ಪ್ರಕಟಗೊಳಿಸಬೇಕೆಂದು ಬಯಸುತ್ತಾ ಅಲ್ಲಾಹನಿಗೆ ನಿಷ್ಕಳಂಕತೆ ತೋರುವವರನ್ನು ಸತ್ಯಕ್ಕೆ ಮುನ್ನಡೆಸುವುದು ಅಲ್ಲಾಹನ ಕಾರ್ಯವಿಧಾನವಾಗಿದೆ. "ಆದರೆ ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುವೆವು. ಆಗ ಅದು ಅಸತ್ಯವನ್ನು ನಾಶ ಮಾಡುವುದು. ಅದರೊಂದಿಗೆ ಅಸತ್ಯವು ಅಳಿದುಹೋಗುವುದು." [ಅಲ್-ಅಂಬಿಯಾ:18] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅವರು ಯಾವುದೇ ಸಮಸ್ಯೆಯೊಂದಿಗೆ ತಮ್ಮ ಬಳಿ ಬರಲಾರರು, ನಾವು ಅದರ ನಿಜಸ್ಥಿತಿಯನ್ನು ಮತ್ತು ಅತ್ಯುತ್ತಮವಾದ ವಿವರಣೆಯನ್ನು ತಮಗೆ ತಂದುಕೊಡದಿರುವ ಹೊರತು." [ಅಲ್-ಫುರ್ಖಾನ್:33]. "ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹನೇ ನಿಮ್ಮ ರಬ್ಬ್. ನಂತರ ಅವನು ಸಿಂಹಾಸನಾರೂಢನಾದನು." [ಅಲ್-ಅಅ್ರಾಫ್:54] ಎಂಬ ಸರ್ವಶಕ್ತನಾದ ಅಲ್ಲಾಹನ ವಚನವನ್ನು ವಿವರಿಸುತ್ತಾ ಹಾಫಿಝ್ ಇಬ್ನ್ ಕಸೀರ್ (ಅಲ್ಲಾಹು ಅವರಿಗೆ ಕರುಣೆ ತೋರಲಿ) ತಮ್ಮ ಪ್ರಸಿದ್ಧ ವ್ಯಾಖ್ಯಾನ ಗ್ರಂಥದಲ್ಲಿ ಉಲ್ಲೇಖಾರ್ಹವಾದ ಮತ್ತು ಅತ್ಯಂತ ಪ್ರಯೋಜನಕಾರಿಯಾದ ಅತ್ಯುತ್ತಮ ಮಾತನ್ನು ಹೇಳಿದ್ದಾರೆ. ಅವರು ಹೇಳಿದ ಮಾತು ಹೀಗಿದೆ: ಈ ವಿಷಯದಲ್ಲಿ ಜನರಿಗೆ ಅನೇಕ ಅಭಿಪ್ರಾಯಗಳಿವೆ. ಅವೆಲ್ಲವನ್ನೂ ವಿವರಿಸಲು ಇದು ಯೋಗ್ಯ ಸ್ಥಳವಲ್ಲ. ನಾವು ಈ ವಿಷಯದಲ್ಲಿ ಮಾಲಿಕ್, ಔಝಾಈ, ಸೌರಿ, ಲೈಸ್ ಬಿನ್ ಸಅದ್, ಶಾಫಿಈ, ಅಹ್ಮದ್, ಇಸ್ಹಾಕ್ ಬಿನ್ ರಾಹವೈಹಿ ಮುಂತಾದ ಹಿಂದೆಯೂ ಈಗಲೂ ಮುಸ್ಲಿಂ ಮುಖಂಡರಾದ ಸಲಫ್ ಸಾಲಿಹ್ಗಳ (ಸಜ್ಜನ ಪೂರ್ವಜರ) ಮಾರ್ಗವನ್ನು ಅನುಸರಿಸುತ್ತೇವೆ. ಅಂದರೆ ಅವುಗಳನ್ನು (ಅಲ್ಲಾಹನ ಹೆಸರು ಮತ್ತು ಗುಣಲಕ್ಷಣಗಳನ್ನು) ಇಂತಿಂತಹ ರೀತಿಯಲ್ಲಿವೆ ಎಂದು ಹೇಳದೆ, ಅವುಗಳನ್ನು ಸೃಷ್ಟಿಗಳ ಗುಣಲಕ್ಷಣಗಳಿಗೆ ಹೋಲಿಸದೆ, ಅವುಗಳನ್ನು ಅಥವಾ ಅವುಗಳ ಅರ್ಥವನ್ನು ನಿಷೇಧಿಸದೆ ಅವು ಹೇಗೆ ಬಂದಿವೆಯೋ ಹಾಗೆಯೇ ಸ್ವೀಕರಿಸುತ್ತೇವೆ. ವಾಸ್ತವವಾಗಿ, ಹೋಲಿಕೆ ಮಾಡುವವರ ಮೆದುಳಿನಲ್ಲಿ ಏನು ಹೊಳೆಯುತ್ತದೋ ಅದನ್ನು ನಾವು ಅಲ್ಲಾಹನಿಗೆ ನಿಷೇಧಿಸುತ್ತೇವೆ. ಏಕೆಂದರೆ, ಅಲ್ಲಾಹನಿಗೆ ಹೋಲಿಕೆಯಾಗಿ ಅವನ ಸೃಷ್ಟಿಗಳಲ್ಲಿ ಯಾರೂ ಇಲ್ಲ. ಅವನಿಗೆ ಹೋಲಿಕೆಯಾಗಿ ಯಾರೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. ಬದಲಿಗೆ, ವಸ್ತುಸ್ಥಿತಿಯೇನೆಂದರೆ ಬುಖಾರಿಯ ಗುರುವರ್ಯರು ಹಾಗೂ ಇಮಾಮರಾದ ನಈಮ್ ಬಿನ್ ಹಮ್ಮಾದ್ ಖುಝಾಈ ಮುಂತಾದವರು ಹೇಳಿದ ಈ ಮಾತು: "ಯಾರು ಅಲ್ಲಾಹನನ್ನು ಅವನ ಸೃಷ್ಟಿಗಳಿಗೆ ಹೋಲಿಸುತ್ತಾರೋ ಅವನು ಸತ್ಯನಿಷೇಧಿಗಳಾದರು. ಅಲ್ಲಾಹು ಅವನನ್ನು ವರ್ಣಿಸಿದ ಗುಣಗಳನ್ನು ಯಾರು ನಿಷೇಧಿಸುತ್ತಾರೋ ಅವರು ಸತ್ಯನಿಷೇಧಿಗಳಾದರು. ಅಲ್ಲಾಹು ಮತ್ತು ಅವನ ಸಂದೇಶವಾಹಕರು ವರ್ಣಿಸಿದ ಯಾವುದರಲ್ಲೂ ಸೃಷ್ಟಿಗಳಿಗೆ ಹೋಲಿಕೆಯಿಲ್ಲ. ಅತ್ಯಂತ ಸ್ಪಷ್ಟವಾದ ವಚನಗಳಲ್ಲಿ ಮತ್ತು ಅಧಿಕೃತ ಹದೀಸ್ಗಳಲ್ಲಿ ಉಲ್ಲೇಖಿಸಲಾಗಿರುವ ಗುಣಲಕ್ಷಣಗಳನ್ನು ಯಾರು ಅಲ್ಲಾಹನಿಗೆ ಅವನ ಮಹಾತ್ಮೆಗೆ ಹೊಂದಿಕೆಯಾಗುವ ವಿಧದಲ್ಲಿ ದೃಢೀಕರಿಸುತ್ತಾರೋ ಮತ್ತು ಅವನಿಗೆ ಅಪೂರ್ಣತೆಗಳಿರುವುದನ್ನು ನಿರಾಕರಿಸುತ್ತಾರೋ ಅವರು ಸನ್ಮಾರ್ಗದ ಹಾದಿಯಲ್ಲಿದ್ದಾರೆ."

ದೇವದೂತರಲ್ಲಿ ವಿಶ್ವಾಸವಿಡುವುದು

ದೇವದೂತರಲ್ಲಿ ವಿಶ್ವಾಸವಿಡುವುದು ಎಂದರೆ, ಅವರಲ್ಲಿ ಮೊತ್ತವಾಗಿ ಮತ್ತು ವಿಸ್ತಾರವಾಗಿ ವಿಶ್ವಾಸವಿಡುವುದು. ಅಂದರೆ, ಅಲ್ಲಾಹನಿಗೆ ದೂತರಿದ್ದಾರೆ ಮತ್ತು ಅವನು ಅವರನ್ನು ಅವನ ಆಜ್ಞಾಪಾಲನೆ ಮಾಡಲು ಸೃಷ್ಟಿಸಿದ್ದಾನೆ ಎಂದು ವಿಶ್ವಾಸವಿಡುವುದು. ಅವರು ಅತ್ಯಂತ ಗೌರವಾರ್ಹ ದಾಸರು, ಅವರು ಅವನ ಮಾತನ್ನು ಮೀರುವುದಿಲ್ಲ, ಅವನು ಏನು ಆಜ್ಞಾಪಿಸುತ್ತಾನೋ ಅದನ್ನು ಅವರು ಮಾಡುತ್ತಾರೆ ಎಂಬುದು ಅವರ ಗುಣಗಳಾಗಿವೆ. "ಅವರ ಮುಂದಿರುವುದನ್ನೂ, ಹಿಂದಿರುವುದನ್ನೂ ಅವನು ಅರಿಯುವನು. ಅವನು ತೃಪ್ತಿಪಟ್ಟವರಿಗೇ ಹೊರತು ಅವರು ಶಿಫಾರಸು ಮಾಡಲಾರರು. ಅವರು ಅವನ ಭಯದಿಂದ ನಡುಗುತ್ತಿರುವರು." [ಅಲ್-ಅಂಬಿಯಾ:28] ದೇವದೂತರ ಅನೇಕ ವರ್ಗಗಳಿವೆ. ಅವರಲ್ಲಿ ಸಿಂಹಾಸನವನ್ನು ಹೊರುವವರಿದ್ದಾರೆ. ಸ್ವರ್ಗ ಮತ್ತು ನರಕದ ಕಾವಲುಗಾರರಿದ್ದಾರೆ. ಮನುಷ್ಯರ ಕರ್ಮಗಳನ್ನು ಸಂರಕ್ಷಿಸುವ ಹೊಣೆ ವಹಿಸಲ್ಪಟ್ಟವರಿದ್ದಾರೆ. ಅವರ ಪೈಕಿ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಹೆಸರೆತ್ತಿ ಹೇಳಿದ ಜಿಬ್ರೀಲ್, ಮೀಕಾಈಲ್, ನರಕದ ಕಾವಲುಗಾರ ಮಾಲಿಕ್, ಕಹಳೆ ಊದುವ ಹೊಣೆ ವಹಿಸಲಾದ ಇಸ್ರಾಫೀಲ್ ಮುಂತಾದವರಲ್ಲಿ ನಾವು ವಿಸ್ತಾರವಾಗಿ ವಿಶ್ವಾಸವಿಡುತ್ತೇವೆ. ಅನೇಕ ಅಧಿಕೃತ ಹದೀಸ್ಗಳಲ್ಲಿ ಅವರ ಬಗ್ಗೆ ವಿವರಣೆಯಿದೆ. ಬುಖಾರಿ ಮತ್ತು ಮುಸ್ಲಿಂನಲ್ಲಿರುವ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: "ದೇವದೂತರನ್ನು ಬೆಳಕಿನಿಂದ ಸೃಷ್ಟಿಸಲಾಗಿದೆ, ಜಿನ್ನ್ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಲಾಗಿದೆ ಮತ್ತು ಆದಮರನ್ನು ಅಲ್ಲಾಹನು ನಿಮಗೆ ತಿಳಿಸಿದ ವಸ್ತುವಿನಿಂದ ಸೃಷ್ಟಿಸಲಾಗಿದೆ."ಇದನ್ನು ಮುಸ್ಲಿಂ ತಮ್ಮ ಸಹೀಹ್ನಲ್ಲಿ ವರದಿ ಮಾಡಿದ್ದಾರೆ.

ಗ್ರಂಥಗಳಲ್ಲಿ ವಿಶ್ವಾಸವಿಡುವುದು

ಇದೇ ರೀತಿ ಗ್ರಂಥಗಳಲ್ಲೂ ಮೊತ್ತವಾಗಿ ವಿಶ್ವಾಸವಿಡುವುದು, ಅಂದರೆ ಅಲ್ಲಾಹು ತನ್ನ ಸತ್ಯವನ್ನು ವಿವರಿಸಲು ಮತ್ತು ಅದರ ಕಡೆಗೆ ಆಹ್ವಾನಿಸಲು ತನ್ನ ಪ್ರವಾದಿಗಳಿಗೆ ಮತ್ತು ಸಂದೇಶವಾಹಕರಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಾನೆ ಎಂದು ವಿಶ್ವಾಸವಿಡುವುದು ಕಡ್ಡಾಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ನಾವು ನಮ್ಮ ಸಂದೇಶವಾಹಕರನ್ನು ಸ್ಪಷ್ಟವಾದ ದೃಷ್ಟಾಂತಗಳೊಂದಿಗೆ ಕಳುಹಿಸಿರುವೆವು. ಜನರು ನ್ಯಾಯಬದ್ಧವಾಗಿ ನೆಲೆಗೊಳ್ಳುವ ಸಲುವಾಗಿ ನಾವು ಅವರೊಂದಿಗೆ ಗ್ರಂಥವನ್ನೂ ತಕ್ಕಡಿಯನ್ನೂ ಇಳಿಸಿಕೊಟ್ಟಿರುವೆವು." [ಅಲ್-ಹದೀದ್:25] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಮಾನವರು ಒಂದೇ ಸಮುದಾಯವಾಗಿದ್ದರು. ತರುವಾಯ (ಅವರು ಭಿನ್ನರಾದಾಗ ವಿಶ್ವಾಸಿಗಳಿಗೆ) ಶುಭವಾರ್ತೆ ತಿಳಿಸಲು ಮತ್ತು (ನಿಷೇಧಿಗಳಿಗೆ) ಎಚ್ಚರಿಕೆ ನೀಡಲು ಅಲ್ಲಾಹು ಪ್ರವಾದಿಗಳನ್ನು ಕಳುಹಿಸಿದನು. ಅವರು (ಜನರು) ಭಿನ್ನಾಭಿಪ್ರಾಯ ತಾಳಿದ ವಿಷಯದಲ್ಲಿ ತೀರ್ಪು ನೀಡುವ ಸಲುವಾಗಿ ಅವರ ಜೊತೆಗೆ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿದನು." [ಅಲ್-ಬಖರ:213]. ಅಲ್ಲಾಹು ಹೆಸರೆತ್ತಿ ಹೇಳಿದ ತೌರಾತ್, ಇಂಜೀಲ್, ಝಬೂರ್ ಮತ್ತು ಕುರ್ಆನ್ನಲ್ಲಿ ನಾವು ವಿಸ್ತಾರವಾಗಿ ವಿಶ್ವಾಸವಿಡುತ್ತೇವೆ. ಅವುಗಳ ಪೈಕಿ ಕುರ್ಆನ್ ಶ್ರೇಷ್ಠ ಮತ್ತು ಅಂತಿಮ ಗ್ರಂಥವಾಗಿದೆ. ಅದು ಹಿಂದಿನ ಗ್ರಂಥಗಳ ಮೇಲ್ನೋಟ ವಹಿಸುತ್ತದೆ ಮತ್ತು ದೃಢೀಕರಿಸುತ್ತದೆ. ಅದನ್ನು ಅನುಸರಿಸುವುದು ಮತ್ತು ಅದರಲ್ಲಿರುವ ಹಾಗೂ ಅಧಿಕೃತ ಹದೀಸ್ಗಳಲ್ಲಿರುವ ನಿಯಮದ ಪ್ರಕಾರ ತೀರ್ಪು ನೀಡುವುದು ಸಂಪೂರ್ಣ ಸಮುದಾಯದ ಮೇಲೆ ಕಡ್ಡಾಯವಾಗಿದೆ. ಏಕೆಂದರೆ, ಸರ್ವಶಕ್ತನಾದ ಅಲ್ಲಾಹು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನುಷ್ಯರು ಮತ್ತು ಜಿನ್ನ್ಗಳೆಲ್ಲರಿಗೂ ಪ್ರವಾದಿಯಾಗಿ ಕಳುಹಿಸಿದ್ದಾನೆ. ಅವನು ಅವರಿಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ. ಅವರು ಅದರಲ್ಲಿರುವ ನಿಯಮದಂತೆ ತೀರ್ಪು ನೀಡುವುದಕ್ಕಾಗಿ. ಅವನು ಅದನ್ನು ಹೃದಯಗಳಲ್ಲಿರುವ ರೋಗಗಳಿಗೆ ಔಷಧಿಯನ್ನಾಗಿಯೂ, ಎಲ್ಲಾ ವಿಷಯಗಳ ವಿವರಣೆಯಾಗಿಯೂ, ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಮತ್ತು ಕರುಣೆಯಾಗಿಯೂ ಮಾಡಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಇದು ನಾವು ಅವತೀರ್ಣಗೊಳಿಸಿದ ಒಂದು ಅನುಗ್ರಹೀತ ಗ್ರಂಥವಾಗಿದೆ. ಆದ್ದರಿಂದ ಇದನ್ನು ಅನುಸರಿಸಿರಿ ಮತ್ತು ಭಯಭಕ್ತಿ ಪಾಲಿಸಿರಿ. ನಿಮಗೆ ಕಾರುಣ್ಯವು ಲಭ್ಯವಾಗಲೂಬಹುದು." [ಅಲ್-ಅನ್ಆಮ್:155]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನಾವು ತಮಗೆ ಈ ಗ್ರಂಥವನ್ನು ಎಲ್ಲ ವಿಷಯಗಳಿಗಿರುವ ವಿಶದೀಕರಣವಾಗಿ, ಮಾರ್ಗದರ್ಶಿಯಾಗಿ ಮತ್ತು ಕಾರುಣ್ಯವಾಗಿ ಹಾಗೂ ಶರಣಾಗತರಾಗಿ ಬದುಕುವವರಿಗೆ ಒಂದು ಶುಭವಾರ್ತೆಯಾಗಿ ಅವತೀರ್ಣಗೊಳಿಸಿರುವೆವು." [ಅನ್ನಹ್ಲ್:89]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಹೇಳಿರಿ: ಓ ಮನುಷ್ಯರೇ! ಖಂಡಿತವಾಗಿಯೂ ನಾನು ನಿಮ್ಮೆಲ್ಲರೆಡೆಗೆ (ಕಳುಹಿಸಲಾಗಿರುವ) ಅಲ್ಲಾಹನ ಸಂದೇಶವಾಹಕನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಯಾರಿಗಾಗಿದೆಯೋ ಅವನ (ಸಂದೇಶವಾಹಕನು). ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಜೀವವನ್ನು ನೀಡುವವನೂ ಮೃತಪಡಿಸುವವನೂ ಆಗಿರುವನು. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ, ಅಂದರೆ ಅಲ್ಲಾಹನಲ್ಲಿ ಮತ್ತು ಅವನ ಸೂಕ್ತಿಗಳಲ್ಲಿ ವಿಶ್ವಾಸವಿಡುವ ನಿರಕ್ಷರಿಯಾದ ಆ ಪ್ರವಾದಿಯಲ್ಲೂ ವಿಶ್ವಾಸವಿರಿಸಿರಿ ಮತ್ತು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗವನ್ನು ಪಡೆಯಲೂಬಹುದು." [ಅಲ್-ಅಅ್ರಾಫ್:158] ಈ ಅರ್ಥದಲ್ಲಿ ಇನ್ನೂ ಅನೇಕ ಆಯತ್ಗಳಿವೆ.

ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು

ಇದೇ ರೀತಿ ಸಂದೇಶವಾಹಕರುಗಳಲ್ಲೂ ಮೊತ್ತವಾಗಿ ಮತ್ತು ವಿಸ್ತಾರವಾಗಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ. ಅಲ್ಲಾಹು ಅವನ ದಾಸರಿಗೆ ಸಂದೇಶವಾಹಕರುಗಳನ್ನು ಕಳುಹಿಸಿದ್ದಾನೆಂದು ನಾವು ವಿಶ್ವಾಸವಿಡುತ್ತೇವೆ. ಅವರು ಸುವಾರ್ತೆ ನೀಡುವವರು, ಎಚ್ಚರಿಕೆ ನೀಡುವವರು ಮತ್ತು ಸತ್ಯಕ್ಕೆ ಆಹ್ವಾನಿಸುವವರಾಗಿದ್ದಾರೆ. ಅವರ ಆಹ್ವಾನವನ್ನು ಸ್ವೀಕರಿಸಿದವರು ಸ್ವರ್ಗವನ್ನು ಪಡೆಯುತ್ತಾರೆ. ಅವರಿಗೆ ವಿರುದ್ಧವಾಗಿ ಚಲಿಸುವವನು ನಷ್ಟಕ್ಕೆ ಗುರಿಯಾಗಿ ವಿಷಾದಪಡುತ್ತಾನೆ. ನಮ್ಮ ಪ್ರವಾದಿಯಾದ ಮುಹಮ್ಮದ್ ಬಿನ್ ಅಬ್ದುಲ್ಲಾರವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಲ್ಲಿ ಕೊನೆಯವರು ಮತ್ತು ಅತಿ ಶ್ರೇಷ್ಠರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತನ್ನು ವರ್ಜಿಸಿರಿ (ಎಂದು ಬೋಧಿಸುವ ಸಲುವಾಗಿ) ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯಕ್ಕೂ ಸಂದೇಶವಾಹಕರನ್ನು ಕಳುಹಿಸಿರುವೆವು." [ಅನ್ನಹ್ಲ್:36]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಶುಭವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರು. ಸಂದೇಶವಾಹಕರ ನಿಯೋಗಾನಂತರ ಅಲ್ಲಾಹನಿಗೆ ವಿರುದ್ಧವಾಗಿ ಜನರಿಗೆ ಯಾವುದೇ ಪುರಾವೆಯೂ ಇಲ್ಲದಿರುವ ಸಲುವಾಗಿ." [ಅನ್ನಿಸಾ:165] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳ ಪೈಕಿ ಕಟ್ಟಕಡೆಯವರಾಗಿರುವರು." [ಅಲ್-ಅಹ್ಝಾಬ್:40] ಅವರ ಪೈಕಿ ಅಲ್ಲಾಹು ಹೆಸರೆತ್ತಿ ಹೇಳಿದ ಮತ್ತು ಅವರ ಹೆಸರೆಂದು ಪ್ರವಾದಿ ಚರ್ಯೆಯಲ್ಲಿ ಸಾಬೀತಾದವರಲ್ಲಿ ನಾವು ವಿಸ್ತಾರವಾಗಿ ಮತ್ತು ನಿರ್ದಿಷ್ಟವಾಗಿ ವಿಶ್ವಾಸವಿಡುತ್ತೇವೆ. ಉದಾಹರಣೆಗೆ, ನೂಹ್, ಸಾಲಿಹ್, ಇಬ್ರಾಹೀಂ ಮುಂತಾದವರು. ಅವರೆಲ್ಲರ ಮೇಲೆ ಮತ್ತು ನಮ್ಮ ಪ್ರವಾದಿಯವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.

ಅಂತ್ಯದಿನದಲ್ಲಿ ವಿಶ್ವಾಸವಿಡುವುದು

ಅಂತ್ಯದಿನದಲ್ಲಿ ವಿಶ್ವಾಸವಿಡುವುದು ಎಂದರೆ:

ಮರಣಾನಂತರ ಸಂಭವಿಸುತ್ತದೆಯೆಂದು ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ ಎಲ್ಲಾ ವಿಷಯಗಳಲ್ಲೂ ವಿಶ್ವಾಸವಿಡುವುದು. ಉದಾಹರಣೆಗೆ, ಸಮಾಧಿಯ ಪರೀಕ್ಷೆ, ಅದರ ಕೊಡುಗೆ ಮತ್ತು ಶಿಕ್ಷೆ, ಪುನರುತ್ಥಾನ ದಿನ ಸಂಭವಿಸುವ ಭಯಾನಕ ಮತ್ತು ಕಠೋರ ಸಂಗತಿಗಳು, ಸಿರಾತ್ ಸೇತುವೆ, ಕರ್ಮಗಳನ್ನು ತೂಗುವ ತಕ್ಕಡಿ, ವಿಚಾರಣೆ, ಪ್ರತಿಫಲ, ಜನರಿಗೆ ಕರ್ಮಪುಸ್ತಕಗಳನ್ನು ನೀಡುವುದು, ಕೆಲವರು ಅದನ್ನು ಬಲಗೈಯಿಂದ ಮತ್ತು ಕೆಲವರು ಎಡಗೈಯಿಂದ ಅಥವಾ ಬೆನ್ನ ಹಿಂದಿನಿಂದ ಸ್ವೀಕರಿಸುವುದು ಇತ್ಯಾದಿ. ಅದೇ ರೀತಿ, ನಮ್ಮ ಪ್ರವಾದಿಯಾದ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ನೀಡಲಾಗುವ ಹೌದ್ ಕೊಳದಲ್ಲಿ, ಸ್ವರ್ಗ ಮತ್ತು ನರಕದಲ್ಲಿ, ಸತ್ಯವಿಶ್ವಾಸಿಗಳು ಅಲ್ಲಾಹನನ್ನು ನೋಡುತ್ತಾರೆ ಮತ್ತು ಅವನು ಅವರೊಡನೆ ಮಾತನಾಡುತ್ತಾನೆ ಎಂಬುದರಲ್ಲಿ, ಹೀಗೆ ಕುರ್ಆನ್ ಮತ್ತು ಅಧಿಕೃತ ಸುನ್ನತ್ನಲ್ಲಿ ಬಂದಿರುವ ಎಲ್ಲದರಲ್ಲೂ ವಿಶ್ವಾಸವಿಡುವುದು ಇದರಲ್ಲಿ ಒಳಪಡುತ್ತದೆ. ಇವೆಲ್ಲಾ ವಿಷಯಗಳಲ್ಲಿ ವಿಶ್ವಾಸವಿಡುವುದು ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸಿಕೊಟ್ಟ ರೀತಿಯಲ್ಲಿ ಅವುಗಳನ್ನು ನಂಬುವುದು ಕಡ್ಡಾಯಾಗಿದೆ.

ಕದರ್ನಲ್ಲಿ (ವಿಧಿನಿರ್ಣಯ) ವಿಶ್ವಾಸವಿಡುವುದು

ಕದರ್ನಲ್ಲಿ ವಿಶ್ವಾಸವಿಡುವುದು ಈ ನಾಲ್ಕು ವಿಷಯಗಳನ್ನು ಒಳಗೊಳ್ಳುತ್ತದೆ:

ಮೊದಲನೆಯದು: ಈಗಾಗಲೇ ಸಂಭವಿಸಿದ್ದನ್ನು ಮತ್ತು ಮುಂದೆ ಸಂಭವಿಸುವುದನ್ನು ಅಲ್ಲಾಹು ತಿಳಿದಿದ್ದಾನೆ, ಅವನು ಅವನ ದಾಸರ ಸ್ಥಿತಿಯನ್ನು ತಿಳಿದಿದ್ದಾನೆ, ಅವರ ಜೀವನೋಪಾಯ, ಆಯುಷ್ಯ, ಕರ್ಮ ಮುಂತಾದ ಅವರಿಗೆ ಸಂಬಂಧಿಸಿದ ಎಲ್ಲವನ್ನೂ ಅಲ್ಲಾಹು ತಿಳಿದಿದ್ದಾನೆ. ಸರ್ವಶಕ್ತನಾದ ಅವನಿಗೆ ಅವುಗಳಲ್ಲಿ ಯಾವುದೇ ಮರೆಯಾಗಿಲ್ಲ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅಲ್ಲಾಹು ಸರ್ವ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು." [ಅಲ್-ಬಖರ:231]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅಲ್ಲಾಹು ಎಲ್ಲ ವಿಷಯದಲ್ಲೂ ಸಾಮರ್ಥ್ಯವುಳ್ಳವನಾಗಿರುವನು ಮತ್ತು ಅವನು ಎಲ್ಲ ವಸ್ತುವನ್ನೂ ಅರಿವಿನೊಂದಿಗೆ ಪೂರ್ಣವಾಗಿ ಆವರಿಸಿರುವನು ಎಂಬುದನ್ನು ನೀವು ಅರಿಯುವ ಸಲುವಾಗಿ." [ಅತ್ತಲಾಖ್:12] ಎರಡನೆಯದು: ಅವನು ನಿರ್ಣಯಿಸಿದ ಮತ್ತು ವಿಧಿಸಿದ ಎಲ್ಲವನ್ನೂ ಅವನು ಬರೆದಿಟ್ಟಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅವರಿಂದ ಭೂಮಿಯು ಕುಗ್ಗುತ್ತಿರುವುದನ್ನು ನಾವು ಅರಿತಿರುವೆವು. (ಮಾಹಿತಿಗಳನ್ನು) ಸೂಕ್ಷ್ಮವಾಗಿ ದಾಖಲಿಸಿರುವ ಒಂದು ಗ್ರಂಥವು ನಮ್ಮ ಬಳಿಯಿದೆ." [ಕ್ವಾಫ್:4]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಎಲ್ಲ ವಿಷಯಗಳನ್ನೂ ನಾವು ಸುಸ್ಪಷ್ಟವಾದ ಒಂದು ಗ್ರಂಥದಲ್ಲಿ ನಮೂದಿಸಿರುವೆವು." [ಯಾಸೀನ್:12]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಆಕಾಶದಲ್ಲಿ ಮತ್ತು ಭೂಮಿಯಲ್ಲಿರುವುದನ್ನು ಅಲ್ಲಾಹು ಅರಿಯುತ್ತಾನೆಂದು ತಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದೊಂದು ದಾಖಲೆಯಲ್ಲಿದೆ. ಖಂಡಿತವಾಗಿಯೂ ಅದು ಅಲ್ಲಾಹನಿಗೆ ಸರಳವಾದ ವಿಷಯವಾಗಿದೆ." [ಅಲ್-ಹಜ್ಜ್:70] ಮೂರನೆಯದು: ಅವನು ಇಚ್ಛಿಸುವಾಗಲೆಲ್ಲಾ ಕಾರ್ಯರೂಪಕ್ಕೆ ಬರುವ ಇಚ್ಛೆ ಅವನಿಗಿದೆ ಎಂದು ವಿಶ್ವಾಸವಿಡುವುದು. ಅವನು ಇಚ್ಛಿಸುವುದೆಲ್ಲವೂ ಉಂಟಾಗುತ್ತದೆ ಮತ್ತು ಅವನು ಇಚ್ಛಿಸದಿರುವುದು ಉಂಟಾಗುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹು ಅವನಿಚ್ಛಿಸುವುದನ್ನು ಮಾಡುವನು." [ಅಲ್-ಹಜ್ಜ್:18] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅವನು ಯಾವುದೇ ವಸ್ತುವನ್ನು ಬಯಸಿದರೆ, ಅವನ ಆಜ್ಞೆಯು ಅದರೊಂದಿಗೆ 'ಉಂಟಾಗು' ಎಂದು ಹೇಳುವುದು ಮಾತ್ರವಾಗಿದೆ. ತಕ್ಷಣ ಅದು ಉಂಟಾಗುವುದು!" [ಯಾಸೀನ್:82]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅಲ್ಲಾಹು ಇಚ್ಛಿಸಿದ ಹೊರತು ನೀವು ಇಚ್ಛಿಸಲಾರಿರಿ. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು." [ಅಲ್-ಇನ್ಸಾನ್:30]. ನಾಲ್ಕನೆಯದು: ಅಸ್ತಿತ್ವದಲ್ಲಿರುವ ಎಲ್ಲವನ್ನೂ ಅವನೇ ಸೃಷ್ಟಿಸಿದ್ದಾನೆ. ಅವನ ಹೊರತು ಬೇರೆ ಸೃಷ್ಟಿಕರ್ತರಿಲ್ಲ. ಅವನ ಹೊರತು ಬೇರೆ ಸಂರಕ್ಷಕರಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಲ್ಲಾಹು ಎಲ್ಲ ವಸ್ತುಗಳ ಸೃಷ್ಟಿಕರ್ತನಾಗಿರುವನು. ಅವನು ಎಲ್ಲ ವಸ್ತುಗಳ ಮೇಲೂ ಕಾರ್ಯನಿರ್ವಾಹಕನಾಗಿರುವನು." [ಅಝ್ಝುಮರ್:62] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಜನರೇ! ಅಲ್ಲಾಹು ನಿಮಗೆ ದಯಪಾಲಿಸಿರುವ ಅವನ ಅನುಗ್ರಹವನ್ನು ಸ್ಮರಿಸಿರಿ. ಆಕಾಶದಿಂದಲೂ ಭೂಮಿಯಿಂದಲೂ ನಿಮಗೆ ಅನ್ನಾಧಾರವನ್ನು ಒದಗಿಸಲು ಅಲ್ಲಾಹನ ಹೊರತು ಬೇರೆ ಸೃಷ್ಟಿಕರ್ತನಿರುವನೇ? ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದರೂ ನೀವು ತಪ್ಪಿಸಲ್ಪಡುತ್ತಿರುವುದು ಹೇಗೆ?" [ಫಾತಿರ್:3]. ಅಹ್ಲು-ಸ್ಸುನ್ನ ವಲ್-ಜಮಾಅದ ಪ್ರಕಾರ ಈ ನಾಲ್ಕು ವಿಷಯಗಳಲ್ಲಿ ವಿಶ್ವಾಸವಿಡುವುದು ಕದರ್ನಲ್ಲಿ ವಿಶ್ವಾಸವಿಡುವುದರ ಭಾಗವಾಗಿದೆ. ಆದರೆ ನೂತನವಾದಿಗಳು ಇವುಗಳಲ್ಲಿ ಕೆಲವು ವಿಷಯಗಳನ್ನು ನಿಷೇಧಿಸುತ್ತಾರೆ.

ಈಮಾನ್ (ವಿಶ್ವಾಸ) ಎಂದರೆ ಮಾತು ಮತ್ತು ಕ್ರಿಯೆ. ಅದು ಆಜ್ಞಾಪಾಲನೆ ಮಾಡುವುದರಿಂದ ಹೆಚ್ಚಾಗುತ್ತದೆ ಮತ್ತು ಆಜ್ಞೋಲ್ಲಂಘನೆ ಮಾಡುವುದರಿಂದ ಕಡಿಮೆಯಾಗುತ್ತದೆ.

ಈಮಾನ್ (ವಿಶ್ವಾಸ) ಎಂದರೆ ಮಾತು ಮತ್ತು ಕ್ರಿಯೆ. ಅದು ಆಜ್ಞಾಪಾಲನೆ ಮಾಡುವುದರಿಂದ ಹೆಚ್ಚಾಗುತ್ತದೆ ಮತ್ತು ಆಜ್ಞೋಲ್ಲಂಘನೆ ಮಾಡುವುದರಿಂದ ಕಡಿಮೆಯಾಗುತ್ತದೆ ಎಂದು ವಿಶ್ವಾಸವಿಡುವುದು ಅಲ್ಲಾಹನಲ್ಲಿ ವಿಶ್ವಾಸವಿಡುವುದರ ಭಾಗವಾಗಿದೆ. ಆದ್ದರಿಂದ ಶಿರ್ಕ್ (ಬಹುದೇವತ್ವವಾದ) ಮತ್ತು ಕುಫ್ರ್ (ಸತ್ಯನಿಷೇಧ) ಗಳಿಗೆ ಹೊರತಾದ ಕಳ್ಳತನ, ಬಡ್ಡಿ ತಿನ್ನುವುದು, ಅಮಲು ಪದಾರ್ಥ ಸೇವನೆ, ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು ಮುಂತಾದ ಮಹಾಪಾಪಗಳನ್ನು ಮಾಡಿದ ಮುಸಲ್ಮಾನರನ್ನು, ಅವರು ಈ ಪಾಪಗಳನ್ನು ಹಲಾಲ್ ಆಗಿವೆ (ಸಮ್ಮತಾರ್ಹ) ಎಂದು ಹೇಳದಿರುವ ತನಕ ಅವರನ್ನು ಸತ್ಯನಿಷೇಧಿಗಳೆಂದು ಕರೆಯಬಾರದು. ಏಕೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ತನ್ನೊಂದಿಗೆ ಸಹಭಾಗಿತ್ವ ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸಲಾರನು. ಅದರ ಹೊರತಾಗಿರುವುದನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುವನು." [ಅನ್ನಿಸಾ:48] ಅದೇ ರೀತಿ, ಹೃದಯದಲ್ಲಿ ಸಾಸಿವೆ ಕಾಳಿನ ತೂಕದಷ್ಟು ಸತ್ಯವಿಶ್ವಾಸವಿರುವ ವ್ಯಕ್ತಿಯನ್ನು ಅಲ್ಲಾಹು ನರಕದಿಂದ (ಅವರ ಶಿಕ್ಷೆ ಮುಗಿದ ಬಳಿಕ) ವಿಮೋಚನೆಗೊಳಿಸುತ್ತಾನೆ ಎಂದು ಹೇಳುವ ಹದೀಸ್ಗಳು ಸಾಮೂಹಿಕ ಪ್ರಸರಣದ ಮೂಲಕ ಸಾಬೀತಾಗಿವೆ.

ಅಲ್ಲಾಹನಿಗಾಗಿ ಪ್ರೀತಿಸುವುದು ಮತ್ತು ಅಲ್ಲಾಹನಿಗಾಗಿ ದ್ವೇಷಿಸುವುದು ಹಾಗೂ ಅಲ್ಲಾಹನಿಗಾಗಿ ಸ್ನೇಹ ಮಾಡಿಕೊಳ್ಳುವುದು ಮತ್ತು ಅಲ್ಲಾಹನಿಗಾಗಿ ವೈರ ಕಟ್ಟಿಕೊಳ್ಳುವುದು

ಅಲ್ಲಾಹನಿಗಾಗಿ ಪ್ರೀತಿಸುವುದು ಮತ್ತು ಅಲ್ಲಾಹನಿಗಾಗಿ ದ್ವೇಷಿಸುವುದು ಹಾಗೂ ಅಲ್ಲಾಹನಿಗಾಗಿ ಸ್ನೇಹ ಮಾಡಿಕೊಳ್ಳುವುದು ಮತ್ತು ಅಲ್ಲಾಹನಿಗಾಗಿ ವೈರ ಕಟ್ಟಿಕೊಳ್ಳುವುದು ಅಲ್ಲಾಹನಲ್ಲಿ ವಿಶ್ವಾಸವಿಡುವುದರ ಭಾಗವಾಗಿದೆ. ಆದ್ದರಿಂದ ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಪ್ರೀತಿಸಬೇಕು ಮತ್ತು ಅವರೊಡನೆ ಗೆಳೆತನ ಮಾಡಿಕೊಳ್ಳಬೇಕು. ಹಾಗೆಯೇ ಸತ್ಯನಿಷೇಧಿಗಳನ್ನು ದ್ವೇಷಿಸಬೇಕು ಮತ್ತು ಅವರೊಡನೆ ವೈರ ಕಟ್ಟಿಕೊಳ್ಳಬೇಕು ಮುಸ್ಲಿಂ ಸಮುದಾಯದಲ್ಲಿ ಮೊತ್ತಮೊದಲ ಸತ್ಯ ವಿಶ್ವಾಸಿಗಳಾಗಿರುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು. ಆದ್ದರಿಂದ, ಅಹ್ಲು ಸ್ಸುನ್ನ ವಲ್-ಜಮಾಅದವರು ಅವರನ್ನು (ಸಂಗಡಿಗರನ್ನು) ಪ್ರೀತಿಸುತ್ತಾರೆ, ಅವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಮತ್ತು ಪ್ರವಾದಿಗಳ ನಂತರ ಅವರೇ ಅತಿಶ್ರೇಷ್ಠ ಜನರು ಎಂದು ನಂಬುತ್ತಾರೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: "ಜನರಲ್ಲಿ ಅತಿಶ್ರೇಷ್ಠರು ನನ್ನ ತಲೆಮಾರಿನವರು, ನಂತರ ಅದರ ನಂತರದ ತಲೆಮಾರಿನವರು, ನಂತರ ಅದರ ನಂತರದ ತಲೆಮಾರಿನವರು."[ಬುಖಾರಿ ಮತ್ತು ಮುಸ್ಲಿಂ]، ಪ್ರವಾದಿಯವರ ಸಂಗಡಿಗರಲ್ಲಿ ಅತಿಶ್ರೇಷ್ಠರು ಅಬೂಬಕರ್ ಸಿದ್ದೀಕ್, ನಂತರ ಉಮರ್ ಬಿನ್ ಖತ್ತಾಬ್, ನಂತರ ಉಸ್ಮಾನ್ ಬಿನ್ ಅಫ್ಫಾನ್, ನಂತರ ಅಲಿ ಬಿನ್ ಅಬೂತಾಲಿಬ್, ನಂತರ ಇಹಲೋಕದಲ್ಲೇ ಸ್ವರ್ಗದ ಸುವಾರ್ತೆ ನೀಡಲಾದ ಉಳಿದ ಸಂಗಡಿಗರು ನಂತರ ಉಳಿದ ಎಲ್ಲಾ ಸಂಗಡಿಗರು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಎಂದು ಅವರು ವಿಶ್ವಾಸವಿಡುತ್ತಾರೆ.ಅವರು ಸಂಗಡಿಗರ ನಡುವೆ ನಡೆದ ಭಿನ್ನಾಭಿಪ್ರಾಯಗಳ ಬಗ್ಗೆ ಮೌನವಹಿಸುತ್ತಾರೆ ಈ ವಿಷಯದಲ್ಲಿ ಏನು ನಡೆಯಿತೋ ಅದಕ್ಕೆ ಅವರ ಇಜ್ತಿಹಾದ್ (ಸರಿ-ತಪ್ಪು ತಿಳಿಯುವ ವಿಧಾನ) ಕಾರಣವಾಗಿದೆ ಮತ್ತು ಅವರಲ್ಲಿ ಸರಿಯಾದವರಿಗೆ ಎರಡು ಪ್ರತಿಫಲಗಳು ಮತ್ತು ತಪ್ಪಾದವರಿಗೆ ಒಂದು ಪ್ರತಿಫಲವಿದೆಯೆಂದು ಅವರು ವಿಶ್ವಾಸವಿಡುತ್ತಾರೆ. ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಟುಂಬದಲ್ಲಿ ಸೇರಿದ ಸತ್ಯವಿಶ್ವಾಸಿಗಳನ್ನು ಪ್ರೀತಿಸುತ್ತಾರೆ ಮತ್ತು ಅವರೊಡನೆ ಸ್ನೇಹ ಮಾಡಿಕೊಳ್ಳುತ್ತಾರೆ. ಸತ್ಯವಿಶ್ವಾಸಿಗಳ ಮಾತೆಯರಾದ ಅವರ ಮಡದಿಯರನ್ನು ಗೌರವಿಸುತ್ತಾರೆ ಮತ್ತು ಅವರೆಲ್ಲರ ಬಗ್ಗೆ ಅಲ್ಲಾಹು ಸಂಪ್ರೀತನಾಗಬೇಕೆಂದು ಪ್ರಾರ್ಥಿಸುತ್ತಾರೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರನ್ನು ದ್ವೇಷಿಸುವ ಮತ್ತು ದೂಷಿಸುವ ಹಾಗೂ ಪ್ರವಾದಿ ಕುಟುಂಬದವರ ವಿಷಯದಲ್ಲಿ ಹದ್ದು ಮೀರಿ ಅವರಿಗೆ ಅಲ್ಲಾಹು ನೀಡಿದ ಸ್ಥಾನಕ್ಕಿಂತಲೂ ಮೇಲಿನ ಸ್ಥಾನವನ್ನು ನೀಡುವ ಶಿಯಾಗಳ ಮಾರ್ಗದಿಂದ ಸಂಪೂರ್ಣ ಬೇರ್ಪಡುತ್ತಾರೆ. ಅದೇ ರೀತಿ, ಮಾತು ಮತ್ತು ಪ್ರವೃತ್ತಿಗಳ ಮೂಲಕ ಪ್ರವಾದಿ ಕುಟುಂಬದವರಿಗೆ ಹಿಂಸೆ ನೀಡುವ ನಾಸಿಬೀಗಳ ಮಾರ್ಗದಿಂದಲೂ ಸಂಪೂರ್ಣ ಬೇರ್ಪಡುತ್ತಾರೆ.

ನಾವು ಇಲ್ಲಿ ಸಂಕ್ಷಿಪ್ತವಾಗಿ ಹೇಳಿದ ಎಲ್ಲವೂ ಅಲ್ಲಾಹು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರೊಡನೆ ಕಳುಹಿಸಿದ ಸರಿಯಾದ ವಿಶ್ವಾಸದ ಭಾಗವಾಗಿದೆ. ಇದು ಮೋಕ್ಷ ಪಡೆಯುವ ಪಂಗಡವಾದ ಅಹ್ಲು-ಸ್ಸುನ್ನ ವಲ್-ಜಮಾಅದ ವಿಶ್ವಾಸವಾಗಿದೆ. ಅವರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: "ಅಲ್ಲಾಹನ ಆಜ್ಞೆ ಬರುವ ತನಕ ನನ್ನ ಸಮುದಾಯದಲ್ಲಿ ಒಂದು ಗುಂಪು ಸದಾ ಸತ್ಯದ ಮೇಲೆ ಸ್ಥಿರವಾಗಿರುತ್ತದೆ ಮತ್ತು ಅಲ್ಲಾಹನ ಸಹಾಯದಲ್ಲೇ ಇರುತ್ತದೆ. ಅವರನ್ನು ಕೈಬಿಡುವವರು ಅವರಿಗೆ ಯಾವುದೇ ಹಾನಿಯನ್ನೂ ಮಾಡಲಾರರು."ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: "ಯಹೂದಿಗಳು ಎಪ್ಪತ್ತೊಂದು ಪಂಗಡಗಳಾಗಿ ವಿಭಜನೆಯಾದರು. ಕ್ರಿಶ್ಚಿಯನ್ನರು ಎಪ್ಪತ್ತೆರಡು ಪಂಗಡಗಳಾಗಿ ವಿಭಜನೆಯಾದರು. ಈ ಸಮುದಾಯವು ಎಪ್ಪತ್ತಮೂರು ಪಂಗಡಗಳಾಗಿ ವಿಭಜನೆಯಾಗುವುದು. ಒಂದು ಪಂಗಡದ ಹೊರತು ಎಲ್ಲರೂ ನರಕವಾಸಿಗಳು. ಸಂಗಡಿಗರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಯಾರು?" ಪ್ರವಾದಿಯವರು ಉತ್ತರಿಸಿದರು: "ನಾನು ಮತ್ತು ನನ್ನ ಸಂಗಡಿಗರು ಯಾವ ಮಾರ್ಗದಲ್ಲಿದ್ದೇವೆಯೋ ಆ ಮಾರ್ಗದಲ್ಲಿರುವವರು."ಇದೇ ನಾವು ಬಿಗಿಯಾಗಿ ಹಿಡಿದುಕೊಳ್ಳಬೇಕಾದ, ದೃಢವಾಗಿ ನಿಲ್ಲಬೇಕಾದ ಮತ್ತು ಅದಕ್ಕೆ ವಿರುದ್ಧವಾದುದರ ಬಗ್ಗೆ ಜಾಗರೂಕರಾಗಬೇಕಾದ ಸರಿಯಾದ ವಿಶ್ವಾಸ.

ಈ ವಿಶ್ವಾಸದಿಂದ ತಪ್ಪಿಹೋದವರು ಮತ್ತು ಇದಕ್ಕೆ ವಿರುದ್ಧವಾದ ಮಾರ್ಗದಲ್ಲಿ ಚಲಿಸುವವರು

ಅವರ ವರ್ಗಗಳು

ಈ ವಿಶ್ವಾಸದಿಂದ ಮಾರ್ಗ ಭ್ರಷ್ಟರಾದವರು ಮತ್ತು ಇದಕ್ಕೆ ವಿರುದ್ಧವಾದ ಮಾರ್ಗದಲ್ಲಿ ಚಲಿಸುವವರನ್ನು ಅನೇಕ ವರ್ಗಗಳಾಗಿ ವಿಂಗಡಿಸಬಹುದು. ಅವರಲ್ಲಿ ವಿಗ್ರಹ, ಮೂರ್ತಿ, ದೇವದೂತರು, ಮಹಾಪುರುಷರು, ಪ್ರವಾದಿಗಳು, ಜಿನ್ನ್ಗಳು, ಮರಗಳು, ಕಲ್ಲುಗಳು ಮುಂತಾದವುಗಳನ್ನು ಆರಾಧಿಸುವವರಿದ್ದಾರೆ. ಇವರು ಸಂದೇಶವಾಹಕರುಗಳ ಕರೆಗೆ ಉತ್ತರ ನೀಡಲಿಲ್ಲ. ಬದಲಿಗೆ, ಅವರಿಗೆ ವಿರುದ್ಧವಾಗಿ ನಿಂತು ಅವರೊಡನೆ ದ್ವೇಷ ಕಟ್ಟಿಕೊಂಡರು. ಕುರೈಷರು ಮತ್ತು ಕೆಲವು ಅರಬ್ ಗೋತ್ರಗಳು ನಮ್ಮ ಪ್ರವಾದಿಯಾದ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರೊಂದಿಗೆ ಇದೇ ಧೋರಣೆಯನ್ನು ಇಟ್ಟುಕೊಂಡಿದ್ದರು. ಅವರು ತಮ್ಮ ಬಯಕೆಗಳನ್ನು ಪೂರ್ತೀಕರಿಸಲು, ರೋಗಗಳನ್ನು ಗುಣಪಡಿಸಲು, ಶತ್ರುಗಳ ವಿರುದ್ಧ ಸಹಾಯ ಮಾಡಲು ತಮ್ಮ ದೇವರುಗಳೊಡನೆ ಪ್ರಾರ್ಥಿಸುತ್ತಿದ್ದರು, ಅವರಿಗೆ ಬಲಿ ನೀಡುತ್ತಿದ್ದರು ಮತ್ತು ಹರಕೆಗಳನ್ನು ಹೊರುತ್ತಿದ್ದರು. ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಅದನ್ನು ವಿರೋಧಿಸಿದಾಗ, ಮತ್ತು ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕೆಂದು ಹೇಳಿದಾಗ, ಅವರು ಅದಕ್ಕೆ ಕಿವಿಗೊಡಲಿಲ್ಲ . ಮಾತ್ರವಲ್ಲ, ಅದನ್ನು ಆಶ್ಚರ್ಯ ಪಟ್ಟು ನಿರಾಕರಿಸಿ ಬಿಟ್ಟರು. ಅವರು ಹೇಳಿದರು: "ಇವರು ಅನೇಕ ಆರಾಧ್ಯರನ್ನು ಏಕೈಕ ಆರಾಧ್ಯನನ್ನಾಗಿ ಮಾಡಿರುವರೇ? ಖಂಡಿತವಾಗಿಯೂ ಇದೊಂದು ವಿಚಿತ್ರ ವಿಷಯವಾಗಿದೆ!" [ಸ್ವಾದ್:5]. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಅಲ್ಲಾಹನ ಕಡೆಗೆ ಕರೆಯುತ್ತಲೇ ಇದ್ದರು ಮತ್ತು ಬಹುದೇವತ್ವದಿಂದ ಅವರನ್ನು ಎಚ್ಚರಿಸುತ್ತಲೇ ಇದ್ದರು. ಅದೇ ರೀತಿ, ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದರೋ ಅವರ ನಿಜಸ್ಥಿತಿಯನ್ನು ವಿವರಿಸಿಕೊಡುತ್ತಿದ್ದರು. ಹೀಗೆ ಅಲ್ಲಾಹು ಅವರಲ್ಲಿ ಕೆಲವರಿಗೆ ಸನ್ಮಾರ್ಗವನ್ನು ತೋರಿಸಿದನು. ನಂತರ ಜನರು ಗುಂಪು ಗುಂಪಾಗಿ ಅಲ್ಲಾಹನ ಧರ್ಮವನ್ನು ಪ್ರವೇಶಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಅವರ ಸಂಗಡಿಗರು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮತ್ತು ಅತ್ಯುತ್ತಮವಾಗಿ ಅವರನ್ನು ಹಿಂಬಾಲಿಸಿದ ತಾಬಿಯೀನ್ಗಳ ನಿರಂತರ ಧರ್ಮಪ್ರಚಾರ ಮತ್ತು ಸುದೀರ್ಘ ಪರಿಶ್ರಮದಿಂದ ಅಲ್ಲಾಹು ಈ ಧರ್ಮವನ್ನು ಇತರೆಲ್ಲಾ ಧರ್ಮಗಳ ಮೇಲೆ ಪ್ರಕಟಗೊಳಿಸಿದನು. ನಂತರ ಪುನಃ ಸ್ಥಿತಿಗಳು ಬದಲಾಗಿ, ಜನರಲ್ಲಿ ಹೆಚ್ಚಿನವರಿಗೆ ಅಜ್ಞಾನವುಂಟಾಗಿ ಅವರಲ್ಲಿ ಹೆಚ್ಚಿನವರು ಹಿಂದಿನ ಅಜ್ಞಾನಕಾಲದ ಧರ್ಮಕ್ಕೆ ಮರಳಿದರು. ಅವರು ಪ್ರವಾದಿಗಳ ಮತ್ತು ಮಹಾಪುರುಷರ ವಿಷಯದಲ್ಲಿ ಹದ್ದು ಮೀರಿ ಅವರನ್ನು ಕರೆದು ಪ್ರಾರ್ಥಿಸುವುದು, ಅವರಲ್ಲಿ ಸಹಾಯ ಬೇಡುವುದು ಮುಂತಾದ ಬಹುದೇವತ್ವದ ಪ್ರವೃತ್ತಿಗಳನ್ನು ಮಾಡತೊಡಗಿದರು. ಅರಬ್ ಸತ್ಯನಿಷೇಧಿಗಳು ಲಾಇಲಾಹ ಇಲ್ಲಲ್ಲಾಹ್ ಎಂಬ ವಚನವನ್ನು ಅರ್ಥಮಾಡಿಕೊಂಡಷ್ಟೂ ಇವರು ಅರ್ಥ ಮಾಡಿಕೊಳ್ಳಲಿಲ್ಲ. ಅಲ್ಲಾಹು ಕಾಪಾಡಲಿ.

ಅಜ್ಞಾನದ ಪ್ರಾಬಲ್ಯದಿಂದ ಮತ್ತು ಪ್ರವಾದಿತ್ವದ ಕಾಲದಿಂದ ದೂರವಾದ ಕಾರಣದಿಂದ ಈ ಬಹುದೇವತ್ವವು ನಮ್ಮ ಈ ಕಾಲದವರೆಗೂ ಜನರಲ್ಲಿ ಪ್ರಚಾರವಾಗುತ್ತಲೇ ಇದೆ.

ಈಗಿನವರಲ್ಲಿರುವ ಸಂಶಯವು ಹಿಂದಿನವರಲ್ಲಿದ್ದ ಅದೇ ಸಂಶಯವಾಗಿದೆ ಮತ್ತು ಕೆಲವು ಸತ್ಯನಿಷೇಧಿ ವಿಶ್ವಾಸಗಳ ವಿವರಣೆ

ಈಗಿನವರಲ್ಲಿರುವ ಸಂಶಯವು ಹಿಂದಿನವರಲ್ಲಿದ್ದ ಅದೇ ಸಂಶಯವಾಗಿದೆ. ಅದೇನೆಂದರೆ ಅವರು ಹೇಳುತ್ತಾರೆ: "ಈ ಮಹಾಪುರುಷರು ಅಲ್ಲಾಹನ ಬಳಿ ನಮಗೆ ಶಿಫಾರಸು ಮಾಡುತ್ತಾರೆ. ಅಲ್ಲಾಹನಿಗೆ ಸಮೀಪಗೊಳಿಸುವುದಕ್ಕಲ್ಲದೆ ನಾವು ಇವರನ್ನು ಆರಾಧಿಸುವುದಿಲ್ಲ." ಅಲ್ಲಾಹು ಈ ಸಂಶಯವನ್ನು ನಿರಾಕರಿಸುತ್ತಾ ಉತ್ತರ ನೀಡಿದ್ದಾನೆ. ತನ್ನನ್ನು ಬಿಟ್ಟು ಇತರರನ್ನು—ಅವರು ಯಾರೇ ಆಗಿದ್ದರೂ ಸಹ— ಆರಾಧಿಸುವವರು ತನ್ನೊಡನೆ ಸಹಭಾಗಿತ್ವ ಮಾಡಿದರು ಮತ್ತು ಸತ್ಯನಿಷೇಧಿಗಳಾದರು ಎಂದು ವಿವರಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಲ್ಲಾಹನ ಹೊರತು ತಮಗೆ ಹಾನಿಯೋ, ಲಾಭವೋ ಮಾಡದವುಗಳನ್ನು ಅವರು ಆರಾಧಿಸುತ್ತಿರುವರು. ಇವರು (ಆರಾಧ್ಯರು) ಅಲ್ಲಾಹನ ಬಳಿ ನಮ್ಮ ಶಿಫಾರಸುಗಾರರಾಗಿರುವರು ಎಂದು ಅವರು ಹೇಳುವರು." [ಯೂನುಸ್:18]. ಆಗ ಸರ್ವಶಕ್ತನಾದ ಅಲ್ಲಾಹು ಅವರಿಗೆ ಉತ್ತರಿಸುತ್ತಾ ಹೇಳುತ್ತಾನೆ: "(ಓ ಪ್ರವಾದಿಯವರೇ!) ಕೇಳಿರಿ: ಆಕಾಶಗಳಲ್ಲಾಗಲಿ, ಭೂಮಿಯಲ್ಲಾಗಲಿ ಅಲ್ಲಾಹು ಅರಿಯದಿರುವುದನ್ನು ನೀವು ಅವನಿಗೆ ತಿಳಿಸಿಕೊಡುತ್ತಿರುವಿರಾ? ಅವರು ಸಹಭಾಗಿತ್ವ ಮಾಡುವುದರಿಂದ ಅವನು ಎಷ್ಟೋ ಪರಿಪಾವನನೂ ಅತ್ಯುನ್ನತನೂ ಆಗಿರುವನು." [ಯೂನುಸ್:18]. ತನ್ನನ್ನು ಬಿಟ್ಟು ಪ್ರವಾದಿಗಳನ್ನು, ಮಹಾಪುರುಷರನ್ನು ಹಾಗೂ ಇತರರನ್ನು ಆರಾಧಿಸುವುದು ಅತಿದೊಡ್ಡ ಬಹುದೇವತ್ವವಾಗಿದೆ ಎಂದು ಅಲ್ಲಾಹು ಈ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಅದನ್ನು ಮಾಡುವವರು ಅದಕ್ಕೆ ಬೇರೆ ಹೆಸರು ನೀಡಿದರೂ ಸಹ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅವನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಂಡವರು (ಹೇಳುವರು): ನಮ್ಮನ್ನು ಅಲ್ಲಾಹನೆಡೆಗೆ ಹತ್ತಿರಗೊಳಿಸುವ ಸಲುವಾಗಿಯೇ ಹೊರತು ನಾವು ಅವರನ್ನು ಆರಾಧಿಸುತ್ತಿಲ್ಲ." [ಅಝ್ಝುಮರ್:3] ಆಗ ಸರ್ವಶಕ್ತನಾದ ಅಲ್ಲಾಹು ಅವರಿಗೆ ಉತ್ತರಿಸುತ್ತಾ ಹೇಳುತ್ತಾನೆ: "ಅವರು ಯಾವ ವಿಷಯದಲ್ಲಿ ಭಿನ್ನರಾಗಿರುವರೋ ಆ ವಿಷಯದಲ್ಲಿ ಖಂಡಿತವಾಗಿಯೂ ಅಲ್ಲಾಹು ಅವರ ಮಧ್ಯೆ ತೀರ್ಪು ನೀಡುವನು. ಖಂಡಿತವಾಗಿಯೂ ಸುಳ್ಳು ನುಡಿಯುವವನೂ, ಕೃತಘ್ನನೂ ಆಗಿರುವ ಯಾರನ್ನೂ ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸಲಾರನು." [ಅಝ್ಝುಮರ್:3] ಪ್ರಾರ್ಥನೆ, ಭಯ, ನಿರೀಕ್ಷೆ ಮುಂತಾದ ಆರಾಧನೆಗಳ ಮೂಲಕ ತನ್ನ ಹೊರತಾದವರನ್ನು ಆರಾಧಿಸುವುದು ತನ್ನೊಡನೆ ಮಾಡುವ ಸತ್ಯನಿಷೇಧವೆಂದು ಸರ್ವಶಕ್ತನಾದ ಅಲ್ಲಾಹು ಇಲ್ಲಿ ಸ್ಪಷ್ಟಪಡಿಸಿದ್ದಾನೆ. ಅವರ ಆರಾಧ್ಯರು ಅವರನ್ನು ಅಲ್ಲಾಹನಿಗೆ ಸಮೀಪಗೊಳಿಸುತ್ತಾರೆಂಬ ಅವರ ಮಾತನ್ನು ಅವನು ಇಲ್ಲಿ ನಿಷೇಧಿಸಿದ್ದಾನೆ. ಸರಿಯಾದ ವಿಶ್ವಾಸಕ್ಕೆ ತದ್ವಿರುದ್ಧವಾಗಿರುವ ಮತ್ತು ಪ್ರವಾದಿಗಳು ತಂದು ವಿಶ್ವಾಸಕ್ಕೆ ವಿರುದ್ಧವಾಗಿರುವ ಇನ್ನೊಂದು ನಂಬಿಕೆಯೇನೆಂದರೆ, ನಾಸ್ತಿಕವಾದಿಗಳಾದ ಮಾರ್ಕ್ಸ್, ಲೆನಿನ್ ಮುಂತಾದವರ ಅನುಯಾಯಿಗಳಾದ ಈಗಿನ ಕಾಲದ ನಾಸ್ತಿಕರು ಇಟ್ಟುಕೊಂಡಿರುವ ನಂಬಿಕೆಗಳು. ಅವರು ಅದನ್ನು ಸಮಾಜವಾದ, ಕಮ್ಯೂನಿಸಂ, ಬಾತಿಸಂ ಅಥವಾ ಇತರ ಯಾವುದೇ ಹೆಸರುಗಳಿಂದ ಕರೆದರೂ ಅದರಲ್ಲಿ ವ್ಯತ್ಯಾಸವಿಲ್ಲ. ಏಕೆಂದರೆ, ಈ ನಾಸ್ತಿಕರ ಮೂಲ ವಿಶ್ವಾಸವು ದೇವರಿಲ್ಲ ಮತ್ತು ಭೌತಿಕ ಜೀವನವಲ್ಲದೆ ಬೇರೇನೂ ಇಲ್ಲ ಎಂಬುದಾಗಿದೆ. ಪುನರುತ್ಥಾನ ದಿನದ ನಿಷೇಧ, ಸ್ವರ್ಗ-ನರಕಗಳ ನಿಷೇಧ, ಎಲ್ಲಾ ಧರ್ಮಗಳಲ್ಲೂ ಅಪನಂಬಿಕೆ ಮುಂತಾದವುಗಳು ಅವರ ಮೂಲಸಿದ್ಧಾಂತಗಳಾಗಿವೆ. ಅವರ ಪುಸ್ತಕಗಳನ್ನು ಓದುವವರು ಮತ್ತು ಅವರ ಜೀವನವನ್ನು ಅಧ್ಯಯನ ಮಾಡುವವರು ಇದನ್ನು ಖಚಿತವಾಗಿ ತಿಳಿಯುತ್ತಾರೆ. ಈ ವಿಶ್ವಾಸವು ಆಕಾಶದಿಂದ ಬಂದ ಧರ್ಮಗಳ ವಿಶ್ವಾಸಕ್ಕೆ ತದ್ವಿರುದ್ಧವಾಗಿದೆ ಮತ್ತು ಇಹಪರದಲ್ಲಿ ಇದು ಅತ್ಯಂತ ದಾರುಣ ಅಂತ್ಯಕ್ಕೆ ಕಾರಣವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಸತ್ಯಕ್ಕೆ ವಿರುದ್ಧವಾದ ಇನ್ನೊಂದು ವಿಶ್ವಾಸವೇನೆಂದರೆ, ಬಾತಿನಿಗಳು ಮತ್ತು ಸೂಫಿಗಳ ನಂಬಿಕೆ. ಅವರು ಮಹಾಪುರುಷರೆಂದು ಕರೆಯುವ ಕೆಲವರು ಅಲ್ಲಾಹನೊಂದಿಗೆ ಜೊತೆಯಾಗಿ ಈ ಜಗತ್ತನ್ನು ನಿಯಂತ್ರಿಸುತ್ತಾರೆ, ಜಗತ್ತಿನ ಆಗುಹೋಗುಗಳನ್ನು ನಿರ್ವಹಿಸುತ್ತಾರೆ ಎಂದು ಅವರು ನಂಬುತ್ತಾರೆ. ಅವರು ಆ ಮಹಾಪುರುಷರನ್ನು ಕುತುಬ್, ವತದ್, ಗೌಸ್ ಮುಂತಾದ ಅವರೇ ಆವಿಷ್ಕರಿಸಿದ ಹೆಸರುಗಳಲ್ಲಿ ಕರೆಯುತ್ತಾರೆ. ಇದು ಅಲ್ಲಾಹನ ಪ್ರಭುತ್ವದಲ್ಲಿ ಮಾಡುವ ಅತಿನಿಕೃಷ್ಟ ಸಹಭಾಗಿತ್ವವಾಗಿದೆ. ಅಜ್ಞಾನಕಾಲದ ಅರಬ್ಬರು ಮಾಡಿದ ಸಹಭಾಗಿತ್ವಕ್ಕಿಂತಲೂ ಇದು ಘೋರವಾಗಿದೆ. ಏಕೆಂದರೆ ಸತ್ಯನಿಷೇಧಿಗಳಾದ ಅರಬ್ಬರು ಅಲ್ಲಾಹನ ಪ್ರಭುತ್ವದಲ್ಲಿ (ಅಲ್ಲಾಹನ ಕೆಲಸ ಕಾರ್ಯಗಳಲ್ಲಿ) ಸಹಭಾಗಿತ್ವ ಮಾಡುತ್ತಿರಲಿಲ್ಲ. ಅವರು ಸಹಭಾಗಿತ್ವ ಮಾಡುತ್ತಿದ್ದದ್ದು ಆರಾಧನೆಗಳಲ್ಲಿ ಮಾತ್ರ. ಅದು ಕೂಡ ಅವರು ನೆಮ್ಮದಿಯಾಗಿದ್ದಾಗ ಮಾತ್ರ ಅವರು ಅಲ್ಲಾಹನೊಡನೆ ಸಹಭಾಗಿತ್ವ ಮಾಡುತ್ತಿದ್ದರು. ಕಷ್ಟ ಬಂದಾಗ ಅವರು ತಮ್ಮ ಎಲ್ಲಾ ಆರಾಧ್ಯರನ್ನು ತೊರೆದು ಆರಾಧನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸುತ್ತಿದ್ದರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಆದರೆ ಅವರು (ಬಹುದೇವಾರಾಧಕರು) ಹಡಗಿನಲ್ಲಿ ಏರಿದರೆ ಶರಣಾಗತಿಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನೊಂದಿಗೆ ಪ್ರಾರ್ಥಿಸುವರು. ತರುವಾಯ ಅವನು ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರೆ ಅಗೋ! ಅವರು (ಅವನೊಂದಿಗೆ) ಸಹಭಾಗಿತ್ವವನ್ನು ಮಾಡುವರು." [ಅಲ್-ಅನ್ಕಬೂತ್:65] ಅವರು ಅಲ್ಲಾಹನ ಪ್ರಭುತ್ವವನ್ನು ಒಪ್ಪಿಕೊಳ್ಳುತ್ತಿದ್ದರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅವರನ್ನು ಸೃಷ್ಟಿಸಿದ್ದು ಯಾರು? ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ಅಲ್ಲಾಹು ಎನ್ನುವರು" [ಅಝ್ಝುಖ್ರುಫ್:87]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಹೇಳಿರಿ: ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಅನ್ನಾಧಾರವನ್ನು ಒದಗಿಸುವವನು ಯಾರು? ಶ್ರವಣವನ್ನೂ ದೃಷ್ಟಿಯನ್ನೂ ಅಧೀನದಲ್ಲಿರಿಸಿದವನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವವನು ಯಾರು? ಕಾರ್ಯನಿಯಂತ್ರಣ ಮಾಡುವವನು ಯಾರು? ಅವರು ಹೇಳುವರು: 'ಅಲ್ಲಾಹು'. ಹೇಳಿರಿ: ಆದರೂ ನೀವು ಭಯಭಕ್ತಿ ಪಾಲಿಸಲಾರಿರೇ?" [ಯೂನುಸ್:31]. ಈ ಅರ್ಥದಲ್ಲಿ ಇನ್ನೂ ಅನೇಕ ಆಯತ್ಗಳಿವೆ.

ಹಿಂದಿನ ಬಹುದೇವತ್ವವಾದಿಗಳಿಗಿಂತ ಈಗಿನ ಬಹುದೇವತ್ವವಾದಿಗಳಲ್ಲಿರುವ ಹೆಚ್ಚುವರಿ ವಿಷಯಗಳು

ಈಗಿನ ಬಹುದೇವತ್ವವಾದಿಗಳು ಹಿಂದಿನ ಬಹುದೇವತ್ವವಾದಿಗಳಿಗಿಂತ ಎರಡು ಹೆಚ್ಚುವರಿ ವಿಷಯಗಳನ್ನು ಹೊಂದಿದ್ದಾರೆ. ಒಂದು: ಅವರು ಅಲ್ಲಾಹನ ಪ್ರಭುತ್ವದಲ್ಲಿ ಮಾಡುವ ಸಹಭಾಗಿತ್ವ. ಎರಡು: ನೆಮ್ಮದಿಯ ಸಮಯದಲ್ಲೂ ಕಷ್ಟದ ಸಮಯದಲ್ಲೂ ಅವರು ಮಾಡುವ ಸಹಭಾಗಿತ್ವ. ಅವರೊಡನೆ ಬೆರೆಯುವ, ಅವರ ಸ್ಥಿತಿಗತಿಗಳನ್ನು ವೀಕ್ಷಿಸುವ ಮತ್ತು ಅವರು ಈಜಿಪ್ಟಿನಲ್ಲಿ ಹುಸೈನ್ ಮತ್ತು ಬದವಿಯ ಸಮಾಧಿಗಳ ಬಳಿ, ಈಡನ್ನಲ್ಲಿ ಐದ್ರೋಸರ ಸಮಾಧಿಯ ಬಳಿ, ಯಮನ್ನಲ್ಲಿ ಹಾದಿಯ ಸಮಾಧಿಯ ಬಳಿ, ಶಾಮ್ನಲ್ಲಿ ಇಬ್ನ್ ಅರಬಿಯ ಸಮಾಧಿಯ ಬಳಿ, ಇರಾಕಿನಲ್ಲಿ ಅಬ್ದುಲ್ ಕಾದಿರ್ ಜೀಲಾನಿಯ ಸಮಾಧಿಯ ಬಳಿ, ಮುಂತಾದ ಪ್ರಸಿದ್ಧ ಸಮಾಧಿಗಳ ಬಳಿ ಅವರು ಮಾಡುವುದನ್ನು ನೋಡುವವರೆಲ್ಲರೂ ಇದನ್ನು ತಿಳಿದಿದ್ದಾರೆ. ಈ ಸಮಾಧಿಗಳ ಬಗ್ಗೆ ಜನಸಾಮಾನ್ಯರು ಹದ್ದುಮೀರಿ ವರ್ತಿಸುತ್ತಾರೆ ಮತ್ತು ಅಲ್ಲಾಹನಿಗೆ ಮಾತ್ರ ಸೀಮಿತವಾದ ಅನೇಕ ಹಕ್ಕುಗಳನ್ನು ಅವರು ಈ ಮಹಾಪುರುಷರಿಗೆ ನೀಡುತ್ತಾರೆ. ಕೆಲವೇ ಜನರ ಹೊರತು ಯಾರೂ ಅವರನ್ನು ತಡೆಯುವುದಿಲ್ಲ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರಿಗಿಂತ ಮುಂಚಿನ ಪ್ರವಾದಿಗಳು ತಂದ ಏಕದೇವತ್ವದ ಸಂದೇಶವನ್ನು ಯಾರೂ ಅವರಿಗೆ ವಿವರಿಸಿಕೊಡುವುದಿಲ್ಲ. ನಾವೆಲ್ಲರೂ ಅಲ್ಲಾಹನಿಗಿರುವವರು ಮತ್ತು ಅವನ ಕಡೆಗೆ ಮರಳುವವರು. ಅವರನ್ನು ಸನ್ಮಾರ್ಗಕ್ಕೆ ಮರಳಿಸಲು, ಅವರಲ್ಲಿ ಸನ್ಮಾರ್ಗಕ್ಕೆ ಕರೆ ನೀಡುವವರನ್ನು ಹೆಚ್ಚಿಸಲು ಮತ್ತು ಈ ಸಹಭಾಗಿತ್ವದ ವಿರುದ್ಧ ಹೋರಾಡಿ ಅದನ್ನು ಹಾಗೂ ಅದಕ್ಕೆ ಒಯ್ಯುವ ಮಾರ್ಗಗಳನ್ನು ಸಂಪೂರ್ಣ ನಿರ್ನಾಮ ಮಾಡುವ ಮನಸ್ಸನ್ನು ಮುಸ್ಲಿಂ ಮುಖಂಡರು ಮತ್ತು ವಿದ್ವಾಂಸರಿಗೆ ನೀಡಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. ಖಂಡಿತವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ಉತ್ತರಿಸುವವನಾಗಿದ್ದಾನೆ. ಅಲ್ಲಾಹನ ಹೆಸರು ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿ ಸರಿಯಾದ ವಿಶ್ವಾಸಕ್ಕೆ ವಿರುದ್ಧವಾಗಿರುವ ವಿಶ್ವಾಸಗಳು ಯಾವುದೆಂದರೆ, ಜಹ್ಮಿಯ್ಯ, ಮುಅತಝಿಲ ಮುಂತಾದ ನೂತನ ಪಂಗಡಗಳು ಮತ್ತು ಅವರ ಮಾರ್ಗದಲ್ಲಿ ಚಲಿಸುವವರು ಹೊಂದಿರುವ ನಂಬಿಕೆಗಳು. ಅವರು ಸರ್ವಶಕ್ತನಾದ ಅಲ್ಲಾಹನ ಗುಣಲಕ್ಷಣಗಳನ್ನು ನಿಷೇಧಿಸುತ್ತಾರೆ. ಅವರು ಅಲ್ಲಾಹನ ಸಂಪೂರ್ಣ ಗುಣಲಕ್ಷಣಗಳನ್ನು ತೊಡೆದು ಹಾಕಿ ಸರ್ವಶಕ್ತನಾದ ಅಲ್ಲಾಹನಿಗೆ ಅಸ್ತಿತ್ವರಹಿತವಾದ, ನಿರ್ಜೀವ ಮತ್ತು ಅಸಂಭವ್ಯ ಗುಣಲಕ್ಷಣಗಳನ್ನು ಆರೋಪಿಸುತ್ತಾರೆ. ಅವರು ಆರೋಪಿಸುವ ಆ ಗುಣಲಕ್ಷಣಗಳಿಂದ ಅಲ್ಲಾಹು ಎಷ್ಟೋ ಉನ್ನತನಾಗಿದ್ದಾನೆ. ಕೆಲವು ಗುಣಲಕ್ಷಣಗಳನ್ನು ನಿಷೇಧಿಸುವ ಮತ್ತು ಕೆಲವು ಗುಣಲಕ್ಷಣಗಳನ್ನು ದೃಢೀಕರಿಸುವ ಅಶ್ಅರಿಯ್ಯ ಮುಂತಾದವರು ಕೂಡ ಇದರಲ್ಲಿ ಸೇರುತ್ತಾರೆ. ಯಾವ ಗುಣಲಕ್ಷಣಗಳನ್ನು ಅಲ್ಲಾಹನಿಗೆ ದೃಢೀಕರಿಸಿದರೆ ಹೋಲಿಕೆ ಉಂಟಾಗುತ್ತದೆಂದು ಅವರು ಭಯಪಡುತ್ತಾರೋ, ಮತ್ತು ಅದನ್ನು ವ್ಯಾಖ್ಯಾನಿಸಲು ಮುಂದಾಗುತ್ತಾರೋ ಅದೇ ಹೋಲಿಕೆಯು ಅವರು ದೃಡೀಕರಿಸಿದ ಗುಣಲಕ್ಷಣಗಳಲ್ಲೂ ಅವರು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿ ಬರುತ್ತದೆ. ತಮ್ಮ ಈ ಪ್ರವೃತ್ತಿಯ ಮೂಲಕ ಅವರು ಧಾರ್ಮಿಕ ಮತ್ತು ಬೌದ್ಧಿಕ ಪುರಾವೆಗಳಿಗೆ ವಿರುದ್ಧವಾಗಿರುವುದಲ್ಲದೆ, ಸ್ಪಷ್ಟವಾದ ವಿರೋಧಾಭಾಸದಲ್ಲೂ ಒಳಪಟ್ಟಿದ್ದಾರೆ. ಆದರೆ ಅಹ್ಲು-ಸ್ಸುನ್ನ ವಲ್-ಜಮಾಅದವರು, ಅಲ್ಲಾಹು ಅವನಿಗೆ ದೃಢೀಕರಿಸಿದ ಮತ್ತು ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನಿಗೆ ದೃಢೀಕರಿಸಿದ ಹೆಸರುಗಳನ್ನು ಮತ್ತು ಗುಣಲಕ್ಷಣಗಳನ್ನು ಸಂಪೂರ್ಣತೆಯ ರೂಪದಲ್ಲಿ ದೃಢೀಕರಿಸುತ್ತಾರೆ, ಮತ್ತು ಅವುಗಳನ್ನು ನಿಷೇಧಿಸದೆಯೇ ಅವರು ಸೃಷ್ಟಿಗಳ ಹೋಲಿಕೆಯಿಂದ ಅವುಗಳನ್ನು ಮುಕ್ತಗೊಳಿಸುತ್ತಾರೆ. ಅವರು ಅಲ್ಲಾಹನ ಹೆಸರು ಮತ್ತು ಗುಣಲಕ್ಷಣಗಳನ್ನು ಹೊಂದಿರುವ ಎಲ್ಲಾ ಪುರಾವೆಗಳನ್ನು ಕಾರ್ಯರೂಪಕ್ಕೆ ತರುತ್ತಾರೆ. ಅವುಗಳನ್ನು ವಿರೂಪಗೊಳಿಸುವುದೋ ಅಥವಾ ನಿಷೇಧಗೊಳಿಸುವುದೋ ಮಾಡುವುದಿಲ್ಲ. ಹೀಗೆ, ಈಗಾಗಲೇ ವಿವರಿಸಿದಂತೆ ಇತರರಿಗೆ ಸಂಭವಿಸಿದ ವಿರೋಧಾಭಾಸಗಳಿಂದ ಇವರು ಸುರಕ್ಷಿತರಾಗುತ್ತಾರೆ. ಇದೇ ಮೋಕ್ಷದ ದಾರಿ. ಇಹಲೋಕ ಮತ್ತು ಪರಲೋಕದ ಸೌಭಾಗ್ಯದ ದಾರಿ. ಇದೇ ಈ ಸಮುದಾಯದ ಪೂರ್ವಿಕರು ಮತ್ತು ಮುಖಂಡರು ಚಲಿಸಿದ ನೇರವಾದ ಮಾರ್ಗ. ಈ ಸಮುದಾಯದ ಮೊದಲಿನವರು ಯಾವುದರಿಂದ ಸರಿಯಾದರೋ ಅದರಿಂದಲೇ ಹೊರತು—ಅಂದರೆ ಕುರ್ಆನ್ ಮತ್ತು ಸುನ್ನತ್ತನ್ನು ಅನುಸರಿಸಿ, ಅದಕ್ಕೆ ವಿರುದ್ಧವಾಗಿರುವ ಎಲ್ಲವನ್ನೂ ತೊರೆಯುವ ಹೊರತು—ಈ ಸಮುದಾಯದ ಕೊನೆಯವರು ಸರಿಯಾಗಲಾರರು.

ಅಲ್ಲಾಹನನ್ನು ಮಾತ್ರ ಆರಾಧಿಸುವುದು ಕಡ್ಡಾಯವಾಗಿದೆ ಮತ್ತು ಅಲ್ಲಾಹನ ಶತ್ರುಗಳ ವಿರುದ್ಧ ಸಹಾಯ ಲಭ್ಯವಾಗುವ ಮಾರ್ಗಗಳು

ಉತ್ತರದಾಯಿತ್ವವಿರುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ರಬ್ಬ್, ಭೂಮ್ಯಾಕಾಶಗಳ ರಬ್ಬ್ ಮತ್ತು ಮಹಾ ಸಿಂಹಾಸನದ ರಬ್ಬ್ ಆಗಿರುವ ಅಲ್ಲಾಹನನ್ನು ಮಾತ್ರ ಆರಾಧಿಸುವುದು ಅತಿದೊಡ್ಡ ಕರ್ತವ್ಯ ಮತ್ತು ಅತಿಶ್ರೇಷ್ಠ ಕಡ್ಡಾಯ ಕಾರ್ಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್ಆನ್ನಲ್ಲಿ ಹೇಳುತ್ತಾನೆ: "ಖಂಡಿತವಾಗಿಯೂ ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹನಾಗಿರುವನು ನಿಮ್ಮ ಪ್ರಭು. ತರುವಾಯ ಅವನು ಸಿಂಹಾಸನಾರೂಢನಾದನು.ಅವನು ಹಗಲನ್ನು ರಾತ್ರಿಯಿಂದ ಮುಚ್ಚುವನು. ಕ್ಷಿಪ್ರಗತಿಯಲ್ಲಿ ಅದು ಹಗಲನ್ನು ಹುಡುಕುತ್ತಾ ಸಾಗುವುದು. ತನ್ನ ಆಜ್ಞೆಗೆ ವಿಧೇಯಗೊಳಿಸಲಾದ ರೀತಿಯಲ್ಲಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು (ಅವನು ಸೃಷ್ಟಿಸಿರುವನು). ತಿಳಿಯಿರಿ! ಸೃಷ್ಟಿ ಮತ್ತು ಆಜ್ಞಾಧಿಕಾರವು ಅವನಿಗೇ ಆಗಿವೆ. ಸರ್ವಲೋಕಗಳ ಪ್ರಭುವಾದ ಅಲ್ಲಾಹು ಅನುಗ್ರಹಪೂರ್ಣನಾಗಿರುವನು." [ಅಲ್-ಅಅ್ರಾಫ್:54] ಜಿನ್ನ್ ಮತ್ತು ಮನುಷ್ಯರನ್ನು ಸೃಷ್ಟಿಸಲಾಗಿರುವುದು ತನ್ನ ಆರಾಧನೆ ಮಾಡುವುದಕ್ಕಾಗಿ ಎಂದು ಸರ್ವಶಕ್ತನಾದ ಅಲ್ಲಾಹು ತನ್ನ ಗ್ರಂಥದ ಇನ್ನೊಂದು ಕಡೆ ಹೇಳಿದ್ದಾನೆ: "ನನ್ನನ್ನು ಆರಾಧಿಸುವುದಕ್ಕಾಗಿಯೇ ವಿನಾ ನಾನು ಜಿನ್ನ್ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿಲ್ಲ." [ಅದ್ದಾರಿಯಾತ್:56]. ಯಾವ ಆರಾಧನೆಗಾಗಿ ಅಲ್ಲಾಹು ಮನುಷ್ಯರನ್ನು ಮತ್ತು ಜಿನ್ನ್ಗಳನ್ನು ಸೃಷ್ಟಿಸಿದನೋ ಅದು ನಮಾಝ್, ಉಪವಾಸ, ಝಕಾತ್, ಹಜ್ಜ್, ರುಕೂ, ಸುಜೂದ್, ತವಾಫ್, ಬಲಿ, ಹರಕೆ, ಭಯ, ನಿರೀಕ್ಷೆ, ಸಹಾಯ ಯಾಚನೆ, ಅಭಯ ಯಾಚನೆ, ಎಲ್ಲಾ ರೀತಿಯ ಪ್ರಾರ್ಥನೆಗಳು ಮುಂತಾದ ಎಲ್ಲವನ್ನೂ ಅಲ್ಲಾಹನಿಗೆ ಮಾತ್ರ ಅರ್ಪಿಸುವ ತೌಹೀದ್ ಆಗಿದೆ. ಪವಿತ್ರ ಕುರ್ಆನ್ನಲ್ಲಿರುವ ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ನಲ್ಲಿರುವ ಅಲ್ಲಾಹನ ಎಲ್ಲಾ ಆಜ್ಞೆಗಳನ್ನೂ ವಿಧೇಯತೆಯಿಂದ ಅನುಸರಿಸುವುದು ಮತ್ತು ಅವನು ವಿರೋಧಿಸಿದ ಎಲ್ಲದ್ದರಿಂದಲೂ ದೂರವಾಗುವುದು ಕೂಡ ಇದರಲ್ಲಿ ಒಳಪಡುತ್ತದೆ. ಯಾವ ಆರಾಧನೆಗಾಗಿ ಅಲ್ಲಾಹು ಮನುಷ್ಯರನ್ನು ಮತ್ತು ಜಿನ್ನ್ಗಳನ್ನು ಸೃಷ್ಟಿಸಿದನೋ ಆ ಆರಾಧನೆಯನ್ನು ಅವನು ಅವರಿಗೆ ಆಜ್ಞಾಪಿಸಿದ್ದಾನೆ, ಆ ಆರಾಧನೆಯನ್ನು ಸ್ಪಷ್ಟವಾಗಿ ವಿವರಿಸಲು, ಅದರ ಕಡೆಗೆ ಕರೆ ನೀಡಲು ಮತ್ತು ಅಲ್ಲಾಹನನ್ನು ನಿಷ್ಕಳಂಕವಾಗಿ ಆರಾಧಿಸುವಂತೆ ಜನರಿಗೆ ಆದೇಶಿಸಲು ಪ್ರವಾದಿಗಳನ್ನು ಕಳುಹಿಸಿದ್ದಾನೆ ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ." [ಅಲ್-ಬಖರ:21]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸದಿರಲು ಮತ್ತು ಮಾತಾಪಿತರಿಗೆ ಒಳಿತನ್ನು ಮಾಡಲು ತಮ್ಮ ಪ್ರಭು ವಿಧಿಸಿರುವನು." [ಅಲ್-ಇಸ್ರಾ:23] ವಿಧಿಸಿದ್ದಾನೆ ಎಂದರೆ ಆದೇಶಿಸಿದ್ದಾನೆ ಮತ್ತು ಉಪದೇಶಿಸಿದ್ದಾನೆ ಎಂದರ್ಥ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಶರಣಾಗತಿಯನ್ನು ಅಲ್ಲಾಹನಿಗೆ ಮಾತ್ರ ಸಮರ್ಪಿಸಿ, ಋಜುಮನಸ್ಕರಾಗಿರುತ್ತಾ ಅವನನ್ನು ಆರಾಧಿಸಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ಹೊರತು ಅವರೊಂದಿಗೆ ಇನ್ನೇನೂ ಆದೇಶಿಸಲಾಗಿಲ್ಲ. ನೇರವಾದ ಧರ್ಮವು ಅದೇ ಆಗಿದೆ." [ಅಲ್-ಬಯ್ಯಿನ:5]. ಪವಿತ್ರ ಕುರ್ಆನ್ನಲ್ಲಿ ಈ ಅರ್ಥದಲ್ಲಿ ಇನ್ನೂ ಅನೇಕ ಆಯತ್ಗಳಿವೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಸಂದೇಶವಾಹಕರು ನಿಮಗೆ ಏನನ್ನು ನೀಡುವರೋ ಅದನ್ನು ಸ್ವೀಕರಿಸಿರಿ ಮತ್ತು ಅವರು ನಿಮ್ಮನ್ನು ಯಾವುದರಿಂದ ವಿರೋಧಿಸುವರೋ ಅದರಿಂದ ದೂರಸರಿಯಿರಿ. ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು." [ಅಲ್-ಹಶ್ರ್:7]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ. (ಅವನ) ಸಂದೇಶವಾಹಕರನ್ನೂ, ನಿಮ್ಮಿಂದಲೇ ಇರುವ ಕಾರ್ಯನಿರ್ವಾಹಕರ ನ್ನೂ ಅನುಸರಿಸಿರಿ. ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ತಲೆದೋರಿದರೆ ನೀವದನ್ನು ಅಲ್ಲಾಹನೆಡೆಗೂ ಸಂದೇಶವಾಹಕರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವಾದುದೂ ಅತಿಸೂಕ್ತ ಪರ್ಯಾವಸಾನವುಳ್ಳ ದ್ದೂ ಆಗಿದೆ." [ಅನ್ನಿಸಾ:59] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "(ಅಲ್ಲಾಹನ) ಸಂದೇಶವಾಹಕರನ್ನು ಯಾರು ಅನುಸರಿಸುವನೋ ಖಂಡಿತವಾಗಿಯೂ ಅವನು ಅಲ್ಲಾಹುವನ್ನು ಅನುಸರಿಸಿರುವನು." [ಅನ್ನಿಸಾ:80] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತನ್ನು ವರ್ಜಿಸಿರಿ (ಎಂದು ಬೋಧಿಸುವ ಸಲುವಾಗಿ) ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯಕ್ಕೂ ಸಂದೇಶವಾಹಕರನ್ನು ಕಳುಹಿಸಿರುವೆವು." [ಅನ್ನಹ್ಲ್:36]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನನ್ನ ಹೊರತು ಅನ್ಯ ಆರಾಧ್ಯರಿಲ್ಲ. ಆದ್ದರಿಂದ ನನ್ನನ್ನು ಆರಾಧಿಸಿರಿ ಎಂಬ ದಿವ್ಯಸಂದೇಶವನ್ನು ನೀಡಿಯೇ ಹೊರತು ತಮಗಿಂತ ಮುಂಚೆ ಯಾವುದೇ ಸಂದೇಶವಾಹಕರನ್ನೂ ನಾವು ಕಳುಹಿಸಿಲ್ಲ." [ಅಲ್-ಅಂಬಿಯಾ:25]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅಲಿಫ್, ಲಾಮ್, ರಾ. ಇದು ಗ್ರಂಥವಾಗಿದೆ. ಇದರಲ್ಲಿರುವ ಸೂಕ್ತಿಗಳನ್ನು ವಿಚಾರಭದ್ರಗೊಳಿಸಲಾಗಿದೆ. ತರುವಾಯ ಅವುಗಳನ್ನು ವಿಶದೀಕರಿಸಲಾಗಿದೆ. ಇದು ಯುಕ್ತಿಪೂರ್ಣನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹನ ಬಳಿಯಿಂದಿರುವುದಾಗಿದೆ. ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬಾರದು ಎಂಬುದಕ್ಕಾಗಿ. ಖಂಡಿತವಾಗಿಯೂ ನಾನು ನಿಮಗೆ ಅವನಿಂದಿರುವ ಒಬ್ಬ ಮುನ್ನೆಚ್ಚರಿಕೆ ನೀಡುವವನೂ, ಶುಭವಾರ್ತೆ ತಿಳಿಸುವವನೂ ಆಗಿರುವೆನು." [ಹೂದ್:1-2]. ಇಂತಹ ಸ್ಪಷ್ಟ ಆದೇಶಗಳಿರುವ ವಚನಗಳು ಮತ್ತು ಇದೇ ಅರ್ಥದಲ್ಲಿರುವ ಇತರ ವಚನಗಳೆಲ್ಲವೂ ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕೆಂದು ಸೂಚಿಸುತ್ತವೆ. ಇದು ಧರ್ಮದ ಮೂಲತತ್ವ ಮತ್ತು ಮೂಲ ಅಡಿಪಾಯವಾಗಿದೆ. ಜಿನ್ನ್ ಮತ್ತು ಮನುಷ್ಯರನ್ನು ಸೃಷ್ಟಿಸಿದ, ಪ್ರವಾದಿಗಳನ್ನು ಕಳುಹಿಸಿದ ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದ ಕಾರಣವೂ ಇದೇ ಆಗಿದೆ. ಆದ್ದರಿಂದ, ಉತ್ತರದಾಯಿತ್ವವಿರುವ ಪ್ರತಿಯೊಬ್ಬರೂ ಈ ವಿಷಯದ ಬಗ್ಗೆ ನಿಗಾ ವಹಿಸಬೇಕು, ಇದರ ಬಗ್ಗೆ ಜ್ಞಾನವನ್ನು ಗಳಿಸಬೇಕು ಮತ್ತು ತಮ್ಮನ್ನು ಮುಸಲ್ಮಾನರೆಂದು ಕರೆಯುತ್ತಾ, ಪ್ರವಾದಿಗಳ ಮತ್ತು ಮಹಾಪುರುಷರ ಬಗ್ಗೆ ಹದ್ದುಮೀರಿ ಅವರ ಸಮಾಧಿಗಳ ಮೇಲೆ ದರ್ಗಾಗಳನ್ನು ನಿರ್ಮಿಸಿ, ಅವುಗಳನ್ನು ಪ್ರಾರ್ಥನಾಲಯಗಳನ್ನಾಗಿ ಮಾಡಿ, ಅವುಗಳ ಮೇಲೆ ಗುಮ್ಮಟಗಳನ್ನು ನಿರ್ಮಿಸಿ, ಆ ಸಮಾಧಿಗಳೊಡನೆ ಪ್ರಾರ್ಥಿಸುತ್ತಲೂ, ಸಹಾಯ ಬೇಡುತ್ತಲೂ, ಆಶ್ರಯ ಕೋರುತ್ತಲೂ, ಬಯಕೆಗಳನ್ನು ನೆರವೇರಿಸಲು, ಕಷ್ಟಕೋಟಲೆಗಳನ್ನು ನಿವಾರಿಸಲು, ರೋಗವನ್ನು ಗುಣಪಡಿಸಲು, ಶತ್ರುಗಳ ವಿರುದ್ಧ ಸಹಾಯ ಮಾಡಲು ಮುಂತಾದ ಅನೇಕ ರೀತಿಯ ದೊಡ್ಡ ದೊಡ್ಡ ಸಹಭಾಗಿತ್ವಗಳನ್ನು ಮಾಡುತ್ತಾ ತಮ್ಮ ಅಳಲುಗಳನ್ನು ತೋಡಿಕೊಳ್ಳುತ್ತಲೂ ಇರುವವರ ಬಗ್ಗೆ ಎಚ್ಚರವಾಗಿರಬೇಕು. ಅಲ್ಲಾಹನ ಗ್ರಂಥವು ಸೂಚಿಸಿದ್ದಕ್ಕೆ ಹೊಂದಾಣಿಕೆಯಾಗುವ ಒಂದು ಹದೀಸ್ ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಧಿಕೃತವಾಗಿ ವರದಿಯಾಗಿದೆ. ಬುಖಾರಿ ಮತ್ತು ಮುಸ್ಲಿಂನಲ್ಲಿರುವ ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರ ಹದೀಸಿನಲ್ಲಿರುವಂತೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸರ ಮೇಲಿರುವ ಅಲ್ಲಾಹನ ಹಕ್ಕು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದು ತಮಗೆ ತಿಳಿದಿದೆಯೇ?" ಮುಆದ್ ಹೇಳಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರು ಹೆಚ್ಚು ತಿಳಿದವರು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸರ ಮೇಲಿರುವ ಅಲ್ಲಾಹನ ಹಕ್ಕು ಅವನನ್ನು ಮಾತ್ರ ಆರಾಧಿಸುವುದು ಮತ್ತು ಅವನೊಡನೆ ಏನನ್ನೂ ಸಹಭಾಗಿತ್ವ ಮಾಡದಿರುವುದು. ಅಲ್ಲಾಹನ ಮೇಲಿರುವ ದಾಸರ ಹಕ್ಕು ಅವನೊಡನೆ ಏನನ್ನೂ ಸಹಭಾಗಿತ್ವ ಮಾಡದವನನ್ನು ಶಿಕ್ಷಿಸದಿರುವುದು."ಸಹೀಹುಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಂನಲ್ಲಿರುವ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸಿನಲ್ಲಿರುವಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನು ಮಾಡಿಕೊಂಡು ಅವರೊಡನೆ ಪ್ರಾರ್ಥಿಸುವ ಸ್ಥಿತಿಯಲ್ಲಿ ಯಾರು ಮರಣವನ್ನಪ್ಪುತ್ತಾರೋ ಅವರು ನರಕವನ್ನು ಪ್ರವೇಶಿಸುತ್ತಾರೆ."ಸಹೀಹ್ ಮುಸ್ಲಿಂನಲ್ಲಿರುವ ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸಿನಲ್ಲಿರುವಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನೊಡನೆ ಏನನ್ನೂ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ. ಅಲ್ಲಾಹನೊಡನೆ ಯಾವುದನ್ನಾದರೂ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾರೋ ಅವರು ನರಕವನ್ನು ಪ್ರವೇಶಿಸುತ್ತಾರೆ."ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್ಗಳಿವೆ. ಇದು ಅತ್ಯಂತ ಪ್ರಮುಖ ಮತ್ತು ಗಂಭೀರ ವಿಷಯವಾಗಿದೆ. ಏಕದೇವತ್ವಕ್ಕೆ ಆಹ್ವಾನಿಸಲು ಮತ್ತು ಬಹುದೇವತ್ವವನ್ನು ವಿರೋಧಿಸಲು ಅಲ್ಲಾಹು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಕಳುಹಿಸಿದನು. ಅಲ್ಲಾಹು ವಹಿಸಿಕೊಟ್ಟ ಕೆಲಸವನ್ನು ಅವರು ಅತ್ಯುತ್ತಮವಾಗಿ ನಿರ್ವಹಿಸಿದರು. ಅಲ್ಲಾಹನ ಮಾರ್ಗದಲ್ಲಿ ಅವರು ಅನೇಕ ಹಿಂಸೆಗಳನ್ನು ಅನುಭವಿಸಬೇಕಾಗಿ ಬಂತು. ಅವರು ಎಲ್ಲವನ್ನೂ ತಾಳ್ಮೆಯಿಂದ ಸಹಿಸಿದರು. ಅವರ ಸಂಗಡಿಗರು ಕೂಡ ಧರ್ಮಪ್ರಚಾರದ ವಿಷಯದಲ್ಲಿ ಅನೇಕ ತೊಂದರೆಗಳನ್ನು ಸಹಿಸಿದರು. ಕೊನೆಗೆ ಅಲ್ಲಾಹು ಅರಬ್ ಪರ್ಯಾಯ ದ್ವೀಪದಿಂದ ಎಲ್ಲಾ ವಿಗ್ರಹಗಳನ್ನು ಮತ್ತು ಮೂರ್ತಿಗಳನ್ನು ತೊಲಗಿಸಿದನು. ಜನರು ಅಲ್ಲಾಹನ ಧರ್ಮಕ್ಕೆ ಗುಂಪು ಗುಂಪುಗಳಾಗಿ ಪ್ರವೇಶಿಸಿದರು. ಕಅಬಾಲಯದಲ್ಲಿ ಮತ್ತು ಅದರೊಳಗೆ ಇದ್ದ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಲಾತ್, ಉಝ್ಝ, ಮನಾತ್ ವಿಗ್ರಹಗಳನ್ನು ಮತ್ತು ಅರಬ್ ಗೋತ್ರಗಳು ಪೂಜಿಸುತ್ತಿದ್ದ ಎಲ್ಲಾ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಅಲ್ಲಾಹನ ವಚನವು ಉನ್ನತವಾಯಿತು ಮತ್ತು ಇಸ್ಲಾಂ ಧರ್ಮವು ಅರಬ್ ಪರ್ಯಾಯ ದ್ವೀಪದಲ್ಲಿ ಪ್ರಕಟವಾಯಿತು. ನಂತರ ಮುಸ್ಲಿಮರು ಧರ್ಮಪ್ರಚಾರ ಮತ್ತು ಧರ್ಮಸಮರದೊಂದಿಗೆ ಪರ್ಯಾಯ ದ್ವೀಪದ ಹೊರಗೆ ಕಾಲಿಟ್ಟರು. ಅಲ್ಲಾಹು ಅವರ ಮೂಲಕ ಸೌಭಾಗ್ಯವಂತರಿಗೆ ಮಾರ್ಗದರ್ಶನ ಮಾಡಿದನು. ಜನವಾಸದ ಹೆಚ್ಚಿನ ಪ್ರದೇಶಗಳಲ್ಲೂ ಅವರ ಮೂಲಕ ಸತ್ಯ ಮತ್ತು ನ್ಯಾಯವು ಪ್ರಚಾರವಾಗುವಂತೆ ಮಾಡಿದನು. ತನ್ಮೂಲಕ ಅವರು ಸನ್ಮಾರ್ಗದ ಮುಖಂಡರು, ಸತ್ಯದ ವಾಹಕರು, ನ್ಯಾಯ ಮತ್ತು ಸುಧಾರಣೆಯ ಪ್ರಚಾರಕರಾದರು. ಅವರ ನಂತರ ಅವರ ಮಾರ್ಗದಲ್ಲೇ ಚಲಿಸಿದ ಸನ್ಮಾರ್ಗದ ಮುಖಂಡರು ಮತ್ತು ಸತ್ಯದ ಪ್ರಚಾರಕರಾದ ತಾಬಿಯೀನ್ ಮತ್ತು ಅವರ ನಂತರದವರು ಅಲ್ಲಾಹನ ಧರ್ಮವನ್ನು ಹಬ್ಬಿಸಿದರು, ಜನರನ್ನು ಏಕದೇವತ್ವಕ್ಕೆ ಆಹ್ವಾನಿಸಿದರು ಮತ್ತು ಅಲ್ಲಾಹನ ಮಾರ್ಗದಲ್ಲಿ ತಮ್ಮ ತನು-ಮನ-ಧನಗಳಿಂದ ಹೋರಾಡಿದರು. ಅವರು ಅಲ್ಲಾಹನ ವಿಷಯದಲ್ಲಿ ಯಾವುದೇ ಆಕ್ಷೇಪಕನ ಮಾತುಗಳನ್ನು ಭಯಪಡಲಿಲ್ಲ. ಅಲ್ಲಾಹು ಅವರನ್ನು ಬೆಂಬಲಿಸಿದನು, ಅವರಿಗೆ ಸಹಾಯ ಮಾಡಿದನು, ಅವರಿಂದ ದೂರ ಸರಿದ ಜನತೆಯ ಮೇಲೆ ಅವರಿಗೆ ಅಧಿಕಾರವನ್ನು ನೀಡಿದನು. ಅವರಿಗೆ ತಾನು ವಾಗ್ದಾನ ಮಾಡಿದ್ದನ್ನು ನೆರವೇರಿಸಿಕೊಟ್ಟನು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಹಾಯ ಮಾಡುವುದಾದರೆ ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಅಚಲವಾಗಿ ನಿಲ್ಲಿಸುವನು." [ಮುಹಮ್ಮದ್:7] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ತನಗೆ ಸಹಾಯ ಮಾಡುವವರಿಗೆ ಖಂಡಿತವಾಗಿಯೂ ಅಲ್ಲಾಹು ಸಹಾಯ ಮಾಡುವನು. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ, ಪ್ರತಾಪಶಾಲಿಯೂ ಆಗಿರುವನು. ನಾವು ಅವರಿಗೆ (ಮರ್ದಿತರಿಗೆ) ಭೂಮಿಯಲ್ಲಿ ಅಧಿಕಾರವನ್ನು ನೀಡಿದರೆ ಅವರು ನಮಾಝ್ ಸಂಸ್ಥಾಪಿಸುವರು, ಝಕಾತ್ ನೀಡುವರು, ಸದಾಚಾರವನ್ನು ಆದೇಶಿಸುವರು ಮತ್ತು ದುರಾಚಾರವನ್ನು ವಿರೋಧಿಸುವರು. ಕಾರ್ಯಗಳ ಪರ್ಯಾವಸಾನವು ಅಲ್ಲಾಹನಿಗಾಗಿದೆ." [ಅಲ್-ಹಜ್ಜ್: 40- 41] ನಂತರ ಜನರು ಬದಲಾದರು, ಭಿನ್ನರಾದರು, ಧರ್ಮಸಮರದ ಬಗ್ಗೆ ಅಸಡ್ಡೆ ತೋರಿದರು ಮತ್ತು ಆರಾಮ ಹಾಗೂ ಮೋಹಗಳಿಗೆ ಆದ್ಯತೆ ನೀಡಿದರು. ಅಲ್ಲಾಹು ಸಂರಕ್ಷಣೆ ನೀಡಿದವರ ಹೊರತು ಇತರರಲ್ಲಿ ಕೆಡುಕುಗಳು ಗೋಚರವಾದವು. ಅವರು ಬದಲಾದ ಕಡೆಗೆ ಅಲ್ಲಾಹು ಅವರನ್ನು ಬದಲಾಯಿಸಿದನು ಮತ್ತು ಅವರ ದುಷ್ಕರ್ಮಗಳಿಗೆ ಪ್ರತಿಫಲವಾಗಿ ಅವರ ಮೇಲೆ ಅವರ ಶತ್ರುಗಳಿಗೆ ಅಧಿಕಾರವನ್ನು ನೀಡಿದನು. ನಿಶ್ಚಯವಾಗಿಯೂ ತಮ್ಮ ರಬ್ಬ್ ತನ್ನ ದಾಸರಿಗೆ ಅನ್ಯಾಯ ಮಾಡುವವನಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅದು ಅಲ್ಲಾಹು ಒಂದು ಜನತೆಗೆ ನೀಡಿದ ಅನುಗ್ರಹವನ್ನು, ಅವರು ತಮ್ಮ ನಿಲುವಿನಲ್ಲಿ ಬದಲಾವಣೆಯನ್ನು ತರುವವರೆಗೆ ಅವನು ಬದಲಾಯಿಸಲಾರನು ಎಂಬುದರಿಂದಾಗಿದೆ." [ಅಲ್-ಅನ್ಫಾಲ್:53]. ಆದ್ದರಿಂದ, ಎಲ್ಲಾ ಮುಸಲ್ಮಾನರು, ಸರಕಾರಗಳು ಮತ್ತು ಪ್ರಜೆಗಳು ಅಲ್ಲಾಹನ ಕಡೆಗೆ ಮರಳುವುದು, ಆರಾಧನೆಗಳನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸುವುದು, ಈಗಾಗಲೇ ಸಂಭವಿಸಿದ ಕೊರತೆಗಳು ಮತ್ತು ಪಾಪಗಳಿಗೆ ಪಶ್ಚಾತ್ತಾಪಪಡುವುದು, ಅಲ್ಲಾಹು ಕಡ್ಡಾಯಗೊಳಿಸಿದ್ದನ್ನು ನೆರವೇರಿಸಲು ಆತುರಪಡುವುದು, ಅವನು ನಿಷೇಧಿಸಿದ ವಿಷಯಗಳಿಂದ ದೂರವಾಗುವುದು, ಪರಸ್ಪರ ಉಪದೇಶಿಸುವುದು ಮತ್ತು ಪರಸ್ಪರ ಸಹಕರಿಸುವುದು ಕಡ್ಡಾಯವಾಗಿದೆ.

ಶರಿಯತ್ ಕಾನೂನನ್ನು ಸ್ಥಾಪಿಸುವುದು, ಎಲ್ಲಾ ವಿಷಯಗಳಲ್ಲೂ ಶರಿಯತ್ ಪ್ರಕಾರ ತೀರ್ಪು ನೀಡುವುದು, ಶರಿಯತ್ ನ್ಯಾಯಾಲಯಗಳ ಮೊರೆ ಹೋಗುವುದು, ಶರಿಯತ್ಗೆ ವಿರುದ್ಧವಾದ ಸಾಂಪ್ರದಾಯಿಕ ಕಾನೂನುಗಳನ್ನು ನಿಷೇಧಿಸುವುದು, ಅವುಗಳ ಮೊರೆ ಹೋಗದಿರುವುದು, ಮತ್ತು ಪ್ರಜೆಗಳೆಲ್ಲರೂ ಶರಿಯತ್ ಕಾನೂನನ್ನು ಪಾಲಿಸಲು ಬದ್ಧರಾಗುವುದು ಅತ್ಯಂತ ಪ್ರಮುಖ ಕಾರ್ಯಗಳಾಗಿವೆ. ಅದೇ ರೀತಿ, ಜನರಿಗೆ ಧಾರ್ಮಿಕ ಬೋಧನೆ ನೀಡುವುದು, ಅವರಲ್ಲಿ ಇಸ್ಲಾಮೀ ಜಾಗೃತಿ ಮೂಡಿಸುವುದು, ಪರಸ್ಪರ ಸತ್ಯ ಮತ್ತು ಸಹನೆಯ ಉಪದೇಶ ನೀಡುವುದು, ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು, ಮತ್ತು ಅದನ್ನು ಮಾಡಲು ಆಡಳಿತಗಾರರಿಗೆ ಉತ್ತೇಜನ ನೀಡುವುದು ವಿದ್ವಾಂಸರ ಕಡ್ಡಾಯ ಕರ್ತವ್ಯಗಳಾಗಿವೆ. ಅದೇ ರೀತಿ, ವಿಧ್ವಂಸಕ ಸಿದ್ಧಾಂತಗಳಾದ ಸಮಾಜವಾದ, ಬಾತಿಸಂ, ರಾಷ್ಟ್ರೀಯತೆಯ ಪಕ್ಷಪಾತ ಮುಂತಾದ ಶರಿಯತ್ಗೆ ವಿರುದ್ಧವಾದ ಸಿದ್ಧಾಂತಗಳು ಮತ್ತು ಮಾರ್ಗಗಳ ವಿರುದ್ಧ ಹೋರಾಡುವುದು ಕಡ್ಡಾಯವಾಗಿದೆ. ಇದರಿಂದ ಮುಸಲ್ಮಾನರಲ್ಲುಂಟಾದ ಭ್ರಷ್ಟತೆಯನ್ನು ಅಲ್ಲಾಹು ಸರಿಪಡಿಸುವನು, ಅವರಿಂದ ಕೈತಪ್ಪಿ ಹೋದುದನ್ನು ಅವರಿಗೆ ಮರಳಿಸುವನು, ಅವರ ಹಿಂದಿನ ವೈಭವವನ್ನು ಅವರಿಗೆ ಮರಳಿ ನೀಡುವನು, ಅವರ ಶತ್ರುಗಳ ವಿರುದ್ಧ ಅವರಿಗೆ ಸಹಾಯ ಮಾಡುವನು ಮತ್ತು ಅವರಿಗೆ ಭೂಮಿಯಲ್ಲಿ ಅಧಿಕಾರ ನೀಡುವನು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಮತ್ತು ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಹಕ್ಕಾಗಿದೆ." [ಅರ್ರೂಮ್:47]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನಿಮ್ಮ ಪೈಕಿ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರೊಂದಿಗೆ, ಅಲ್ಲಾಹು ಅವರಿಗಿಂತ ಮುಂಚಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯವನ್ನು ನೀಡಿದಂತೆ ಖಂಡಿತವಾಗಿಯೂ ಅವನು ಅವರಿಗೂ ಪ್ರಾತಿನಿಧ್ಯವನ್ನು ನೀಡುವನು, ಅವನು ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮದ ವಿಷಯದಲ್ಲಿ ಅವನು ಅವರಿಗೆ ಅಧಿಕಾರವನ್ನು ನೀಡುವನು ಮತ್ತು ಅವರಿಗುಂಟಾದ ಭಯಭೀತಿಯ ಬಳಿಕ ಅವನು ಅವರಿಗೆ ನಿರ್ಭೀತಿಯನ್ನು ಬದಲಿಸಿ ಕೊಡುವನು ಎಂದು ವಾಗ್ದಾನ ಮಾಡಿರುವನು. ಅವರು ನನ್ನನ್ನು (ಮಾತ್ರ) ಆರಾಧಿಸುವರು ಮತ್ತು ನನ್ನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಲಾರರು. ಯಾರಾದರೂ ಅದರ ಬಳಿಕವೂ ಕೃತಘ್ನತೆ ತೋರಿದರೆ ಅವರೇ ಧಿಕ್ಕಾರಿಗಳಾಗಿರುವರು." [ಅನ್ನೂರ್:55]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಖಂಡಿತವಾಗಿಯೂ ನಾವು ನಮ್ಮ ಸಂದೇಶವಾಹಕರಿಗೆ ಮತ್ತು ವಿಶ್ವಾಸವಿಟ್ಟವರಿಗೆ ಐಹಿಕ ಜೀವನದಲ್ಲೂ, ಸಾಕ್ಷಿಗಳು ಎದ್ದುನಿಲ್ಲುವ ದಿನದಲ್ಲೂ ಸಹಾಯ ಮಾಡುವೆವು." [ಗಾಫಿರ್:51]. "ಅಂದರೆ ಅಕ್ರಮಿಗಳಿಗೆ ಅವರ ನೆಪಗಳು ಪ್ರಯೋಜನಕಾರಿಯಾಗದ ದಿನ! ಶಾಪವಿರುವುದು ಅವರಿಗಾಗಿದೆ ಮತ್ತು ನಿಕೃಷ್ಟ ಭವನವಿರುವುದು ಅವರಿಗೇ ಆಗಿದೆ." [ಗಾಫಿರ್:52].

ಮುಸ್ಲಿಂ ಮುಖಂಡರನ್ನು ಮತ್ತು ಜನಸಾಮಾನ್ಯರನ್ನು ಸರಿಪಡಿಸಲು, ಅವರಿಗೆ ಧಾರ್ಮಿಕ ಪಾಂಡಿತ್ಯವನ್ನು ನೀಡಲು, ಧರ್ಮನಿಷ್ಠೆಯಲ್ಲಿ ಅವರನ್ನು ಏಕೀಕರಿಸಲು, ಅವರೆಲ್ಲರನ್ನೂ ನೇರವಾದ ಮಾರ್ಗಕ್ಕೆ ಸೇರಿಸಲು, ಅವರ ಮೂಲಕ ಸತ್ಯಕ್ಕೆ ಸಹಾಯ ಮಾಡಲು, ಅವರ ಮೂಲಕ ಅಸತ್ಯವನ್ನು ನಾಶ ಮಾಡಲು, ಒಳಿತು ಮತ್ತು ಧರ್ಮನಿಷ್ಠೆಯಲ್ಲಿ ಅವರು ಪರಸ್ಪರ ಸಹಕರಿಸುವಂತೆ ಮಾಡಲು, ಅವರು ಸತ್ಯ ಮತ್ತು ಸಹನೆಯನ್ನು ಪರಸ್ಪರ ಉಪದೇಶಿಸುವಂತೆ ಮಾಡಲು ನಾವು ಅಲ್ಲಾಹನಲ್ಲಿ ಬೇಡಿಕೊಳ್ಳುತ್ತೇವೆ. ಅವನಿಗೆ ಅದರ ಸಾಮರ್ಥ್ಯವಿದೆ. ಅಲ್ಲಾಹು ಅವನ ದಾಸರು, ಸಂದೇಶವಾಹಕರು ಮತ್ತು ಅವನ ಸೃಷ್ಟಿಗಳಲ್ಲಿ ಶ್ರೇಷ್ಠರಾದ ನಮ್ಮ ಪ್ರವಾದಿ, ಇಮಾಂ ಮತ್ತು ಮುಖಂಡರಾದ ಮುಹಮ್ಮದ್ ಬಿನ್ ಅಬ್ದುಲ್ಲಾ ರವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಂಗಡಿಗರ ಮೇಲೆ, ಮತ್ತು ಅವರ ಮಾರ್ಗದರ್ಶನದಲ್ಲಿ ನಡೆಯುವವರ ಮೇಲೆ ಅವನ ಕೃಪೆ ಮತ್ತು ಶಾಂತಿಯನ್ನು ವರ್ಷಿಸಲಿ. ನಿಮ್ಮ ಮೇಲೆ ಅಲ್ಲಾಹನ ಶಾಂತಿ, ದಯೆ ಮತ್ತು ಸಮೃದ್ಧಿಯಿರಲಿ.

معلومات المادة باللغة العربية