الوصف
كتاب نافع مترجم للغة الكنادية يتعلم منه المسلم أصولا يستقيم بها دينه بأسلوبٍ مختصرٍ يوضّح له معالم هذا الدينِ العظيم؛ لتزيد معرفته بربه تعالى، ودينه الإسلام، ونبيه محمد ﷺ؛ فيعبد الله تعالى على بصيرةٍ وعلم.
ترجمات أخرى 14
المحاور
ತಯಾರಿ:
ಮುಹಮ್ಮದ್ ಅಶ್ಶಹ್ರಿ
1441 – 2020
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಸರ್ವಸ್ತುತಿ ಅಲ್ಲಾಹನಿಗೆ ಮೀಸಲು. ನಾವು ಅವನನ್ನು ಸ್ತುತಿಸುತ್ತೇವೆ, ಅವನೊಂದಿಗೆ ಸಹಾಯವನ್ನು ಬೇಡುತ್ತೇವೆ ಮತ್ತು ಅವನಲ್ಲಿ ಕ್ಷಮೆಯನ್ನು ಬೇಡುತ್ತೇವೆ. ನಾವು ನಮ್ಮ ಶರೀರಗಳ ಕೆಡುಕಿನಿಂದ ಮತ್ತು ನಮ್ಮ ಕರ್ಮಗಳ ಕೆಡುಕಿನಿಂದ ಅಲ್ಲಾಹನಲ್ಲಿ ಅಭಯ ಯಾಚಿಸುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಆರಾಧನೆಗೆ ಅರ್ಹನಾದವನು ಅಲ್ಲಾಹನಲ್ಲದೆ ಬೇರೆ ಯಾರೂ ಇಲ್ಲ ಹಾಗೂ ಮುಹಮ್ಮದ್(ಸ) ರು ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ್ಯವಹಿಸುತ್ತೇನೆ.
ಮುಂದುವರಿದು ಹೇಳುವುದೇನೆಂದರೆ:
ಸರ್ವಶಕ್ತನಾದ ಅಲ್ಲಾಹು ಆದಮರ ಸಂತತಿಗಳನ್ನು ಗೌರವಿಸಿದನು ಮತ್ತು ತನ್ನ ಅನೇಕ ಸೃಷ್ಟಿಗಳಿಗಿಂತ ಅವರಿಗೆ ಶ್ರೇಷ್ಟತೆಯನ್ನು ದಯಪಾಲಿಸಿದನು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಖಂಡಿತವಾಗಿಯೂ ನಾವು ಆದಮರ ಸಂತತಿಗಳನ್ನು ಗೌರವಿಸಿರುವೆವು." [ಅಲ್-ಇಸ್ರಾ:70] ಅವನು ಈ ಸಮುದಾಯದ ಗೌರವವನ್ನು ಅಧಿಕಗೊಳಿಸಿ ಅವರೆಡೆಗೆ ತನ್ನ ಅತಿಶ್ರೇಷ್ಠ ಪ್ರವಾದಿಯಾದ ಮುಹಮ್ಮದ್(ﷺ) ನ್ನು ಕಳುಹಿಸಿದನು. ಅವರಿಗೆ ತನ್ನ ಅತಿಶ್ರೇಷ್ಠ ಗ್ರಂಥವಾದ ಪವಿತ್ರ ಕುರ್ಆನ್ ಅನ್ನು ಇಳಿಸಿಕೊಟ್ಟನು. ಅವರಿಗೆ ಅತಿಶ್ರೇಷ್ಠ ಧರ್ಮವಾದ ಇಸ್ಲಾಂ ಧರ್ಮವನ್ನು ದಯಪಾಲಿಸಿ ತೃಪ್ತಿಪಟ್ಟಿರುವನು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನೀವು ಮನುಕುಲಕ್ಕಾಗಿ ನಿಯೋಗಿಸಲಾದ ಉತ್ತಮ ಸಮುದಾಯವಾಗಿದ್ದೀರಿ. ನೀವು ಒಳಿತನ್ನು ಆದೇಶಿಸುತ್ತೀರಿ, ಕೆಡುಕಿನಿಂದ ತಡೆಯುತ್ತೀರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ಗ್ರಂಥದವರು ವಿಶ್ವಾಸವಿಡುತ್ತಿದ್ದರೆ ಅದು ಅವರ ಪಾಲಿಗೆ ಉತ್ತಮವಾಗಿರುತ್ತಿತ್ತು. ಅವರಲ್ಲಿ ವಿಶ್ವಾಸವಿಟ್ಟವರೂ ಇದ್ದಾರೆ. ಆದರೆ ಅವರ ಪೈಕಿ ಅಧಿಕಾಂಶ ಜನರು ಧಿಕ್ಕಾರಿಗಳಾಗಿರುವರು." [ಆಲು ಇಮ್ರಾನ್:110] ಇಸ್ಲಾಂ ಧರ್ಮದ ಕಡೆಗೆ ಮಾರ್ಗದರ್ಶನ ಮಾಡಿರುವುದು, ಅದರಲ್ಲಿ ಸ್ಥಿರವಾಗಿ ನಿಲ್ಲಿಸಿರುವುದು ಮತ್ತು ಅದರ ನಿಯಮ ಹಾಗೂ ಕಾನೂನುಗಳ ಪ್ರಕಾರ ಕರ್ಮವೆಸಗುವಂತೆ ಮಾಡಿದ್ದು ಅಲ್ಲಾಹು ಮನುಷ್ಯನಿಗೆ ಕರುಣಿಸಿದ ಅತಿದೊಡ್ಡ ಅನುಗ್ರಹನಾಗಿದೆ. ಹೊಸದಾಗಿ ಇಸ್ಲಾಂ ಧರ್ಮ ಸ್ವೀಕರಿಸಿರುವ ವ್ಯಕ್ತಿ ಆರಂಭದಲ್ಲೇ ಕಡ್ಡಾಯವಾಗಿ ಕಲಿಯಬೇಕಾದುದನ್ನು, ಗಾತ್ರದಲ್ಲಿ ಚಿಕ್ಕದಾದರೂ ಮಹಾ ವಿಷಯಗಳನ್ನು ಒಳಗೊಂಡಿರುವ ಈ ಪುಸ್ತಕದಿಂದ ಸಂಕ್ಷಿಪ್ತವಾಗಿ ಕಲಿಯಬಹುದು. ಈ ಪುಸ್ತಕ ಅವನಿಗೆ ಈ ಮಹಾನ್ ಧರ್ಮದ ಮುಖ್ಯಾಂಶಗಳನ್ನು ವಿವರಿಸಿಕೊಡುತ್ತದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಇದರ ಪ್ರಕಾರ ಕರ್ಮವೆಸಗಿದ ನಂತರ ಅಲ್ಲಾಹು, ಪ್ರವಾದಿ ಮುಹಮ್ಮದ್(ಸ) ಮತ್ತು ಇಸ್ಲಾಂ ಧರ್ಮದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಹೊರಡಬಹುದು. ಇದರಿಂದ ಅವನಿಗೆ ಒಳದೃಷ್ಟಿ ಮತ್ತು ಜ್ಞಾನದ ಮೂಲಕ ಅಲ್ಲಾಹನನ್ನು ಆರಾಧಿಸಲು ಸಾಧ್ಯವಾಗುತ್ತದೆ, ಅವನ ಹೃದಯ ಶಾಂತವಾಗುತ್ತದೆ. ಆರಾಧನೆ ಮತ್ತು ಪ್ರವಾದಿ(ಸ) ರವರ ಅನುಸರಣೆಯ ಮೂಲಕ ಅಲ್ಲಾಹನ ಸಾಮೀಪ್ಯ ಪಡೆಯುವುದರಿಂದ ಅವನ ವಿಶ್ವಾಸ ಹೆಚ್ಚಾಗುತ್ತದೆ.
ಅಲ್ಲಾಹು ಈ ಪುಸ್ತಕದಲ್ಲಿರುವ ಪ್ರತಿಯೊಂದು ಪದವನ್ನೂ ಆಶೀರ್ವದಿಸಲಿ, ಇಸ್ಲಾಂ ಮತ್ತು ಮುಸ್ಲಿಮರಿಗೆ ಇದರಿಂದ ಲಾಭವಾಗಲಿ, ಇದನ್ನು ಅವನ ಪ್ರೀತಿ ಮಾತ್ರ ಉದ್ದೇಶಿಸಿ ಮಾಡಿದ ಕರ್ಮಗಳಿಗೆ ಸೇರಿಸಲಿ ಮತ್ತು ಇದರ ಪ್ರತಿಫಲವನ್ನು ಎಲ್ಲ ಜೀವಂತ ಮತ್ತು ಮೃತ ಮುಸ್ಲಿಮರಿಗೆ ನೀಡಲಿ ಎಂದು ನಾನು ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ.
ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಾಬಾಗಳೆಲ್ಲರ ಮೇಲೆ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ.
ಮುಹಮ್ಮದ್ ಬಿನ್ ಶೈಬ ಅಶ್ಶಹ್ರಿ
ಹಿ.ಶ. 2 / 11 / 1441
• ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ." [ಅಲ್-ಬಖರ:21]. • ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅವನೇ ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ." [ಅಲ್-ಹಶ್ರ್:22]. • ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ.ಅವನು ಎಲ್ಲವನ್ನು ಆಲಿಸುವವನೂ ಎಲ್ಲವನ್ನು ವೀಕ್ಷಿಸುವವನೂ ಆಗಿರುವನು." [ಅಶ್ಶೂರಾ:11].
• ಅಲ್ಲಾಹು ನನ್ನ ಪ್ರಭು ಮತ್ತು ಪ್ರತಿಯೊಂದು ವಸ್ತುವಿನ ಪರಿಪಾಲಕ, ಅಂದರೆ ಎಲ್ಲದರ ಮಾಲೀಕ, ಸೃಷ್ಟಿಕರ್ತ, ಅನ್ನಪಾನೀಯವನ್ನು ಒದಗಿಸುವವ ಮತ್ತು ಎಲ್ಲವನ್ನು ಹತೋಟಿಯಲ್ಲಿಡುವ ನಿಯಂತ್ರಕ.
• ಅವನು ಮಾತ್ರ ಆರಾಧನೆಗೆ ಅರ್ಹನು, ಅವನ ಹೊರತಾಗಿ ಬೇರೆ ಪರಿಪಾಲಕನಿಲ್ಲ, ಅವನಲ್ಲದೆ ಬೇರೆ ದೇವರಿಲ್ಲ.
• ಅವನಿಗೆ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಉನ್ನತ ಗುಣಲಕ್ಷಣಗಳಿವೆ. ಅವುಗಳನ್ನು ಅವನು ತನಗಾಗಿ ದೃಡೀಕರಿಸಿದ್ದಾನೆ ಮತ್ತು ಅವನ ಪ್ರವಾದಿ ಕೂಡ ಅವನಿಗಾಗಿ ದೃಡೀಕರಿಸಿದ್ದಾರೆ. ಪರಿಪೂರ್ಣತೆ ಮತ್ತು ಸೌಂದರ್ಯದಲ್ಲಿ ಅವು ಪರಮೋಚ್ಛವಾಗಿವೆ. ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಆಲಿಸುವವನೂ ಎಲ್ಲವನ್ನು ವೀಕ್ಷಿಸುವವನೂ ಆಗಿದ್ದಾನೆ.
ಅವನ ಕೆಲವು ಸುಂದರವಾದ ಹೆಸರುಗಳು:
ಅರ್ರಝ್ಝಾಕ್, ಅರ್ರಹ್ಮಾನ್, ಅಲ್-ಕದೀರ್, ಅಲ್-ಮಲಿಕ್, ಅಸ್ಸಮೀಅ್, ಅಸ್ಸಲಾಂ, ಅಲ್-ಬಸೀರ್, ಅಲ್-ವಕೀಲ್, ಅಲ್-ಖಾಲಿಕ್, ಅಲ್ಲತೀಫ್, ಅಲ್-ಕಾಫಿ, ಅಲ್-ಗಫೂರ್.
ಅರ್ರಝ್ಝಾಕ್ (ನಿರಂತರ ಆಹಾರ ಒದಗಿಸುವವನು): ದಾಸರ ಅನ್ನಾಧಾರ ಜೀವನಾಂಶವನ್ನು ನೋಡಿಕೊಳ್ಳುವವನು. ಅದರಿಂದಲೇ ಅವರ ಹೃದಯ ಮತ್ತು ದೇಹವು ನೆಲೆನಿಲ್ಲುವುದು.
ಅರ್ರಹ್ಮಾನ್ (ಅತ್ಯಂತ ಕರುಣಾಮಯಿ): ಎಲ್ಲಾ ವಸ್ತುಗಳನ್ನೂ ವಿಶಾಲವಾಗಿ ಒಳಗೊಳ್ಳುವಂತಹ ಅಪಾರ ಕರುಣೆಯನ್ನು ಹೊಂದಿರುವವನು.
ಅಲ್-ಕದೀರ್ (ಸರ್ವಶಕ್ತ): ದೌರ್ಬಲ್ಯ ಅಥವಾ ಮಂದಗತಿ ಬಾಧಿಸದ ಸಂಪೂರ್ಣ ಶಕ್ತಿಯನ್ನು ಹೊಂದಿರುವವನು.
ಅಲ್-ಮಲಿಕ್ (ಅಧಿಪತಿ): ಅವನು ಮಹಾತ್ಮೆ, ಸರ್ವಾಧಿಕಾರ ಮತ್ತು ನಿಯಂತ್ರಣದ ಗುಣಲಕ್ಷಣಗಳಿಂದ ಬಣ್ಣಿಸಲ್ಪಟ್ಟವನು. ವ್ಯವಹರಿಸಲಾಗುವ ಎಲ್ಲಾ ವಸ್ತುಗಳ ಅಧಿಪತಿ.
ಅಸ್ಸಮೀಅ್ (ಎಲ್ಲವನ್ನೂ ಕೇಳುವವನು): ರಹಸ್ಯ ಮತ್ತು ಬಹಿರಂಗವಾದ ಎಲ್ಲಾ ಶಬ್ದಗಳನ್ನು ಕೇಳುವವನು.
ಅಸ್ಸಲಾಂ (ಸರ್ವ ನ್ಯೂನತೆಗಳಿಂದ ಸುರಕ್ಷಿತನು): ಎಲ್ಲಾ ರೀತಿಯ ನ್ಯೂನತೆಗಳು, ಕೊರತೆಗಳು ಮತ್ತು ದೋಷಗಳಿಂದ ಮುಕ್ತನಾದವನು.
ಅಲ್-ಬಸೀರ್ (ಎಲ್ಲವನ್ನೂ ನೋಡುವವನು): ಅವನ ದೃಷ್ಟಿ ಎಲ್ಲಾ ವಸ್ತುಗಳನ್ನೂ ಆವರಿಸಿಕೊಂಡಿದೆ. ಅವು ಎಷ್ಟೇ ಸೂಕ್ಷ್ಮವಾಗಿದ್ದರೂ ಚಿಕ್ಕದಾಗಿದ್ದರೂ ಸರಿ. ಅವನು ಸರ್ವ ವಸ್ತುಗಳನ್ನು ನೋಡುತ್ತಾನೆ, ಅವುಗಳನ್ನು ಸೂಕ್ಷ್ಮವಾಗಿ ಅರಿಯುತ್ತಾನೆ ಮತ್ತು ಅವುಗಳ ಆಂತರ್ಯಗಳನ್ನು ತಿಳಿದುಕೊಳ್ಳುತ್ತಾನೆ.
ಅಲ್-ವಕೀಲ್ (ಹೊಣೆಗಾರಿಕೆ ವಹಿಸಿಕೊಂಡವನು): ತನ್ನ ಸೃಷ್ಟಿಗಳ ಆಹಾರದ ಹೊಣೆ ವಹಿಸಿಕೊಂಡವನು ಮತ್ತು ಅವರಿಗೆ ಬೇಕಾದುದೆಲ್ಲವನ್ನೂ ದಯಪಾಲಿಸಿ ಅವರನ್ನು ನೆಲೆನಿಲ್ಲಿಸುವವನು. ತನ್ನ ಇಷ್ಟದಾಸರ (ಔಲಿಯಾಗಳ) ರಕ್ಷಣೆಯನ್ನು ವಹಿಸಿಕೊಂಡವನು, ಅವರಿಗೆ ವಿಷಯಗಳನ್ನು ಸುಲಭಗೊಳಿಸುವವನು ಮತ್ತು ಅವರಿಗೆ ಸಾಕಾಗುವವನು.
ಅಲ್-ಖಾಲಿಕ್ (ಸೃಷ್ಟಿಕರ್ತ): ಯಾವುದೇ ಪೂರ್ವ ಮಾದರಿಯಿಲ್ಲದೆ ವಸ್ತುಗಳನ್ನು ಆವಿಷ್ಕರಿಸಿ ಸೃಷ್ಟಿಸುವವನು.
ಅಲ್ಲತೀಫ್ (ಅನುಕಂಪವುಳ್ಳವನು): ತನ್ನ ದಾಸರನ್ನು ಗೌರವಿಸುವವನು, ಅವರಿಗೆ ಕರುಣೆ ತೋರುವವನು ಮತ್ತು ಅವರ ಬೇಡಿಕೆಯನ್ನು ಈಡೇರಿಸುವವನು.
ಅಲ್-ಕಾಫಿ (ಸಾಕಾಗುವವನು): ತನ್ನ ದಾಸರಿಗೆ ಅಗತ್ಯವಿರುವ ಎಲ್ಲದ್ದಕ್ಕೂ ಸಾಕಾಗುವವನು. ಇತರರ ಆವಶ್ಯಕತೆಯಿಲ್ಲದ ರೀತಿಯಲ್ಲಿ ಎಲ್ಲವನ್ನೂ ದಯಪಾಲಿಸುವವನು. ಇತರರ ಅಗತ್ಯವಿಲ್ಲದ ರೀತಿಯಲ್ಲಿ (ತನ್ನ ದಾಸರಿಗೆ) ಸಾಕಾಗುವವನು.
ಅಲ್-ಗಫೂರ್ (ಕ್ಷಮಿಸುವವನು): ತನ್ನ ದಾಸರನ್ನು ಅವರ ಪಾಪಗಳ ಕೆಡುಕಿನಿಂದ ರಕ್ಷಿಸುವವನು ಮತ್ತು ಆ ಪಾಪಗಳಿಗಾಗಿ ಅವರನ್ನು ಶಿಕ್ಷಿಸದವನು.
ಮುಸ್ಲಿಮನು ಅಲ್ಲಾಹನ ಅದ್ಭುತ ಸೃಷ್ಟಿ ಮತ್ತು ಅವನ ಸರಳೀಕರಣದ ಬಗ್ಗೆ ಆಲೋಚಿಸಬೇಕು. ಜೀವಿಗಳು ತಮ್ಮ ಮರಿಗಳಿಗೆ ಮಾಡುವ ಆರೈಕೆ ಅದರಲ್ಲೊಂದಾಗಿದೆ. ಮರಿಗಳಿಗೆ ಆಹಾರ ನೀಡಲು ಅವು ತೋರುವ ಉತ್ಸಾಹ, ಮರಿಗಳು ಸ್ವಾವಲಂಬಿಯಾಗುವವರೆಗೆ ಅವು ತೋರುವ ಕಾಳಜಿ ಅದ್ಭುತವಾಗಿವೆ. ಇವುಗಳನ್ನು ಸೃಷ್ಟಿಸಿದ ಮತ್ತು ಇವುಗಳ ಬಗ್ಗೆ ಅನುಕಂಪ ಹೊಂದಿರುವ ಅಲ್ಲಾಹು ಪರಮ ಪರಿಶುದ್ಧನು. ಆ ಮರಿಗಳು ಸಂಪೂರ್ಣ ಬಲಹೀನವಾಗಿದ್ದರೂ ಅವುಗಳಿಗೆ ಸಹಾಯ ಮಾಡುವವರನ್ನು ಮತ್ತು ಅವುಗಳ ಯೋಗಕ್ಷೇಮ ವಿಚಾರಿಸುವವರನ್ನು ಅವನು ಸಿದ್ಧಗೊಳಿಸಿರುವುದು ಅವನ ಅನುಕಂಪದ ಭಾಗವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ನಿಮಗೆ ನಿಮ್ಮಿಂದಲೇ ಒಬ್ಬ ಸಂದೇಶವಾಹಕರು ಬಂದಿರುವರು. ನೀವು ಕಷ್ಟಪಡುವುದು ಅವರಿಗೆ ಸಹಿಸಲಾಗದು, ಅವರು ನಿಮ್ಮ ಬಗ್ಗೆ ಅತ್ಯಾಸಕ್ತಿಯುಳ್ಳವರಾಗಿರುವರು ಮತ್ತು ಸತ್ಯವಿಶ್ವಾಸಿಗಳೊಂದಿಗೆ ಅಪಾರ ದಯೆಯುಳ್ಳವರೂ, ಕರುಣೆಯುಳ್ಳವರೂ ಆಗಿರುವರು." [ಅತ್ತೌಬಾ:128] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಸರ್ವಲೋಕದವರಿಗೆ ಕಾರುಣ್ಯವಾಗಿಯೇ ನಾವು ನಿಮ್ಮನ್ನು ಕಳುಹಿಸಿದ್ದೇವೆ." [ಅಲ್-ಅಂಬಿಯಾ:107]
ಮುಹಮ್ಮದ್(ಸ) ರವರು ಉಡುಗೊರೆಯಾಗಿ ನೀಡಲಾದ ಕಾರುಣ್ಯವಾಗಿದ್ದಾರೆ
ಅವರ ಹೆಸರು ಮುಹಮ್ಮದ್ ಬಿನ್ ಅಬ್ದುಲ್ಲಾ(ಸ). ಅವರು ಪ್ರವಾದಿಗಳಲ್ಲಿ ಮತ್ತು ಸಂದೇಶವಾಹಕರಲ್ಲಿ ಕಟ್ಟಕಡೆಯವರು. ಸರ್ವಶಕ್ತನಾದ ಅಲ್ಲಾಹು ಅವರನ್ನು ಜನರಿಗೆ ಒಳಿತನ್ನು ತಿಳಿಸಿಕೊಡಲು ಮತ್ತು ಕೆಡುಕನ್ನು ವಿರೋಧಿಸಲು ಇಸ್ಲಾಂ ಧರ್ಮದೊಂದಿಗೆ ಸಂಪೂರ್ಣ ಮನುಕುಲಕ್ಕೆ ಕಳುಹಿಸಿದ್ದಾನೆ. ಆ ಒಳಿತುಗಳಲ್ಲಿ ಅತಿದೊಡ್ಡದು ತೌಹೀದ್. ಆ ಕೆಡುಕುಗಳಲ್ಲಿ ಅತಿದೊಡ್ಡದು ಶಿರ್ಕ್.
ಅವರು ಆಜ್ಞಾಪಿಸಿರುವುದನ್ನು ಪಾಲಿಸುವುದು, ಅವರು ಹೇಳಿದ್ದನ್ನು ನಂಬುವುದು, ಮತ್ತು ಅವರು ವಿರೋಧಿಸಿದ ಮತ್ತು ಗದರಿಸಿದ ವಿಷಯಗಳಿಂದ ದೂರವಿರುವುದು ಹಾಗೂ ಅವರ ಮಾರ್ಗದರ್ಶನದಂತೆ ಮಾತ್ರ ಅಲ್ಲಾಹನನ್ನು ಆರಾಧಿಸುವುದು ಕಡ್ಡಾಯವಾಗಿದೆ.
ಏಕೈಕನೂ ಸಹಭಾಗಿಯಿಲ್ಲದವನೂ ಆದ ಅಲ್ಲಾಹನಲ್ಲದೆ ಇತರ ಯಾರೂ ಆರಾಧನೆಗೆ ಅರ್ಹರಲ್ಲ ಎನ್ನುವುದು ಅವರ ಮತ್ತು ಅವರಿಗಿಂತ ಮುಂಚೆ ಬಂದಿರುವ ಎಲ್ಲಾ ಪ್ರವಾದಿಗಳ ಸಂದೇಶವಾಗಿದೆ.
ಪ್ರವಾದಿ(ಸ) ರವರ ಕೆಲವು ಗುಣಗಳು:
ಪ್ರಾಮಾಣಿಕತೆ, ಕರುಣೆ, ಸಹಿಷ್ಣುತೆ, ತಾಳ್ಮೆ, ಧೈರ್ಯ, ಉದಾರತನ, ಉತ್ತಮ ಸ್ವಭಾವ, ನ್ಯಾಯಪಾಲನೆ, ವಿನಯ, ಕ್ಷಮಿಸುವ ಗುಣ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಮನುಷ್ಯರೇ! ಖಂಡಿತವಾಗಿಯೂ ನಿಮಗೆ ನಿಮ್ಮ ಪ್ರಭುವಿನ ವತಿಯಿಂದ ಸ್ಪಷ್ಟವಾದ ಪುರಾವೆಯು ಬಂದಿರುತ್ತದೆ. ನಾವು ನಿಮಗೆ ಸ್ಪಷ್ಟವಾದ ಒಂದು ಪ್ರಕಾಶವನ್ನೂ ಇಳಿಸಿಕೊಟ್ಟಿರುವೆವು." [ಅನ್ನಿಸಾ:174]
ಪವಿತ್ರ ಕುರ್ಆನ್ ಸರ್ವಶಕ್ತನಾದ ಅಲ್ಲಾಹನ ವಚನವಾಗಿದೆ. ಅವನು ಅದನ್ನು ಪ್ರವಾದಿ ಮುಹಮ್ಮದ್(ಸ) ರಿಗೆ, ಅವರು ಜನರನ್ನು ಅಂಧಕಾರಗಳಿಂದ ಬೆಳಕಿಗೆ ತಂದು ನೇರ ಮಾರ್ಗದತ್ತ ಮುನ್ನಡೆಸಲು, ಅವತೀರ್ಣಗೊಳಿಸಿದನು.
ಅದನ್ನು ಪಠಿಸುವವರಿಗೆ ಮಹಾ ಪ್ರತಿಫಲವಿದೆ. ಅದರ ಮಾರ್ಗದರ್ಶನದಂತೆ ನಡೆಯುವವರು ಸನ್ಮಾರ್ಗಿಗಳಾಗುತ್ತಾರೆ.
ಪ್ರವಾದಿ(ಸ) ರವರು ಹೇಳಿದರು: ಇಸ್ಲಾಂ ಧರ್ಮವನ್ನು ಐದು ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. ಅವು: ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಹಜ್ಜ್ ನಿರ್ವಹಿಸುವುದು.
ಇಸ್ಲಾಮಿನ ಸ್ತಂಭಗಳು ಪ್ರತಿಯೊಬ್ಬ ಮುಸ್ಲಿಮನಿಗೂ ಕಡ್ಡಾಯವಾಗಿರುವ ಆರಾಧನೆಗಳಾಗಿವೆ. ಅವುಗಳನ್ನು ಕಡ್ಡಾಯವೆಂದು ನಂಬದಿದ್ದರೆ ಮತ್ತು ಅವೆಲ್ಲವನ್ನೂ ನಿರ್ವಹಿಸದಿದ್ದರೆ ಯಾರೂ ಮುಸ್ಲಿಮರಾಗಿರುವುದಿಲ್ಲ. ಏಕೆಂದರೆ ಇಸ್ಲಾಮನ್ನು ಅದರ ಮೇಲೆ ನಿರ್ಮಿಸಲಾಗಿದೆ. ಆದ್ದರಿಂದಲೇ ಇದನ್ನು ಇಸ್ಲಾಂನ ಸ್ತಂಭಗಳು ಎಂದು ಕರೆಯಲಾಗುತ್ತದೆ.
ಅ ಸ್ಥಂಭಗಳು ಹೀಗಿವೆ:
ಮೊದಲನೆಯ ಸ್ತಂಭ: ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ವಹಿಸುವುದು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಲ್ಲಾಹನನ ಹೊರತು ಅನ್ಯ ಆರಾಧ್ಯರಿಲ್ಲ ಎಂಬುದನ್ನು ಅರಿತುಕೊಳ್ಳಿರಿ." [ಮುಹಮ್ಮದ್:19] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಖಂಡಿತವಾಗಿಯೂ ನಿಮಗೆ ನಿಮ್ಮಿಂದಲೇ ಒಬ್ಬ ಸಂದೇಶವಾಹಕರು ಬಂದಿರುವರು. ನೀವು ಕಷ್ಟಪಡುವುದು ಅವರಿಗೆ ಸಹಿಸಲಾಗದು, ಅವರು ನಿಮ್ಮ ಬಗ್ಗೆ ಅತ್ಯಾಸಕ್ತಿಯುಳ್ಳವರಾಗಿರುವರು ಮತ್ತು ಸತ್ಯವಿಶ್ವಾಸಿಗಳೊಂದಿಗೆ ಅಪಾರ ದಯೆಯುಳ್ಳವರೂ, ಕರುಣೆಯುಳ್ಳವರೂ ಆಗಿರುವರು." [ಅತ್ತೌಬಾ:128]
"ಲಾ ಇಲಾಹ ಇಲ್ಲಲ್ಲಾಹ್" ಎಂಬ ಸಾಕ್ಷ್ಯವಚನದ ಅರ್ಥ: ಅಲ್ಲಾಹನನ್ನು ಹೊರತುಪಡಿಸಿ ಆರಾಧನೆಗೆ ಯಾರೂ ನೈಜ ಹಕ್ಕುದಾರರಲ್ಲ.
ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯವಚನದ ಅರ್ಥ: ಅವರು ಆಜ್ಞಾಪಿಸಿರುವುದನ್ನು ಪಾಲಿಸುವುದು, ಅವರು ಹೇಳಿದ್ದನ್ನು ನಂಬುವುದು, ಅವರು ವಿರೋಧಿಸಿದ ಮತ್ತು ಗದರಿಸಿದ ವಿಷಯಗಳಿಂದ ದೂರವಿರುವುದು ಹಾಗೂ ಅವರ ಮಾರ್ಗದರ್ಶನದಂತೆ ಮಾತ್ರ ಅಲ್ಲಾಹನನ್ನು ಆರಾಧಿಸುವುದು.
ಎರಡನೇ ಸ್ತಂಭ: ನಮಾಝನ್ನು ಸಂಸ್ಥಾಪಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನೀವು ನಮಾಝ್ ಸಂಸ್ಥಾಪಿಸಿರಿ." [ಅಲ್-ಬಖರ:110].
ನಮಾಝನ್ನು ಸಂಸ್ಥಾಪಿಸುವುದು ಎಂದರೆ ಸರ್ವಶಕ್ತನಾದ ಅಲ್ಲಾಹು ಶಾಸನಬದ್ಧಗೊಳಿಸಿದಂತೆ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್(ಸ) ರು ಕಲಿಸಿದಂತೆ ನಮಾಝ್ ನಿರ್ವಹಿಸುವುದು.
ಮೂರನೇ ಸ್ಥಂಭ: ಝಕಾತ್ ನೀಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಮತ್ತು ಝಕಾತ್ ನೀಡಿರಿ." [ಅಲ್-ಬಖರ:110].
ಮುಸ್ಲಿಮರ ವಿಶ್ವಾಸದ ಸತ್ಯತೆಯನ್ನು ಪರೀಕ್ಷಿಸುವುದಕ್ಕಾಗಿ, ಅಲ್ಲಾಹು ತನಗೆ ಕರುಣಿಸಿದ ಸಂಪತ್ತೆಂಬ ಅನುಗ್ರಹಕ್ಕಾಗಿ ಅವನಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಹಸ್ತವಾಗಿ ಸರ್ವಶಕ್ತನಾದ ಅಲ್ಲಾಹು ಝಕಾತ್ ಅನ್ನು ಕಡ್ಡಾಯಗೊಳಿಸಿದನು.
ಝಕಾತ್ ನೀಡುವುದೆಂದರೆ ಅದನ್ನು ಅರ್ಹರಿಗೆ ನೀಡುವುದಾಗಿದೆ.
ಸಂಪತ್ತು ಒಂದು ನಿರ್ದಿಷ್ಟ ಮೊತ್ತವನ್ನು ತಲುಪಿದರೆ ಆಗ ಅದಕ್ಕೆ ಕಡ್ಡಾಯವಾಗುವ ಒಂದು ಹಕ್ಕಾಗಿದೆ ಝಕಾತ್. ಅಲ್ಲಾಹು ಪವಿತ್ರ ಕುರ್ಆನ್ನಲ್ಲಿ ಹೇಳಿದ ಎಂಟು ವರ್ಗಗಳಿಗೆ ಇದನ್ನು ನೀಡಲಾಗುತ್ತದೆ. ಬಡವರು ಮತ್ತು ನಿರ್ಗತಿಕರು ಅದರಲ್ಲಿ ಸೇರುತ್ತಾರೆ.
ಝಕಾತ್ ಕೊಡುವುದರಿಂದ ದಯೆ, ಅನುಕಂಪವೆಂಬ ಗುಣಗಳು ಸಿಗುತ್ತವೆ. ಅದು ಮುಸ್ಲಿಮರ ಸ್ವಭಾವ ಮತ್ತು ಸಂಪತ್ತನ್ನು ಶುದ್ಧೀಕರಿಸುತ್ತದೆ. ಬಡವರು ಮತ್ತು ನಿರ್ಗತಿಕರ ಆತ್ಮಗಳಿಗೆ ತೃಪ್ತಿ ನೀಡುತ್ತದೆ. ಮುಸ್ಲಿಂ ಸಮುದಾಯದ ಸದಸ್ಯರಲ್ಲಿ ಪ್ರೀತಿ ಮತ್ತು ಸಹೋದರತ್ವದ ಸಂಬಂಧಗಳನ್ನು ಬಲಪಡಿಸುತ್ತದೆ. ಆದ್ದರಿಂದಲೇ ಸಜ್ಜನ ಮುಸ್ಲಿಮರು ಇದನ್ನು ಮನಃಸಂತೃಪ್ತಿಯಿಂದ ಮತ್ತು ಸಂತೋಷದಿಂದ ನೀಡುತ್ತಾರೆ. ಏಕೆಂದರೆ ಇದರಲ್ಲಿ ಇತರ ಜನರನ್ನು ಸಂತೋಷಪಡಿಸುವಂತದ್ದು ಇದೆ.
ಝಕಾತ್ ಮೊತ್ತವು 2.5% ಆಗಿದೆ. ಸಂಗ್ರಹಿಸಿಟ್ಟ ಚಿನ್ನ, ಬೆಳ್ಳಿ, ನಗದು, ಲಾಭದ ಉದ್ದೇಶದಿಂದ ಮಾರಾಟಕ್ಕಿಟ್ಟ ವಾಣಿಜ್ಯ ಸರಕುಗಳು, ಇವುಗಳ ಬೆಲೆ ಒಂದು ನಿರ್ದಿಷ್ಠ ಮೊತ್ತವನ್ನು ತಲುಪಿದರೆ ಮತ್ತು ಅದಕ್ಕೆ ಒಂದು ವರ್ಷ ಪೂರ್ತಿಯಾದರೆ ಝಕಾತ್ ಕೊಡುವುದು ಕಡ್ಡಾಯವಾಗುತ್ತದೆ.
ಅದೇ ರೀತಿ ಒಂಟೆ, ಹಸು, ಕುರಿ ಮುಂತಾದ ಒಂದು ನಿರ್ದಿಷ್ಟ ಸಂಖ್ಯೆಯ ಜಾನುವಾರುಗಳನ್ನು ಹೊಂದಿದ್ದರೆ ಅದಕ್ಕೂ ಝಕಾತ್ ಕಡ್ಡಾಯವಾಗುತ್ತದೆ. ಅವುಗಳ ಮಾಲಿಕನು ಅವುಗಳಿಗೆ ಆಹಾರ ನೀಡದೆ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಅವು ಸ್ವಯಂ ಮೇಯ್ದು ತಿನ್ನುವುದಾಗಿದ್ದರೆ.
ಅದೇ ರೀತಿ, ಭೂಮಿಯಿಂದ ಹೊರಬರುವ (ಉತ್ಪಾದನೆಯಾಗುವ) ಧಾನ್ಯಗಳು, ಹಣ್ಣುಗಳು, ಖನಿಜಗಳು ಮತ್ತು ನಿಧಿಗಳು ಒಂದು ನಿರ್ದಿಷ್ಟ ಪ್ರಮಾಣವನ್ನು ತಲುಪಿದರೆ ಅವುಗಳಿಗೂ ಝಕಾತ್ ಕಡ್ಡಾಯವಾಗುತ್ತದೆ.
ನಾಲ್ಕನೇ ಸ್ಥಂಭ: ರಮದಾನ್ ತಿಂಗಳ ಉಪವಾಸ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರ ಮೇಲೆ ವಿಧಿಸಲಾದಂತೆ ನಿಮ್ಮ ಮೇಲೂ ಉಪವಾಸ ಆಚರಿಸುವುದನ್ನು ಕಡ್ಡಾಯವಾಗಿ ವಿಧಿಸಲಾಗಿದೆ. ನೀವು ಭಯಭಕ್ತಿ ಪಾಲಿಸುವ ಸಲುವಾಗಿ." [ಅಲ್-ಬಖರ:110].
ರಮದಾನ್: ಇದು ಹಿಜ್ರಿ ಕ್ಯಾಲೆಂಡರ್ನ ಒಂಬತ್ತನೇ ತಿಂಗಳು. ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ತಿಂಗಳು. ವರ್ಷದ ಇತರ ತಿಂಗಳುಗಳಿಗಿಂತ ಇದಕ್ಕೆ ವಿಶೇಷ ಸ್ಥಾನಮಾನವಿದೆ. ಈ ತಿಂಗಳು ಸಂಪೂರ್ಣ ಉಪವಾಸ ಆಚರಿಸುವುದು ಇಸ್ಲಾಮಿನ ಐದು ಸ್ತಂಭಗಳಲ್ಲಿ ಒಂದಾಗಿದೆ.
ರಮದಾನ್ ತಿಂಗಳ ಉಪವಾಸವೆಂದರೆ: ಅನುಗ್ರಹೀತ ತಿಂಗಳ ದಿನಗಳಲ್ಲಿ ಆಹಾರ, ಪಾನೀಯ, ಲೈಂಗಿಕ ಸಂಭೋಗ ಮತ್ತು ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಮುರಿಯುವ ಎಲ್ಲ ವಿಷಯಗಳನ್ನು ತ್ಯಜಿಸುವ ಮೂಲಕ ಸರ್ವಶಕ್ತವಾದ ಅಲ್ಲಾಹನನ್ನು ಆರಾಧಿಸುವುದಾಗಿದೆ.
ಐದನೇ ಸ್ತಂಭ: ಅಲ್ಲಾಹನ ಭವನಕ್ಕೆ ಹಜ್ಜ್ ನಿರ್ವಹಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಆ ಭವನವನ್ನು ತಲುಪಲು ಸಾಧ್ಯವಿರುವ ಜನರು ಅದರೆಡೆಗೆ ಹಜ್ಜ್ ಯಾತ್ರೆ ಮಾಡುವುದು ಅವರಿಗೆ ಅಲ್ಲಾಹನೊಂದಿಗಿರುವ ಬಾಧ್ಯತೆಯಾಗಿದೆ." [ಆಲು ಇಮ್ರಾನ್:97] ಜೀವನದಲ್ಲಿ ಒಮ್ಮೆಯಾದರೂ ಹಜ್ಜ್ ನಿರ್ವಹಿಸಲು ಸಾಧ್ಯವಿರುವವರಿಗೆ ಹಜ್ಜ್ ನಿರ್ವಹಿಸುವುದು ಕಡ್ಡಾಯವಾಗಿದೆ, ಅಂದರೆ: ನಿರ್ದಿಷ್ಟ ಸಮಯದಲ್ಲಿ ಕೆಲವು ವಿಶೇಷ ಆರಾಧನೆಗಳನ್ನು ಮಕ್ಕಾದಲ್ಲಿರುವ ಪವಿತ್ರ ಭವನದಲ್ಲಿ ನಿರ್ವಹಿಸುವುದು ಮತ್ತು ಅಲ್ಲಿನ ಪವಿತ್ರ ಸ್ಥಳಗಳನ್ನು ಸಂದರ್ಶಿಸುವುದಾಗಿದೆ. ನಮ್ಮ ಪ್ರವಾದಿ ಮುಹಮ್ಮದ್(ಸ ) ರು ಮತ್ತು ಮುಂಚಿನ ಇತರೆ ಸಂದೇಶವಾಹಕರು ಹಜ್ಜ್ ಯಾತ್ರೆ ನಿರ್ವಹಿಸಿದ್ದಾರೆ. ಅಲ್ಲಾಹು ಇಬ್ರಾಹೀಮರಿಗೆ ಜನರಲ್ಲಿ ಹಜ್ಜ್ ಯಾತ್ರೆಗೆ ಕರೆ ನೀಡಲು ಆದೇಶಿಸಿದ್ದನು. ಸರ್ವಶಕ್ತವಾದ ಅಲ್ಲಾಹು ಪವಿತ್ರ ಕುರ್ಆನ್ನಲ್ಲಿ ಹೇಳುತ್ತಾನೆ: "(ನಾವು ಅವರೊಂದಿಗೆ ಹೇಳಿದೆವು): ಹಜ್ಜಿನ ಬಗ್ಗೆ ತಾವು ಜನರಿಗೆ ಘೋಷಣೆ ಮಾಡಿರಿ. ಅವರು ಪಾದಚಾರಿಗಳಾಗಿಯೂ, ವಿದೂರವಾದ ಎಲ್ಲ ಪರ್ವತ ಕಣಿವೆಗಳ ಮೂಲಕವೂ, ಎಲ್ಲ ವಿಧದ ಸಣಕಲು ಒಂಟೆಗಳ ಮೇಲೇರಿಯೂ ತಮ್ಮ ಬಳಿಗೆ ಬರುವರು." [ಅಲ್-ಹಜ್ಜ್:27]
ಪ್ರವಾದಿ ಮುಹಮ್ಮದ್(ಸ) ರೊಡನೆ ಈಮಾನಿನ ಕುರಿತು ಕೇಳಲಾಯಿತು. ಅದಕ್ಕೆ ಅವರು ಹೀಗೆ ಉತ್ತರಿಸಿದರು: ಅಲ್ಲಾಹನಲ್ಲಿ, ಅವನ ಮಲಕ್ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಪ್ರವಾದಿಗಳಲ್ಲಿ, ಅಂತ್ಯ ದಿನದಲ್ಲಿ ಮತ್ತು ವಿಧಿಯಲ್ಲಿ – ಅದರ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿರಿಸುವುದು. ವಿಶ್ವಾಸದ ಸ್ತಂಭಗಳು ಪ್ರತಿಯೊಬ್ಬ ಮುಸ್ಲಿಮನಿಗೂ ಕಡ್ಡಾಯವಾಗಿರುವ ಹೃದಯಕ್ಕೆ ಸಂಬಂಧಿಸಿದ ಆರಾಧನಾ ಕಾರ್ಯಗಳಾಗಿವೆ. ಇವುಗಳ ಮೇಲೆ ವಿಶ್ವಾಸವಿಡದಿದ್ದರೆ ಯಾವುದೇ ವ್ಯಕ್ತಿಯ ಇಸ್ಲಾಂ ಸಿಂಧುವಾಗುವುದಿಲ್ಲ. ಆದ್ದರಿಂದಲೇ ಇವುಗಳನ್ನು ವಿಶ್ವಾಸದ ಸ್ತಂಭಗಳು ಎಂದು ಕರೆಯಲಾಗಿದೆ. ಇಸ್ಲಾಮಿನ ಸ್ತಂಭಗಳು ಮತ್ತು ಈಮಾನಿನ ಸ್ತಂಭಗಳ ನಡುವಿನ ವ್ಯತ್ಯಾಸವೆಂದರೆ: ಇಸ್ಲಾಮಿನ ಸ್ತಂಭಗಳು ಗೋಚರ ಕ್ರಿಯೆಗಳಾಗಿದ್ದು, ಮನುಷ್ಯನು ಅವುಗಳನ್ನು ತನ್ನ ಅಂಗಾಂಗಗಳ ಮೂಲಕ ನಿರ್ವಹಿಸುತ್ತಾನೆ. ಉದಾಹರಣೆಗೆ ಎರಡು ಸತ್ಯಸಾಕ್ಷ್ಯಗಳನ್ನು ಉಚ್ಚರಿಸುವುದು, ನಮಾಜ್ ನಿರ್ವಹಿಸುವುದು, ಝಕಾತ್ ಕೊಡುವುದು ಇತ್ಯಾದಿ. ಈಮಾನಿನ ಸ್ತಂಭಗಳು ಹೃದಯಕ್ಕೆ ಸಂಬಂಧಿಸಿದ ಕ್ರಿಯೆಗಳಾಗಿದ್ದು, ವ್ಯಕ್ತಿಯು ತನ್ನ ಹೃದಯದಿಂದ ಅವುಗಳನ್ನು ನಿರ್ವಹಿಸುತ್ತಾನೆ. ಉದಾಹರಣೆಗೆ: ಅಲ್ಲಾಹನಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿರಿಸುವುದು.
ಈಮಾನಿನ ಪರಿಕಲ್ಪನೆ ಮತ್ತು ಅದರ ಅರ್ಥ: ಇದು ಅಲ್ಲಾಹನಲ್ಲಿ, ಅವನ ದೇವಚರರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಬರಹದಲ್ಲಿ (ಪೂರ್ವನಿರ್ಧಾರ) - ಅದರ ಒಳಿತು ಮತ್ತು ಕೆಡುಕಿನಲ್ಲಿ - ಹೃದಯದ ಮೂಲಕ ದೃಢವಾಗಿ ವಿಶ್ವಾಸವಿರಿಸುವುದು ಮತ್ತು ಸಂದೇಶವಾಹಕರು(ಸ) ತಂದ ಎಲ್ಲವನ್ನೂ ಅನುಸರಿಸುವುದು ಹಾಗೂ (ನಾಲಿಗೆ ಹಾಗೂ ಬಾಹ್ಯ ಹಾಗೂ ಆಂತರಿಕ ಅಂಗಾಂಗಗಳ ಮೂಲಕ) ಜೀವನದಲ್ಲಿ ಅಳವಡಿಸುವುದು. ನಾಲಿಗೆಯ ಮೂಲಕ ಅಳವಡಿಸುವುದು ಹೇಗೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಎಂದು ಹೇಳುವುದು, ಕುರ್ಆನ್ ಪಠಿಸುವುದು, ತಸ್ಬೀಹ್ ಮತ್ತು ತಹ್ಲೀಲ್ ಹೇಳುವುದು, ಅಲ್ಲಾಹನನ್ನು ಸ್ತುತಿಸುವುದು ಇತ್ಯಾದಿ.
ಬಾಹ್ಯ ಅಂಗಾಂಗಗಳ ಮೂಲಕ ಅಳವಡಿಸುವುದು ಹೇಗೆಂದರೆ, ನಮಾಜ್, ಹಜ್ಜ್, ಉಪವಾಸ ಮುಂತಾದವುಗಳನ್ನು ನಿರ್ವಹಿಸುವುದು. ಹೃದಯಕ್ಕೆ ಸಂಬಂಧಿಸಿದ ಆಂತರಿಕ ಅಂಗಾಂಗಗಳ ಮೂಲಕ ಅಳವಡಿಸುವುದು ಹೇಗೆಂದರೆ, ಅಲ್ಲಾಹನನ್ನು ಪ್ರೀತಿಸುವುದು, ಅವನನ್ನು ಭಯಪಡುವುದು, ಅವನ ಮೇಲೆ ಭರವಸೆಯಿಡುವುದು ಮತ್ತು ಅವನಿಗೆ ನಿಷ್ಕಳಂಕವಾಗಿ ವರ್ತಿಸುವುದು.
ಈಮಾನನ್ನು ತಜ್ಞವಿದ್ವಾಂಸರು ಸಂಕ್ಷಿಪ್ತವಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ: ಈಮಾನ್ ಎಂದರೆ ಹೃದಯದಿಂದ ವಿಶ್ವಾಸವಿರಿಸುವುದು, ನಾಲಿಗೆಯಿಂದ ಉಚ್ಛರಿಸುವುದು ಮತ್ತು ಅಂಗಾಂಗಗಳಿಂದ ಕರ್ಮವೆಸಗುವುದು. ವಿಧೇಯತೆಯ ಕರ್ಮಗಳನ್ನು ಮಾಡುವುದರಿಂದ ಈಮಾನ್ ಹೆಚ್ಚಾಗುತ್ತದೆ ಮತ್ತು ಅವಿಧೇಯತೆಯ (ಪಾಪ) ಕರ್ಮಗಳನ್ನು ಮಾಡುವುದರಿಂದ ಈಮಾನ್ ಕಡಿಮೆಯಾಗುತ್ತದೆ.
ಮೊದಲನೆಯ ಸ್ತಂಭ: ಅಲ್ಲಾಹನಲ್ಲಿ ವಿಶ್ವಾಸವಿಡುವುದು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಸತ್ಯವಿಶ್ವಾಸಿಗಳೆಂದರೆ ಅವರು ಅಲ್ಲಾಹನಲ್ಲಿ ವಿಶ್ವಾಸವಿಟ್ಟವರು." [ಅನ್ನೂರ್:62].
ಅಲ್ಲಾಹನಲ್ಲಿ ವಿಶ್ವಾಸವಿಡಬೇಕಾದರೆ ಅವನ ಪ್ರಭುತ್ವದಲ್ಲಿ, ಆರಾಧನಾರ್ಹತೆಯಲ್ಲಿ ಮತ್ತು ಆತನ ಹೆಸರುಗಳಲ್ಲಿ ಹಾಗೂ ಗುಣಲಕ್ಷಣಗಳಲ್ಲಿ ಅವನನ್ನು ಏಕೈಕಗೊಳಿಸಬೇಕಾಗುತ್ತದೆ. ಅದು ಈ ಕೆಳಗಿನವುಗಳನ್ನು ಒಳಗೊಂಡಿದೆ:
- ಸರ್ವಶಕ್ತನಾದ ಅಲ್ಲಾಹನ ಅಸ್ತಿತ್ವದಲ್ಲಿ ವಿಶ್ವಾಸವಿಡುವುದು.
ಅವನ ಪ್ರಭುತ್ವದಲ್ಲಿ ವಿಶ್ವಾಸವಿರಿಸುವುದು, ಅಂದರೆ ಅವನು ಎಲ್ಲದರ ಮಾಲೀಕ, ಸೃಷ್ಟಿಕರ್ತ, ಒದಗಿಸುವವ ಮತ್ತು ನಿಯಂತ್ರಕ ಎಂದು ವಿಶ್ವಾಸವಿರಿಸುವುದು.
ಅವನ ಆರಾಧನಾರ್ಹತೆಯಲ್ಲಿ ವಿಶ್ವಾಸವಿರಿಸುವುದು, ಅಂದರೆ ಅವನೊಬ್ಬನೇ ಆರಾಧನೆಗೆ ಅರ್ಹನಾಗಿದ್ದಾನೆ ಮತ್ತು ಅದರಲ್ಲಿ ಅವನಿಗೆ ಯಾರು ಪಾಲುದಾರರಿಲ್ಲ ಎಂದು ವಿಶ್ವಾಸವಿರಿಸುವುದು. ಉದಾಹರಣೆಗೆ ನಮಾಜ್, ಪ್ರಾರ್ಥನೆ, ಪ್ರಮಾಣ, ವಧೆ, ಸಹಾಯ ಯಾಚಿಸುವುದು, ಆಶ್ರಯವನ್ನು ಹುಡುಕುವುದು ಮತ್ತು ಇತರ ಎಲ್ಲಾ ಆರಾಧನಾ ಕರ್ಮಗಳನ್ನು ಅವನಿಗೆ ಮಾತ್ರ ಅರ್ಪಿಸುವುದು.
ಅಲ್ಲಾಹು ತನಗಾಗಿ ಅಥವಾ ಅವನ ಪ್ರವಾದಿಯು(ಸ) ಅವನಿಗೆ ದೃಢೀಕರಿಸಿದ ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳಲ್ಲಿ ಮತ್ತು ಅವನ ಉನ್ನತ ಗುಣಲಕ್ಷಣಗಳಲ್ಲಿ ವಿಶ್ವಾಸವಿರಿಸುವುದು. ಅದೇ ರೀತಿ ಅವನು ತನ್ನ ಬಗ್ಗೆ ಅಥವಾ ಅವನ ಪ್ರವಾದಿಯು(ಸ) ಅವನ ಬಗ್ಗೆ ನಿರಾಕರಿಸಿದ ಹೆಸರುಗಳು ಮತ್ತು ಗುಣಲಕ್ಷಣಗಳನ್ನು ನಿರಾಕರಿಸುವುದು. ಅದೇ ರೀತಿ ಅವನ ಹೆಸರುಗಳು ಮತ್ತು ಗುಣಲಕ್ಷಣಗಳು ಪರಿಪೂರ್ಣತೆ ಮತ್ತು ಸೌಂದರ್ಯದಲ್ಲಿ ಉತ್ಕೃಷ್ಟತೆಯನ್ನು ತಲುಪಿವೆ, ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ ಮತ್ತು ಅವನು ಎಲ್ಲವನ್ನೂ ಆಲಿಸುವವನು ಮತ್ತು ಎಲ್ಲವನ್ನೂ ನೋಡುವವನಾಗಿದ್ದಾನೆ ಎಂದು ವಿಶ್ವಾಸವಿರಿಸುವುದು.
ಎರಡನೇ ಸ್ತಂಭ: ದೇವಚರರಲ್ಲಿ ವಿಶ್ವಾಸವಿಡುವುದು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿರುವ ಮತ್ತು ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳುಳ್ಳ ದೇವಚರರನ್ನು ದೂತರನ್ನಾಗಿ ಕಳುಹಿಸಿರುವ ಅಲ್ಲಾಹನಿಗೆ ಸ್ತುತಿ. ಸೃಷ್ಟಿಯಲ್ಲಿ ಅವನಿಚ್ಛಿಸುವುದನ್ನು ಅವನು ಅಧಿಕಗೊಳಿಸುವನು. ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು." [ಫಾತಿರ್:1].
ದೇವಚರರು ಅಗೋಚರ ಜೀವಿಗಳು, ಅವರು ಅಲ್ಲಾಹನ ದಾಸರಾಗಿದ್ದರು ಅವನು ಅವರನ್ನು ಪ್ರಕಾಶದಿಂದ ಸೃಷ್ಟಿಸಿದ್ದಾನೆ ಮತ್ತು ಅವರನ್ನು ಆತನಿಗೆ ವಿಧೇಯರನ್ನಾಗಿ ಮಾಡಲಾಗಿದೆ ಎಂದು ನಾನು ವಿಶ್ವಾಸವಿರಿಸುತ್ತೇವೆ.
ಅವರು ಮಹಾ ಸೃಷ್ಟಿಗಳಾಗಿದ್ದು ಅವರ ಶಕ್ತಿಯನ್ನು ಮತ್ತು ಸಂಖ್ಯೆಯನ್ನು ಅಲ್ಲಾಹನ ಹೊರತು ಇತರ ಯಾರಿಗೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರಲ್ಲಿ ಎಲ್ಲರಿಗೂ ಅವರದ್ದೇ ಆದ ಹೆಸರುಗಳು, ಗುಣಗಳು ಮತ್ತು ಕರ್ತವ್ಯಗಳಿವೆ. ಅವರಲ್ಲೊಬ್ಬರು ಜಿಬ್ರೀಲ್(ಅ). ದಿವ್ಯವಾಣಿಯನ್ನು ತಲುಪಿಸಿಕೊಡುವ ಹೊಣೆಯನ್ನು ಅವರಿಗೆ ವಹಿಸಿಕೊಡಲಾಗಿದೆ. ಅವರು ದಿವ್ಯವಾಣಿಯನ್ನು ಅಲ್ಲಾಹನಿಂದ ಅವನ ಸಂದೇಶವಾಹಕರಿಗೆ ತಲುಪಿಸುತ್ತಾರೆ.
ಮೂರನೆಯ ಸ್ತಂಭ: ಗ್ರಂಥಗಳಲ್ಲಿ ವಿಶ್ವಾಸವಿಡುವುದು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಹೇಳಿರಿ: ಅಲ್ಲಾಹನಲ್ಲಿ, ಅವನ ವತಿಯಿಂದ ನಮಗೆ ಅವತೀರ್ಣಗೊಂಡಿರುವುದರಲ್ಲಿ, ಇಬ್ರಾಹೀಮ್ರಿಗೆ, ಇಸ್ಮಾಈಲ್ರಿಗೆ, ಇಸ್ಹಾಕ್ರಿಗೆ, ಯಅ್ಕೂಬ್ರಿಗೆ ಮತ್ತು ಯಅ್ಕೂಬ್ರ ಸಂತತಿಗೆ ಅವತೀರ್ಣಗೊಂಡಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಸರ್ವ ಪ್ರವಾದಿಗಳಿಗೆ ಅವರ ಪ್ರಭುವಿನಿಂದ ನೀಡಲಾಗಿರುವುದರಲ್ಲಿ (ಸಂದೇಶದಲ್ಲಿ) ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ಮಧ್ಯೆಯೂ ನಾವು ತಾರತಮ್ಯ ಮಾಡಲಾರೆವು. ನಾವು ಅವನಿಗೆ (ಅಲ್ಲಾಹನಿಗೆ) ಸಂಪೂರ್ಣ ಶರಣಾದವರಾಗಿರುವೆವು." [ಅಲ್-ಬಕರ:136]
ಆಕಾಶದಿಂದ ಅವತೀರ್ಣಗೊಂಡ ಗ್ರಂಥಗಳೆಲ್ಲವೂ ಅಲ್ಲಾಹನ ವಚನಗಳಾಗಿವೆ ಎಂಬ ದೃಢವಾಗಿ ವಿಶ್ವಾಸವಿರಿಸುವುದು.
ಅವೆಲ್ಲವೂ ಸರ್ವಶಕ್ತನಾದ ಅಲ್ಲಾಹನಿಂದ ಅವನ ಸಂದೇಶವಾಹಕರ ಮೂಲಕ ಅವನ ದಾಸರಿಗೆ ಸ್ಪಷ್ಟವಾದ ಸತ್ಯದೊಂದಿಗೆ ಅವತೀರ್ಣವಾಗಿವೆ ಎಂದು ವಿಶ್ವಾಸವಿರಿಸುವುದು.
ಸರ್ವಶಕ್ತನಾದ ಅಲ್ಲಾಹು, ತನ್ನ ಪ್ರವಾದಿ ಮುಹಮ್ಮದ್(ಸ) ರನ್ನು ಸರ್ವ ಮಾನವಕುಲಕ್ಕೆ ಕಳುಹಿಸಿ, ಅವರ ಧರ್ಮಶಾಸ್ತ್ರದ ಮೂಲಕ ಹಿಂದಿನ ಎಲ್ಲಾ ಧರ್ಮಶಾಸ್ತ್ರಗಳನ್ನು ರದ್ದುಗೊಳಿಸಿದನು, ದಿವ್ಯ ಕುರ್ಆನನ್ನು ಆಕಾಶದಿಂದ ಅವತೀರ್ಣಗೊಂಡ ಇತರ ಎಲ್ಲಾ ಗ್ರಂಥಗಳ ಮೇಲ್ವಿಚಾರಕ ಮತ್ತು ಅವುಗಳನ್ನು ರದ್ದುಗೊಳಿಸುವ ಗ್ರಂಥವಾಗಿ ಮಾಡಿದನು ಹಾಗೂ ದಿವ್ಯ ಕುರ್ಆನನ್ನು ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗೆ ಒಳಗಾಗದಂತೆ ಸಂರಕ್ಷಿಸುವ ಹೊಣೆಯನ್ನು ಅಲ್ಲಾಹನು ವಹಿಸಿಕೊಂಡಿರುವನು ಎಂದು ವಿಶ್ವಾಸವಿರಿಸುವುದು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಖಂಡಿತವಾಗಿಯೂ ಈ ಉಪದೇಶವನ್ನು ಅವತೀರ್ಣಗೊಳಿಸಿದವರು ನಾವಾಗಿರುವೆವು. ಖಂಡಿತವಾಗಿಯೂ ಅದನ್ನು ನಾವು ಸಂರಕ್ಷಿಸುವೆವು." [ಅಲ್-ಹಿಜ್ರ್:9] ಏಕೆಂದರೆ ದಿವ್ಯ ಕುರ್ಆನ್ ಮಾನವಕುಲಕ್ಕೆ ಕಳುಹಿಸಲಾದ ಸರ್ವಶಕ್ತ ಅಲ್ಲಾಹನ ಕೊನೆಯ ಗ್ರಂಥವಾಗಿದೆ. ಅದೇ ರೀತಿ ಅವನ ಪ್ರವಾದಿ ಮುಹಮ್ಮದ್(ಸ) ಸಂದೇಶವಾಹಕರಲ್ಲಿ ಕೊನೆಯವರಾಗಿದ್ದಾರೆ. ಇಸ್ಲಾಂ ಧರ್ಮವು ಅಲ್ಲಾಹು ಅಂತಿಮ ದಿನದವರೆಗೆ ಮಾನವಕುಲಕ್ಕೆ ಮೆಚ್ಚಿ ಅಂಗೀಕರಿಸಿದ ಧರ್ಮವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹನ ಬಳಿ ಧರ್ಮವೆಂದರೆ ಇಸ್ಲಾಮ್ ಮಾತ್ರವಾಗಿದೆ." [ಆಲು ಇಮ್ರಾನ್:19]
ಸರ್ವಶಕ್ತನಾದ ಅಲ್ಲಾಹು ತನ್ನ ಗ್ರಂಥದಲ್ಲಿ ಉಲ್ಲೇಖಿಸಿರುವ ದೈವಿಕ ಗ್ರಂಥಗಳು ಹೀಗಿವೆ:
ದಿವ್ಯ ಕುರ್ಆನ್: ಇದು ಅಲ್ಲಾಹು ತನ್ನ ಪ್ರವಾದಿ ಮುಹಮ್ಮದ್(ಸ) ರಿಗೆ ಅವತೀರ್ಣಗೊಳಿಸಿದ ಗ್ರಂಥ.
ತೌರಾತ್: ಇದು ಅಲ್ಲಾಹು ಪ್ರವಾದಿ ಮೂಸಾ(ಅ) ರಿಗೆ ಅವತೀರ್ಣಗೊಳಿಸಿದ ಗ್ರಂಥ.
ಇಂಜೀಲ್: ಇದು ಅಲ್ಲಾಹು ಪ್ರವಾದಿ ಈಸಾ(ಅ) ರಿಗೆ ಅವತೀರ್ಣಗೊಳಿಸಿದ ಗ್ರಂಥ.
ಜಬೂರ್: ಇದು ಅಲ್ಲಾಹು ಪ್ರವಾದಿ ದಾವೂದ್(ಅ) ರಿಗೆ ಅವತೀರ್ಣಗೊಳಿಸಿದ ಗ್ರಂಥ.
ಇಬ್ರಾಹೀಮರ ಧರ್ಮಕೃತಿಗಳು: ಇದು ಅಲ್ಲಾಹು ಪ್ರವಾದಿ ಇಬ್ರಾಹೀಂ(ಅ) ರಿಗೆ ಅವತೀರ್ಣಗೊಳಿಸಿದ ಗ್ರಂಥಗಳು.
ನಾಲ್ಕನೇ ಸ್ತಂಭ: ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತನ್ನು ವರ್ಜಿಸಿರಿ' (ಎಂದು ಬೋಧಿಸುವ ಸಲುವಾಗಿ) ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯಕ್ಕೂ ಸಂದೇಶವಾಹಕರನ್ನು ಕಳುಹಿಸಿರುವೆವು." [ಅನ್ನಹ್ಲ್:36].
ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು ಎಂದರೆ ಏಕೈಕನೂ ಸಹಭಾಗಿಯಿಲ್ಲದವನೂ ಆದ ಅಲ್ಲಾಹನನ್ನು ಮಾತ್ರ ಆರಾಧಿಸಬೇಕು, ಅವನ ಹೊರತಾಗಿ ಆರಾಧಿಸಲಾಗುವುದೆಲ್ಲವನ್ನೂ ನಿಷೇಧಿಸಬೇಕು ಎಂಬ ಸಂದೇಶದೊಂದಿಗೆ ಸರ್ವಶಕ್ತನಾದ ಅಲ್ಲಾಹು ಪ್ರತಿಯೊಂದು ಸಮೂದಾಯಕ್ಕೂ ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದಾನೆ ಎಂದು ದೃಢವಾಗಿ ವಿಶ್ವಾಸವಿರಿಸುವುದು.
ಅವರೆಲ್ಲರೂ ಮನುಷ್ಯರು, ಪುರುಷರು, ಅಲ್ಲಾಹನ ದಾಸರು ಎಂದು ವಿಶ್ವಾಸವಿರಿಸುವುದು. ಅವರು ಸತ್ಯವಂತರು, ವಿಶ್ವಾಸಯೋಗ್ಯರು, ಧರ್ಮನಿಷ್ಠರು, ಪ್ರಾಮಾಣಿಕರು, ಮಾರ್ಗದರ್ಶನ ಮಾಡುವವರು ಮತ್ತು ಸನ್ಮಾರ್ಗದಲ್ಲಿರುವವರು, ಅವರ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವ ಪವಾಡಗಳೊಂದಿಗೆ ಅಲ್ಲಾಹು ಅವರನ್ನು ಬೆಂಬಲಿಸಿದ್ದಾನೆ ಎಂದು ವಿಶ್ವಾಸವಿರಿಸುವುದು. ಅಲ್ಲಾಹು ತಲುಪಿಸಬೇಕೆಂದು ಹೇಳಿದ ಎಲ್ಲವನ್ನೂ ಅವರು ತಲುಪಿಸಿದ್ದಾರೆ ಎಂದು ವಿಶ್ವಾಸವಿರಿಸುವುದು. ಅವರೆಲ್ಲರೂ ಸ್ಪಷ್ಟವಾದ ಸತ್ಯದಲ್ಲಿ ಮತ್ತು ಸರಿಯಾದ ಮಾರ್ಗದರ್ಶನದಲ್ಲಿದ್ದರು ಎಂದು ವಿಶ್ವಾಸವಿರಿಸುವುದು.
ಅವರಲ್ಲಿ ಮೊದಲನೆಯವರಿಂದ ತೊಡಗಿ ಕೊನೆಯವರ ತನಕ ಎಲ್ಲರೂ ಧರ್ಮದ ಮೂಲಭೂತ ತತ್ವಗಳ ಬಗ್ಗೆ ಬೋಧಿಸಿದರು. ಅಂದರೆ ಆರಾಧನೆಯಲ್ಲಿ ಅಲ್ಲಾಹನನ್ನು ಏಕೈಕಗೊಳಿಸುವುದು ಮತ್ತು ಅವನೊಂದಿಗೆ ಅನ್ಯರನ್ನು ಸಹಭಾಗಿಗಳನ್ನಾಗಿ ಮಾಡದಿರುವುದು.
ಐದನೇ ಸ್ತಂಭ: ಅಂತ್ಯದಿನದಲ್ಲಿ ವಿಶ್ವಾಸವಿಡುವುದು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಲ್ಲಾಹು, ಅವನ ಹೊರತು ಅನ್ಯ ಆರಾಧ್ಯರಿಲ್ಲ. ಖಂಡಿತವಾಗಿಯೂ ಅವನು ನಿಮ್ಮೆಲ್ಲರನ್ನೂ ಪುನರುತ್ಥಾನ ದಿನದೆಡೆಗೆ ಒಟ್ಟುಗೂಡಿಸುವನು. ಅದರಲ್ಲಿ ಸಂದೇಹವೇ ಇಲ್ಲ. ಅಲ್ಲಾಹನಿಗಿಂತಲೂ ಸತ್ಯಸಂಧವಾಗಿ ಮಾಹಿತಿ ನೀಡುವವನು ಇನ್ನಾರಿರುವನು?" [ಅನ್ನಿಸಾ:87]
ಅಂತ್ಯದಿನದಲ್ಲಿ ವಿಶ್ವಾಸವಿರಿಸುವುದು ಎಂದರೆ ಆ ದಿನಕ್ಕೆ ಸಂಬಂಧಿಸಿ ಅಲ್ಲಾಹು ತನ್ನ ದಿವ್ಯಗ್ರಂಥದಲ್ಲಿ ಮತ್ತು ನಮ್ಮ ಪ್ರವಾದಿ ಮುಹಮ್ಮದ್(ಸ) (ಅವರ ಸುನ್ನತ್ತಿನಲ್ಲಿ) ತಿಳಿಸಿದ ಎಲ್ಲದರಲ್ಲೂ ದೃಢವಾಗಿ ವಿಶ್ವಾಸವಿರಿಸುವುದು. ಅಂದರೆ ಮನುಷ್ಯನ ಮರಣ, ಪುನರುತ್ಥಾನ, ಶಿಫಾರಸ್ಸು, ತಕ್ಕಡಿಯ ಸ್ಥಾಪನೆ, ವಿಚಾರಣೆ, ಸ್ವರ್ಗ, ನರಕ ಮುಂತಾದ ಅಂತ್ಯದಿನಕ್ಕೆ ಸಂಬಂಧಿಸಿದ ಎಲ್ಲದರಲ್ಲೂ ದೃಢವಾಗಿ ವಿಶ್ವಾಸವಿರಿಸುವುದು.
ಆರನೇ ಸ್ತಂಭ: ವಿಧಿಬರಹದಲ್ಲಿ - ಅದರ ಒಳಿತು ಮತ್ತು ಕೆಡುಕಿನಲ್ಲಿ - ವಿಶ್ವಾಸವಿಡುವುದು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಪ್ರತಿಯೊಂದು ವಸ್ತುವನ್ನು ನಾವು ಒಂದು ನಿರ್ಣಯದ ಪ್ರಕಾರ ಸೃಷ್ಟಿಸಿರುವೆವು." [ಅಲ್-ಕಮರ್:49]
ಇಹಲೋಕದಲ್ಲಿ ಸೃಷ್ಟಿಗಳಿಗೆ ಸಂಭವಿಸುವ ಎಲ್ಲ ಸಂಗತಿಗಳು ಅಲ್ಲಾಹನ ಜ್ಞಾನ ಮತ್ತು ವಿಧಿಯಿಂದಲೇ ಆಗಿದೆ, ಅವನೇ ಅವೆಲ್ಲವನ್ನೂ ನಿಯಂತ್ರಿಸುವವನು, ಅವನು ಏಕೈಕನಾಗಿದ್ದು ಅವನಿಗೆ ಯಾವುದೇ ಸಹಭಾಗಿಗಳಲ್ಲಿಲ್ಲ ಎಂದು ವಿಶ್ವಾಸವಿಡುವುದು. ಆದೇ ರೀತಿ ಈ ವಿಧಿಯನ್ನು ಮನುಷ್ಯನ ಸೃಷ್ಟಿಗೆ ಮುಂಚೆಯೇ ಬರೆಯಲಾಗಿದೆ, ಮನುಷ್ಯನಿಗೆ ಇಚ್ಛೆ ಮತ್ತು ಸ್ವಾತಂತ್ರ್ಯವಿದೆ, ಅವನು ವಾಸ್ತವ ಸ್ಥಿತಿಯಲ್ಲೇ ಕರ್ಮವೆಸಗುತ್ತಿದ್ದಾನೆ, ಆದರೆ ಅವೆಲ್ಲವೂ ಅಲ್ಲಾಹನ ಜ್ಞಾನ, ಇಚ್ಛೆ ಮತ್ತು ಚಿತ್ತದಿಂದ ಹೊರತಾಗುವುಗಿಲ್ಲ ಎಂದು ವಿಶ್ವಾಸವಿಡುವುದು.
ವಿಧಿಬರಹದಲ್ಲಿರುವ ವಿಶ್ವಾಸವು ನಾಲ್ಕು ಹಂತಗಳನ್ನು ಆಧರಿಸಿದೆ:
ಮೊದಲನೆಯದು: ಅಲ್ಲಾಹನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ ಎಂದು ವಿಶ್ವಾಸವಿರಿಸುವುದು.
ಎರಡನೆಯದು: ಪುನರುತ್ಥಾನದ ದಿನದವರೆಗೆ ಸಂಭವಿಸುವ ಎಲ್ಲದರ ಬಗ್ಗೆ ಅಲ್ಲಾಹನು ಲಿಖಿತಗೊಳಿಸಿದ್ದಾನೆ ಎಂದು ವಿಶ್ವಾಸವಿರಿಸುವುದು.
ಮೂರನೆಯದು: ಅಲ್ಲಾಹನ ಜಾರಿಗೊಳ್ಳುವ ಇಚ್ಛೆ ಮತ್ತು ಆತನ ಸಂಪೂರ್ಣ ಶಕ್ತಿಯಲ್ಲಿ ವಿಶ್ವಾಸವಿರಿಸುವುದು. ಅವನು ಬಯಸಿದ್ದು ಸಂಭವಿಸುತ್ತದೆ, ಮತ್ತು ಅವನು ಬಯಸದಿರುವುದು ಸಂಭವಿಸುವುದಿಲ್ಲ ಎಂದು ವಿಶ್ವಾಸವಿರಿಸುವುದು.
ನಾಲ್ಕನೆಯದು: ಅಲ್ಲಾಹು ಎಲ್ಲಾ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ ಮತ್ತು ಸೃಷ್ಟಿಸುವುದರಲ್ಲಿ ಅವನಿಗೆ ಯಾವ ಪಾಲುದಾರರಿಲ್ಲ ಎಂಬ ವಿಶ್ವಾಸವಿರಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹು ಪಶ್ಚಾತ್ತಾಪಪಟ್ಟು ಮರಳುವವರನ್ನು ಪ್ರೀತಿಸುವನು ಮತ್ತು ಶುಚಿತ್ವ ಪಾಲಿಸುವವರನ್ನೂ ಪ್ರೀತಿಸುವನು." [ಅಲ್-ಬಖರ:22]. ಪ್ರವಾದಿ(ಸ) ರವರು ಹೇಳಿದರು: ನಾನು ವುಝು ಮಾಡಿದಂತೆ ವುಝು ಮಾಡಿರಿ. ನಮಾಜಿನ ಮಹತ್ವಗಳಲ್ಲಿ ಒಂದು ಏನೆಂದರೆ, ಅಲ್ಲಾಹು ನಮಾಝ್ ನಿರ್ವಹಿಸುವ ಮೊದಲು ಶುದ್ಧೀಕರಣ ಮಾಡಲು ಆದೇಶಿಸಿದ್ದಾನೆ. ಅದನ್ನು ನಮಾಜಿನ ಸಿಂಧುತ್ವಕ್ಕೆ ಒಂದು ಷರತ್ತನ್ನಾಗಿ ಮಾಡಿದ್ದಾನೆ. ಶುದ್ಧೀಕರಣವು ನಮಾಜಿನ ಕೀಲಿಯಾಗಿದೆ. ಅದರ ಶ್ರೇಷ್ಠತೆಯನ್ನು ಗ್ರಹಿಸುವುದರಿಂದ ಹೃದಯವು ಪ್ರಾರ್ಥನೆಯನ್ನು ಮಾಡಲು ಹಂಬಲಿಸುತ್ತದೆ. ಪ್ರವಾದಿ(ಸ) ರವರು ಹೇಳಿದರು: "ಶುದ್ಧೀಕರಣ (ವುಝು) ಸತ್ಯವಿಶ್ವಾಸದ ಅರ್ಧಂಶವಾಗಿದೆ... ನಮಾಜ್ ಪ್ರಕಾಶವಾಗಿದೆ." ಪ್ರವಾದಿ(ಸ) ರವರು ಹೇಳಿದರು: "ಯಾರು ಚೆನ್ನಾಗಿ ವುಝು ಮಾಡುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಹೋಗುತ್ತವೆ."
ಆದ್ದರಿಂದ ದಾಸನು ವುಝು ಮಾಡುವ ಮೂಲಕ ದೈಹಿಕ ಶುದ್ಧಿಯೊಂದಿಗೆ ಮತ್ತು ಆರಾಧನೆ ಸಲ್ಲಿಸುವ ಮೂಲಕ ಆತ್ಮೀಯ ಶುದ್ಧಿಯೊಂದಿಗೆ, ಸಂಪೂರ್ಣ ನಿಷ್ಕಳಂಕತೆಯಿಂದ, ಪ್ರವಾದಿ(ಸ) ರವರ ಮಾರ್ಗದರ್ಶನದಂತೆ ಅಲ್ಲಾಹನ ಮುಂದೆ ನಿಲ್ಲುತ್ತಾನೆ.
ಈ ಕರ್ಮಗಳಿಗೆ ವುಝು ಕಡ್ಡಾಯವಾಗಿದೆ:
1- ಕಡ್ಡಾಯ ನಮಾಝ್ ನಫಿಲ್ ನಮಾಝ್.
2- ಕಾಬಾದ ಪ್ರದಕ್ಷಿಣೆ
3- ಪವಿತ್ರ ಕುರ್ಆನ್ ಅನ್ನು ಸ್ಪರ್ಶಿಸುವಾಗ.
ನಾನು ಶುದ್ಧ ನೀರಿನಿಂದ ವುಝು ಮತ್ತು ಸ್ನಾನ ಮಾಡುತ್ತೇನೆ:
ಶುದ್ಧ ನೀರು ಎಂದರೆ ಆಕಾಶದಿಂದ ಸುರಿಯುವ ಅಥವಾ ಭೂಮಿಯಿಂದ ಹೊರಬರುವ ಮೂಲ ರೂಪದಲ್ಲಿರುವ ನೀರು. (ಮೂಲರೂಪದಲ್ಲಿರಬೇಕು ಎಂದರೆ) ನೀರಿನ ಶುದ್ಧತೆಯನ್ನು ನಿವಾರಿಸುವ ವಸ್ತುಗಳಿಂದ ಅದರ ಬಣ್ಣ, ರುಚಿ ಮತ್ತು ಪರಿಮಳವೆಂಬ ಮೂರು ಗುಣಗಳಲ್ಲಿ ಯಾವುದೂ ಬದಲಾವಣೆಯಾಗಬಾರದು.
ನಾನು ವುಝು ಮಾಡುವುದನ್ನು ಕಲಿಯುತ್ತೇನೆ.
1. ನಿಯ್ಯತ್ (ಸಂಕಲ್ಪ) ಮಾಡುವುದು. ಅದರ ಸ್ಥಳವು ಹೃದಯವಾಗಿದೆ.ನಿಯ್ಯತ್ ಎಂದರೆ, ಸರ್ವಶಕ್ತನಾದ ಅಲ್ಲಾಹುವಿಗೆ ಹತ್ತಿರವಾಗಲು ಆರಾಧನೆಯನ್ನು ಮಾಡುತ್ತೇನೆಂದು ಹೃದಯದಲ್ಲಿ ನಿರ್ಧರಿಸುವುದು.
2. ಮುಂಗೈಗಳನ್ನು ತೊಳೆಯುವುದು.
3. ಬಾಯಿ ಮುಕ್ಕಳಿಸುವುದು.
ಬಾಯಿ ಮುಕ್ಕಳಿಸುವುದು ಎಂದರೆ, ಬಾಯಿಯಲ್ಲಿ ನೀರನ್ನು ಹಾಕಿ, ಚೆನ್ನಾಗಿ ಅಲುಗಾಡಿಸಿ ನಂತರ ಹೊರಕ್ಕೆ ಉಗುಳುವುದು.
4. ಮೂಗಿಗೆ ನೀರೆಳೆಯುವುದು
ಮೂಗಿನೊಳಗೆ ನೀರೆಳೆಯುವುದು ಎಂದರೆ, ಶ್ವಾಸದೊಂದಿಗೆ ನೀರನ್ನು ಮೂಗಿನ ತುತ್ತತುದಿಗೆ ಎಳೆಯುವುದು.
ಮೂಗಿನಿಂದ ನೀರನ್ನು ಹೊರಹಾಕುವುದು ಎಂದರೆ, ಮೂಗಿನ ಹೊರಳೆಗಳಲ್ಲಿರುವುದನ್ನು ಶ್ವಾಸದೊಂದಿಗೆ ಬಲವಾಗಿ ಹೊರಹಾಕುವುದು.
5. ಮುಖವನ್ನು ತೊಳೆಯುವುದು.
ಮುಖದ ವ್ಯಾಪ್ತಿ:
ಮುಖ ಎಂದರೆ ನಾವು ಮುಖಾಮುಖಿಯಾಗುವಾಗ ಕಾಣುವ ಭಾಗ.
ಅದರ ವ್ಯಾಪ್ತಿ ಅಗಲದಲ್ಲಿ : ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ.
ಅದರ ವ್ಯಾಪ್ತಿ ಉದ್ದದಲ್ಲಿ: ಹಣೆಯಲ್ಲಿ ಕೂದಲು ಬೆಳೆಯುವ ಸ್ಥಳದಿಂದ ಗಲ್ಲದ ತುದಿಯವರೆಗೆ.
ಮುಖದಲ್ಲಿರುವ ರೋಮಗಳು, ಬಯಾದ್ ಮತ್ತು ಇದಾರ್ ಎಲ್ಲವೂ ಮುಖವನ್ನು ತೊಳೆಯುವುದರಲ್ಲಿ ಒಳಪಡುತ್ತವೆ.
ಬಯಾದ್ ಎಂದರೆ: ಇಝಾರ್ ಮತ್ತು ಕಿವಿಯ ಹಾಳೆಗಳ ನಡುವಿನ ಸ್ಥಳ.
ಇಝಾರ್ ಎಂದರೆ: ಕಿವಿಯ ತೂತಿನಿಂದ ತಲೆಬುರುಡೆಯ ಒಳಭಾಗಕ್ಕೆ ಹೋಗಿ ಅದರಿಂದ ಗೂಟಕೆ ಇಳಿದ ಎಲುಬಿನ ಮೇಲಿರುವ ಕೂದಲು.
ಅದರಂತೆಯೇ, ಗಡ್ಡದಿಂದ ಗೋಚರಿಸುವ ಮತ್ತು ಮುಖದಿಂದ ಕೆಳಗೆ ಇಳಿದಿರುವ ಎಲ್ಲಾ ದಪ್ಪ ಕೂದಲುಗಳು ಕೂಡ ಮುಖವನ್ನು ತೊಳೆಯುವುದರಲ್ಲಿ ಒಳಪಡುತ್ತವೆ.
6. ಬೆರಳುಗಳ ತುದಿಯಿಂದ ಮೊಣಕೈಗಳವರೆಗೆ ಕೈಗಳನ್ನು ತೊಳೆಯುವುದು.
ಕೈಗಳಲ್ಲಿ ಕಡ್ಡಾಯವಾಗಿ ತೊಳೆಯಬೇಕಾದ ಭಾಗದಲ್ಲಿ ಮೊಣಕೈಗಳು ಕೂಡ ಒಳಪಡುತ್ತವೆ.
7. ಎರಡು ಕಿವಿಗಳ ಜೊತೆಗೆ ಸಂಪೂರ್ಣ ತಲೆಯನ್ನು ಒಂದು ಬಾರಿ ಸವರುವುದು.
ತಲೆಯ ಮುಂಭಾಗದಿಂದ ಪ್ರಾರಂಭಿಸಿ, ಕತ್ತಿನ ಹಿಂಭಾಗಕ್ಕೆ ತಲುಪಿ ಅಲ್ಲಿಂದ ಪುನಃ ಮುಂಭಾಗಕ್ಕೆ ತರುವುದು.
ತೋರುಬೆರಳುಗಳನ್ನು ಕಿವಿಗಳಲ್ಲಿ ತೂರಿಸುವುದು.
ಹೆಬ್ಬೆರಳುಗಳನ್ನು ಕಿವಿಗಳ ಹೊರಭಾಗದಲ್ಲಿಟ್ಟು,ಅವುಗಳಿಂದ ಕಿವಿಯ ಹೊರಭಾಗ ಮತ್ತು ಒಳಭಾಗವನ್ನು ಸವರುವುದು.
8. ಕಾಲುಗಳ ಬೆರಳುಗಳಿಂದ ತೊಡಗಿ ಹರಡುಗಂಟುಗಳ ತನಕ ಕಾಲುಗಳನ್ನು ತೊಳೆಯುವುದು. ಕಾಲುಗಳಲ್ಲಿ ಕಡ್ಡಾಯವಾಗಿ ತೊಳೆಯಬೇಕಾದ ಭಾಗಗಳಲ್ಲಿ ಹರಡುಗಂಟುಗಳು ಕೂಡ ಸೇರುತ್ತವೆ.
ಹರಡುಗಂಟುಗಳು ಎಂದರೆ ಕಣಕಾಲುಗಳ ಬುಡದಲ್ಲಿರುವ ಮೂಳೆಗಳು.
ಈ ಕೆಳಗಿನವುಗಳಿಂದ ವುಝು ಅಸಿಂಧುವಾಗುತ್ತದೆ:
1. ಮಲಮೂತ್ರದ ದ್ವಾರಗಳಿಂದ ಏನಾದರೂ ಹೊರಬರುವುದು: ಉದಾ: ಮೂತ್ರ, ಮಲ, ವಾಯು, ವೀರ್ಯ ಅಥವಾ ಬಿಳಿದ್ರವ.
2. ಪರಿಸರ ಪ್ರಜ್ಞೆಯಿಲ್ಲದಂತೆ ಗಾಢವಾಗಿ ನಿದ್ದೆ ಮಾಡುವುದು, ಮೂರ್ಛೆ ಹೋಗುವುದು, ಅಮಲು ಪದಾರ್ಥಗಳನ್ನು ಸೇವಿಸುವುದು ಅಥವಾ ಮತಿ ಕಳೆದುಕೊಳ್ಳುವುದು.
3. ಜನಾಬತ್ (ದೊಡ್ಡ ಅಶುದ್ಧಿ), ಋತುಸ್ರಾವ, ಹೆರಿಗೆ ರಕ್ತ ಮುಂತಾದ ಸ್ನಾನವನ್ನು ಕಡ್ಡಾಯಗೊಳಿಸುವ ವಿಷಯಗಳು ಉಂಟಾಗುವುದು.
ಒಬ್ಬ ವ್ಯಕ್ತಿಯು ಮಲಮೂತ್ರ ವಿಸರ್ಜನೆ ಮಾಡಿದರೆ, ಶುದ್ಧ ನೀರಿನಿಂದ ಆ ಹೊಲಸನ್ನು ಶುಚಿಗೊಳಿಸಬೇಕು. ನೀರಿನಿಂದ ಶುಚಿಗೊಳಿಸುವುದು ಅತ್ಯುತ್ತಮವಾಗಿದೆ. ಅಥವಾ ಹೊಲಸನ್ನು ಶುಚಿಗೊಳಿಸುವ ನೀರಲ್ಲದ ವಸ್ತುಗಳಿಂದ ಶುಚಿಗೊಳಿಸಬೇಕು. ಉದಾ: ಕಲ್ಲುಗಳು, ಟಿಶ್ಯೂ ಪೇಪರ್ಗಳು, ಬಟ್ಟೆ ತುಂಡುಗಳು ಇತ್ಯಾದಿ. ಅವುಗಳಿಂದ ಕನಿಷ್ಠ ಮೂರು ಸಲ ಶುಚಿಗೊಳಿಸಬೇಕು. ಹೊಲಸು ನಿವಾರಣೆಯಾಗದಿದ್ದರೆ ನಿವಾರಣೆಯಾಗುವ ತನಕ ಶುಚಿಗೊಳಿಸಬೇಕು.
ಪಾದರಕ್ಷೆಗಳು ಅಥವಾ ಕಾಲ್ಚೀಲಗಳನ್ನು ಧರಿಸಿರುವಾಗ, ಕಾಲುಗಳನ್ನು ತೊಳೆಯಲು ಅವುಗಳನ್ನು ಕಳಚಬೇಕಾಗಿಲ್ಲ. ಬದಲಾಗಿ ಅವುಗಳ ಮೇಲೆ ಸವರಿದರೆ ಸಾಕು. ಆದರೆ ಅದಕ್ಕೆ ಕೆಲವು ಷರತ್ತುಗಳಿವೆ:
1. ಚಿಕ್ಕ ಅಶುದ್ಧಿ ಮತ್ತು ದೊಡ್ಡ ಅಶುದ್ಧಿಯಿಂದ ಸಂಪೂರ್ಣ ಶುದ್ಧವಾದ ಮೇಲೆ, ಕಾಲುಗಳನ್ನು ಚೆನ್ನಾಗಿ ತೊಳೆದು ಅವುಗಳನ್ನು ಧರಿಸಿರಬೇಕು.
2. ಪಾದರಕ್ಷೆಗಳು ಅಥವಾ ಕಾಲ್ಚೀಲಗಳು ಕಲ್ಮಶಗಳಿಲ್ಲದೆ ಶುಚಿಯಾಗಿರಬೇಕು.
3. ನಿಗದಿತ ಅವಧಿಯೊಳಗೆ ಸವರಬೇಕು.
4. ಪಾದರಕ್ಷೆಗಳು ಅಥವಾ ಕಾಲ್ಚೀಲಗಳು ಧರ್ಮಸಮ್ಮತ ಮೂಲದ್ದಾಗಿರಬೇಕು. ಅಂದರೆ ಅವು ಕಳ್ಳತನ ಮಾಡಿದ್ದು ಅಥವಾ ಬಲವಂತದಿಂದ ವಶಪಡಿಸಿದ್ದು ಆಗಿರಬಾರದು.
ಪಾದರಕ್ಷೆಗಳು ಎಂದರೆ: ನಯವಾದ ಚರ್ಮ ಮುಂತಾದ ವಸ್ತುಗಳಿಂದ ತಯಾರಿಸಿದ ಕಾಲುಗಳಿಗೆ ಧರಿಸುವ ವಸ್ತು. ಅದೇ ರೀತಿ ಪಾದಗಳನ್ನು ಪೂರ್ಣವಾಗಿ ಮುಚ್ಚುವ ಬೂಟುಗಳು.
ಕಾಲ್ಚೀಲಗಳು ಎಂದರೆ: ಕಾಲುಗಳಿಗೆ ಧರಿಸುವ ಬಟ್ಟೆ ಮುಂತಾದ ವಸ್ತುಗಳಿಂದ ತಯಾರಿಸಿದ ವಸ್ತು. ಇದನ್ನು ಸಾಕ್ಸ್ ಎಂದು ಕರೆಯಲಾಗುತ್ತದೆ.
ಪಾದರಕ್ಷೆಗಳ ಮೇಲೆ ಸವರುವುದರ ಹಿಂದಿರುವ ಧಾರ್ಮಿಕ ಯುಕ್ತಿ:
ಪಾದರಕ್ಷೆಗಳ ಮೇಲೆ ಸವರುವುದರ ಹಿಂದಿರುವ ಯುಕ್ತಿಯೇನೆಂದರೆ, ಮುಸಲ್ಮಾನರಿಗೆ ಸುಲಭ ಮತ್ತು ಸರಳಗೊಳಿಸುವುದು. ಏಕೆಂದರೆ ಚಳಿಗಾಲ, ತೀವ್ರ ಚಳಿಯಿರುವಾಗ ಮತ್ತು ಪ್ರಯಾಣದ ಸಂದರ್ಭ ಪಾದರಕ್ಷೆಗಳನ್ನು ಅಥವಾ ಕಾಲ್ಚೀಲಗಳನ್ನು ಕಳಚಿ ಕಾಲುಗಳನ್ನು ತೊಳೆಯುವುದು ಬಹಳ ಕಷ್ಟವಾಗುತ್ತದೆ.
ಸವರುವ ಅವಧಿ:
ಊರಲ್ಲಿರುವವರು: ಒಂದು ದಿನ ಮತ್ತ ರಾತ್ರಿ (24 ತಾಸುಗಳು).
ಪ್ರಯಾಣಿಕರು: ಮೂರು ದಿನಗಳು ಮತ್ತು ಮೂರು ರಾತ್ರಿಗಳು (72 ತಾಸುಗಳು).
ಪಾದರಕ್ಷೆ ಅಥವಾ ಕಾಲ್ಚೀಲಗಳ ಮೇಲೆ ಮೊದಲ ಬಾರಿ ಸವರುವಾಗ ಸವರುವ ಅವಧಿಯು ಆರಂಭವಾಗುತ್ತದೆ.
ಪಾದರಕ್ಷೆಗಳು ಮತ್ತು ಕಾಲ್ಚೀಲಗಳ ಮೇಲೆ ಸವರುವ ವಿಧಾನ:
1. ಕೈಗಳನ್ನು ಒದ್ದೆ ಮಾಡುವುದು.
2. ಪಾದದ ಮೇಲ್ಭಾಗದಲ್ಲಿ ಕೈಯನ್ನು ಒರೆಸುವುದು (ಕಾಲು ಬೆರಳುಗಳ ತುದಿಯಿಂದ ಕಣಕಾಲಿನ ಬುಡದ ತನಕ).
3. ಬಲಗೈಯಿಂದ ಬಲಗಾಲನ್ನು ಮತ್ತು ಎಡಗೈಯಿಂದ ಎಡಗಾಲನ್ನು ಸವರುವುದು.
ಸವರುವುದನ್ನು ಅಸಿಂಧುಗೊಳಿಸುವ ಕಾರ್ಯಗಳು:
1. ಸ್ನಾನ ಕಡ್ಡಾಯವಾಗುವ ವಿಷಯಗಳು.
2. ಸವರುವ ಅವಧಿ ಮುಕ್ತಾಯವಾಗುವುದು.
ಪುರುಷ ಅಥವಾ ಮಹಿಳೆಯಿಂದ ಸಂಭೋಗವುಂಟಾದರೆ, ಎಚ್ಚರದಲ್ಲಿ ಅಥವಾ ನಿದ್ದೆಯಲ್ಲಿ ಸ್ಖಲನವುಂಟಾದರೆ, ನಮಾಝ್ ಮುಂತಾದ ಶುದ್ಧಿಯು ಕಡ್ಡಾಯವಾಗಿರುವ ಆರಾಧನೆಗಳನ್ನು ನಿರ್ವಹಿಸಲು ಅವರು ಸ್ನಾನ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿ ಮಹಿಳೆಯರು ಋತುಸ್ರಾವ ಅಥವಾ ಹೆರಿಗೆ ಸ್ರಾವದಿಂದ ಶುದ್ಧವಾದರೆ ನಮಾಝ್ ಮುಂತಾದ ಶುದ್ಧಿಯು ಕಡ್ಡಾಯವಾಗಿರುವ ಆರಾಧನೆಗಳನ್ನು ನಿರ್ವಹಿಸಲು ಅವರು ಸ್ನಾನ ಮಾಡುವುದು ಕಡ್ಡಾಯವಾಗಿದೆ.
ಸ್ನಾನ ಮಾಡುವ ವಿಧಾನ:
ಯಾವುದಾದರೂ ವಿಧದಲ್ಲಿ ಮುಸಲ್ಮಾನನು ತನ್ನ ದೇಹವನ್ನು ಸಂಪೂರ್ಣವಾಗಿ ನೀರಿನಿಂದ ಒದ್ದೆ ಮಾಡಬೇಕು. ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆಯುವುದು ಇದರಲ್ಲಿ ಒಳಪಡುತ್ತದೆ. ದೇಹ ಪೂರ್ತಿ ನೀರಿನಿಂದ ಒದ್ದೆಯಾದರೆ ದೊಡ್ಡ ಅಶುದ್ಧಿ ನಿವಾರಣೆಯಾಗುತ್ತದೆ ಮತ್ತು ಶುದ್ಧೀಕರಣವು ಪೂರ್ಣವಾಗುತ್ತದೆ.
ದೊಡ್ಡ ಅಶುದ್ಧಿಯಿರುವ ವ್ಯಕ್ತಿಯು ಸ್ನಾನ ಮಾಡುವವರೆಗೆ ಈ ಕೆಳಗಿನವುಗಳನ್ನು ಮಾಡುವುದು ನಿಷಿದ್ಧವಾಗಿದೆ:
1. ನಮಾಝ್ ಮಾಡುವುದು
2. ಕಅಬಾಲಯಕ್ಕೆ ಪ್ರದಕ್ಷಿಣೆ ಮಾಡುವುದು
3. ಮಸೀದಿಯಲ್ಲಿ ತಂಗುವುದು. ಮಸೀದಿಯಲ್ಲಿ ತಂಗದೆ ಅದರ ಮೂಲಕ ದಾಟಿ ಹೋಗುವುದರಲ್ಲಿ ತೊಂದರೆಯಿಲ್ಲ.
4. ಪವಿತ್ರ ಕುರ್ಆನ್ ಅನ್ನು ಸ್ಪರ್ಶಿಸುವುದು.
5. ಕುರ್ಆನ್ ಪಾರಾಯಣ ಮಾಡುವುದು.
ಮುಸಲ್ಮಾನನಿಗೆ ಶುದ್ಧೀಕರಣ ಮಾಡಲು ನೀರು ಸಿಗದಿದ್ದರೆ, ಅಥವಾ ರೋಗ ಮುಂತಾದ ಕಾರಣಗಳಿಂದ ನೀರನ್ನು ಬಳಸಲು ಸಾಧ್ಯವಾಗದಿದ್ದರೆ, ಮತ್ತು ಅದೇ ಸಮಯ ನಮಾಝಿನ ಸಮಯ ಕಳೆದುಹೋಗಬಹುದೆಂದು ಅವನಿಗೆ ಭಯವಾದರೆ, ಮಣ್ಣಿನಿಂದ ತಯಮ್ಮುಮ್ ಮಾಡಬೇಕು.
ತಯಮ್ಮುಮ್ ಮಾಡುವ ವಿಧಾನ: ತನ್ನ ಎರಡೂ ಕೈಗಳಿಂದ ಒಂದು ಸಲ ನೆಲಕ್ಕೆ ಹೊಡೆಯಬೇಕು, ನಂತರ ಅದರಿಂದ ಮುಖ ಮತ್ತು ಕೈಗಳನ್ನು ಮಾತ್ರ ಸವರಬೇಕು. ಮಣ್ಣು ಸ್ವಚ್ಛವಾಗಿರಬೇಕಾದುದು ಇದರ ಷರತ್ತಾಗಿದೆ.
ಈ ಕೆಳಗಿನವುಗಳಿಂದ ತಯಮ್ಮುಮ್ ಅಸಿಂಧುವಾಗುತ್ತದೆ:
1. ಯಾವುದರಿಂದ ವುಝು ಅಸಿಂಧುವಾಗುತ್ತದೋ ಅದರಿಂದ ತಯಮ್ಮುಮ್ ಅಸಿಂಧುವಾಗುತ್ತದೆ.
2. ಯಾವ ಆರಾಧನೆ ನಿರ್ವಹಿಸಲು ತಯಮ್ಮುಮ್ ಮಾಡಲಾಯಿತೋ ಆ ಆರಾಧನೆಯನ್ನು ಪ್ರಾರಂಭಿಸುವುದಕ್ಕೆ ಮುನ್ನ ನೀರು ಲಭ್ಯವಾಗುವುದು.
ಅಲ್ಲಾಹನು ಮುಸ್ಲಿಮರ ಮೇಲೆ ಪ್ರತಿದಿನ ಮತ್ತು ರಾತ್ರಿಯಲ್ಲಿ ಐದು ನಮಾಜ್ಗಳನ್ನು ಕಡ್ಡಾಯಗೊಳಿಸಿದ್ದಾನೆ ಅವು: ಫಜ್ರ್, ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ.
ನಾನು ನಮಾಜಿಗೆ ಸಿದ್ಧನಾಗುತ್ತೇನೆ
ನಮಾಜಿನ ಸಮಯವು ಪ್ರಾರಂಭವಾದರೆ, ಮುಸಲ್ಮಾನನು ಚಿಕ್ಕ ಅಶುದ್ಧಿ ಮತ್ತು ದೊಡ್ಡ ಅಶುದ್ಧಿಯಿಂದ ಶುದ್ಧೀಕರಿಸಿಕೊಳ್ಳುತ್ತಾನೆ.
ದೊಡ್ಡ ಅಶುದ್ಧಿ ಎಂದರೆ: ಮುಸಲ್ಮಾನನಿಗೆ ಸ್ನಾನ ಕಡ್ಡಾಯವಾಗುವಂತದ್ದು.
ಚಿಕ್ಕ ಅಶುದ್ಧಿ ಎಂದರೆ: ಮುಸಲ್ಮಾನನಿಗೆ ವುಝು ಕಡ್ಡಾಯವಾಗುವಂತದ್ದು.
ಮುಸಲ್ಮಾನನು ತನ್ನ ಗುಹ್ಯ ಭಾಗಗಳನ್ನು ಮುಚ್ಚಿ, ಯಾವುದೇ ಕಲ್ಮಶಗಳಿಲ್ಲದ ಶುದ್ಧವಾದ ಸ್ಥಳದಲ್ಲಿ ಶುದ್ಧ ಬಟ್ಟೆ ಧರಿಸಿ ನಮಾಜ್ ನಿರ್ವಹಿಸುತ್ತಾನೆ.
ಮುಸಲ್ಮಾನನು ನಮಾಜಿನ ಸಮಯದಲ್ಲಿ ಸೂಕ್ತವಾದ ಬಟ್ಟೆಗಳನ್ನು ಧರಿಸಿ ತನ್ನ ದೇಹವನ್ನು ಮುಚ್ಚಿ ಅಲಂಕಾರಗೊಳ್ಳುತ್ತಾನೆ. ಪುರುಷರು ನಮಾಜಿನ ಸಮಯದಲ್ಲಿ ಹೊಕ್ಕುಳ ಮತ್ತು ಮಂಡಿಯ ನಡುವಿನ ಭಾಗವನ್ನು ಪ್ರದರ್ಶಿಸುವುದು ನಿಷಿದ್ಧವಾಗಿದೆ.
ಮಹಿಳೆಯರು ನಮಾಜ್ ಮಾಡುವಾಗ ಮುಖ ಮತ್ತು ಮುಂಗೈಗಳನ್ನು ಹೊರತುಪಡಿಸಿ ದೇಹದ ಎಲ್ಲಾ ಭಾಗಗಳನ್ನು ಮುಚ್ಚಿಕೊಳ್ಳಬೇಕು.
ನಮಾಜಿನಲ್ಲಿ ಹೇಳಬೇಕಾದ ನಿರ್ದಿಷ್ಟ ವಚನಗಳನ್ನು ಬಿಟ್ಟು ಮುಸಲ್ಮಾನನು ನಮಾಜಿನ ಸಂದರ್ಭದಲ್ಲಿ ಏನೂ ಮಾತನಾಡದೆ, ಇಮಾಂ ಪಠಿಸುವುದಕ್ಕೆ ಕಿವಿಗೊಡುತ್ತಾನೆ ಮತ್ತು ನಮಾಜ್ ಮಾಡುವಾಗ ಹಿಂದೆ ತಿರುಗಿ ನೋಡುವುದಿಲ್ಲ. ನಮಾಜಿನಲ್ಲಿ ಹೇಳಬೇಕಾದ ನಿರ್ದಿಷ್ಟ ವಚನಗಳು ಅವನಿಗೆ ನೆನಪಿಲ್ಲದಿದ್ದರೆ ನಮಾಜ್ ಮುಗಿಯುವ ತನಕ ಅಲ್ಲಾಹನನ್ನು ಸ್ಮರಿಸುತ್ತಲೂ ಸ್ತುತಿಸುತ್ತಲೂ ಇರುತ್ತಾನೆ. ನಮಾಜ್ ಮತ್ತು ಅದರಲ್ಲಿ ಹೇಳಬೇಕಾದ ವಚನಗಳನ್ನು ಕಲಿಯಲು ಆತುರಪಡುವುದು ಕಡ್ಡಾಯವಾಗಿದೆ.
ನಾನು ನಮಾಜ್ ಮಾಡುವುದನ್ನು ಕಲಿಯುತ್ತೇನೆ
1. ನಾನು ನಿರ್ವಹಿಸಲು ಬಯಸುವ ಕಡ್ಡಾಯ ನಮಾಜಿಗೆ ನಿಯ್ಯತ್ ಮಾಡುತ್ತೇನೆ. ಅದರ ಸ್ಥಳವು ಹೃದಯವಾಗಿದೆ.
ನಾನು ವುಝು ಮಾಡಿದ ನಂತರ, ಕಿಬ್ಲಾದೆಡೆಗೆ ಮುಖಮಾಡುತ್ತೇನೆ. ನನಗೆ ನಿಲ್ಲಲು ಸಾಧ್ಯವಾದರೆ ನಿಂತು ನಮಾಜ್ ನಿರ್ವಹಿಸುತ್ತೇನೆ.
2. ನಾನು ಭುಜಗಳಿಗೆ ಸಮಾನಾಂತರವಾಗಿ ನನ್ನ ಕೈಗಳನ್ನು ಎತ್ತಿ, ನಮಾಜಿಗೆ ಪ್ರವೇಶಿಸುತ್ತೇನೆಂದು ನಿಯ್ಯತ್ ಮಾಡಿ, ಅಲ್ಲಾಹು ಅಕ್ಬರ್ ಎಂದು ಹೇಳುತ್ತೇನೆ.
3. ಹದೀಸಿನಲ್ಲಿ ಬಂದಿರುವ ಪ್ರಾರಂಭದ ಪ್ರಾರ್ಥನೆಯನ್ನು ಪಠಿಸುತ್ತೇನೆ. ಅವುಗಳಲ್ಲಿ ಒಂದು ಹೀಗಿದೆ: ಓ ಅಲ್ಲಾಹ್! ನಿನ್ನ ಪರಿಶುದ್ಧಿಯನ್ನು ಕೊಂಡಾಡುತ್ತಾ ನಿನ್ನನ್ನು ಸ್ತುತಿಸುತ್ತೇನೆ. ನಿನ್ನ ನಾಮವು ಅನುಗ್ರಹೀತವಾಗಿದೆ. ನಿನ್ನ ಮಹಿಮೆಯು ಅತ್ಯುನ್ನತವಾಗಿದೆ. ನೀನಲ್ಲದೆ ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. 4. ಈ ಕೆಳಗಿನ ವಚನವನ್ನು ಪಠಿಸಿ ಶಪಿಸಲ್ಪಟ್ಟ ಸೈತಾನನಿಂದ ನಾನು ಅಲ್ಲಾಹನಲ್ಲಿ ಆಶ್ರಯವನ್ನು ಕೋರುತ್ತೇನೆ: ಶಪಿಸಲ್ಪಟ್ಟ ಸೈತಾನನಿಂದ ನಾನು ಅಲ್ಲಾಹನಲ್ಲಿ ಆಶ್ರಯವನ್ನು ಕೋರುತ್ತೇನೆ. 5. ಎಲ್ಲಾ ರಕಅತ್ಗಳಲ್ಲೂ ಸೂರ ಫಾತಿಹ ಪಠಿಸುತ್ತೇನೆ. ಅದು ಹೀಗಿದೆ: ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹನಿಗೆ ಸ್ತುತಿ. ಪರಮ ದಯಾಮಯನೂ, ಕರುಣಾನಿಧಿಯೂ ಪ್ರತಿಫಲ ದಿನದ ಒಡೆಯನೂ ಆಗಿರುವ (ಅಲ್ಲಾಹನಿಗೆ) ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು. ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.
ಎಲ್ಲಾ ನಮಾಜುಗಳ ಮೊದಲ ಮತ್ತು ಎರಡನೆಯ ರಕಅತ್ಗಳಲ್ಲಿ ಸೂರ ಫಾತಿಹ ಪಠಿಸಿದ ನಂತರ ಪವಿತ್ರ ಕುರ್ಆನಿನಲ್ಲಿ ನನಗೆ ನೆನಪಿರುವ ಯಾವುದಾದರೂ ಭಾಗವನ್ನು ಪಠಿಸುತ್ತೇನೆ. ಇದು ಕಡ್ಡಾಯವಲ್ಲ, ಆದರೆ ಹೀಗೆ ಮಾಡುವುದರಿಂದ ದೊಡ್ಡ ಪ್ರತಿಫಲವಿದೆ.
6. ನಂತರ ನಾನು ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ, ನನ್ನ ಬೆನ್ನು ನೇರವಾಗುವವರೆಗೆ ರುಕೂ ಮಾಡುತ್ತೇನೆ. ನನ್ನ ಕೈಗಳ ಬೆರಳುಗಳನ್ನು ಅಗಲವಾಗಿಸಿ ಮೊಣಕಾಲುಗಳ ಮೇಲಿಡುತ್ತೇನೆ. ನಂತರ ರುಕೂನಲ್ಲಿರುವಾಗ ನಾನು ಸುಭ್ಹಾನ ರಬ್ಬಿಯಲ್-ಅಜೀಮ್ ಎಂದು ಹೇಳುತ್ತೇನೆ.
7. ನಂತರ ಸಮಿಅಲ್ಲಾಹು ಲಿಮನ್ ಹಮಿದ ಎಂದು ಹೇಳುತ್ತಾ ತಲೆ ಎತ್ತುತ್ತೇನೆ. ಕೈಗಳನ್ನು ಭುಜಗಳಿಗೆ ಸಮಾನಾಂತರವಾಗಿ ಎತ್ತುತ್ತೇನೆ. ನನ್ನ ದೇಹವು ನೇರವಾಗಿ ನಿಂತ ಬಳಿಕ ನಾನು ರಬ್ಬನಾ ವ ಲಕಲ್ ಹಮ್ದ್ ಎಂದು ಹೇಳುತ್ತೇನೆ.
8. ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ, ನನ್ನ ಎರಡು ಕೈಗಳು, ಎರಡು ಮೊಣಕಾಲುಗಳು, ಎರಡು ಪಾದಗಳು, ಹಣೆ ಮತ್ತು ಮೂಗಿನ ಮೇಲೆ ಸುಜೂದ್ ಮಾಡುತ್ತೇನೆ. ಸುಜೂದ್ನಲ್ಲಿ ಸುಬ್ಹಾನ ರಬ್ಬಿ ಯಲ್ ಆಲ ಎಂದು ಹೇಳುತ್ತೇನೆ.
9. ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಸುಜೂದಿನಿಂದ ತಲೆ ಎತ್ತಿ ಬೆನ್ನು ನೇರವಾಗಿರುವ ಸ್ಥಿತಿಯಲ್ಲಿ, ಬಲಗಾಲನ್ನು ನೆಟ್ಟಗೆ ನಿಲ್ಲಿಸಿ ಎಡಗಾಲಿನ ಮೇಲೆ ಕೂರುತ್ತೇನೆ. ಈ ಸ್ಥಿತಿಯಲ್ಲಿ ರಬ್ಬಿಗ್ ಫಿರ್ ಲೀ ಎಂದು ಹೇಳುತ್ತೇನೆ.
10. ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಈ ಮೊದಲು ಸುಜೂದ್ ಮಾಡಿದಂತೆ ಮತ್ತೊಮ್ಮೆ ಸುಜೂದ್ ಮಾಡುತ್ತೇನೆ.
11. ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಸುಜೂದಿನಿಂದ ತಲೆಯೆತ್ತಿ ನೇರವಾಗಿ ನಿಲ್ಲುತ್ತೇನೆ. ನಮಾಜಿನ ಉಳಿದ ರಕಅತ್ಗಳಲ್ಲಿ ಈ ಹಿಂದೆ ಮಾಡಿದಂತೆಯೇ ಮಾಡುತ್ತೇನೆ.
ಝುಹರ್, ಅಸ್ರ್, ಮಗ್ರಿಬ್ ಮತ್ತು ಇಶಾ ನಮಾಜಿನ ಎರಡನೇ ರಕ್ಅತ್ ನಿರ್ವಹಿಸಿದ ನಂತರ, ಮೊದಲ ತಶಹ್ಹುದ್ ಅನ್ನು ಪಠಿಸಲು ಕುಳಿತುಕೊಳ್ಳುತ್ತೇನೆ. ಅದು ಹೀಗಿದೆ: ಅತ್ತಹಿಯ್ಯಾತು ಲಿಲ್ಲಾಹಿ ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವ ರಹ್ಮತುಲ್ಲಾಹಿ ವ ಬರಕಾತುಹು, ಅಸ್ಸಲಾಮು ಅಲೈನಾ ವ ಅಲಾ ಇಬಾದಿಲ್ಲಾಹಿಸ್ಸ್ವಾಲಿಹೀನ್, ಅಶ್ ಹದು ಅಲ್ಲಾ ಇಲಾಹ ಇಲ್ಲಲ್ಲಾಹು, ವ ಅಶ್ ಹದು ಅನ್ನ ಮುಹಮ್ಮದನ್ ಅಬ್ದುಹು ವ ರಸೂಲುಹು. ನಂತರ ಮೂರನೇ ರಕ್ಅತ್ ನಿರ್ವಹಿಸಲು ಎದ್ದು ನಿಲ್ಲುತ್ತೇನೆ. ಪ್ರತಿ ನಮಾಜಿನ ಕೊನೆಯ ರಕ್ಅತ್ ನಿರ್ವಹಿಸಿದ ಬಳಿಕ, ಕೊನೆಯ ತಶಹ್ಹುದ್ ಅನ್ನು ಪಠಿಸಲು ಕುಳಿತುಕೊಳ್ಳುತ್ತೇನೆ. ಅದು ಹೀಗಿದೆ: ಅತ್ತಹಿಯ್ಯಾತು ಲಿಲ್ಲಾಹಿ ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವ ರಹ್ಮತುಲ್ಲಾಹಿ ವ ಬರಕಾತುಹು, ಅಸ್ಸಲಾಮು ಅಲೈನಾ ವ ಅಲಾ ಇಬಾದಿಲ್ಲಾಹಿಸ್ಸ್ವಾಲಿಹೀನ್, ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹು, ವ ಅಶ್ಹದು ಅನ್ನ ಮುಹಮ್ಮದನ್ ಅಬ್ದುಹು ವ ರಸೂಲುಹು. ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದಿನ್ ವ ಅಲಾ ಆಲಿ ಮುಹಮ್ಮದ್, ಕಮಾ ಸ್ವಲ್ಲೈತ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ, ಇನ್ನಕ ಹಮೀದುಮ್ಮಜೀದ್, ಅಲ್ಲಾಹುಮ್ಮ ಬಾರಿಕ್ ಅಲಾ ಮುಹಮ್ಮದಿನ್ ವ ಅಲಾ ಆಲಿ ಮುಹಮ್ಮದ್, ಕಮಾ ಬಾರಕ್ತ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ,ಇನ್ನಕ ಹಮೀದುಮ್ಮಜೀದ್.
12. ನಂತರ ನಮಾಜಿನಿಂದ ವಿರಮಿಸುತ್ತೇನೆ ಎಂಬ ನಿಯ್ಯತ್ತಿನೊಂದಿಗೆ, ಬಲಗಡೆಗೆ ತಿರುಗಿ ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್ ಎಂದು ಹೇಳುತ್ತೇನೆ ಮತ್ತು ಎಡಗಡೆಗೆ ತಿರುಗಿ ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್ ಎಂದು ಹೇಳುತ್ತೇನೆ. ಇಲ್ಲಿಗೆ ನಾನು ನಮಾಜನ್ನು ನಿರ್ವಹಿಸಿದವನಾಗುತ್ತೇನೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಪ್ರವಾದಿಯವರೇ! ತಮ್ಮ ಪತ್ನಿಯರೊಂದಿಗೆ, ಪುತ್ರಿಯರೊಂದಿಗೆ ಮತ್ತು ಸತ್ಯವಿಶ್ವಾಸಿನಿ ಸ್ತ್ರೀಯರೊಂದಿಗೆ ಅವರು ತಮ್ಮ ಜಲಾಬೀಬನ್ನು ತಮ್ಮ ಶರೀರದ ಮೇಲೆ ಇಳಿಸಿಕೊಳ್ಳುವಂತೆ ಹೇಳಿರಿ. ಅವರು ಗುರುತಿಸಲ್ಪಡಲು ಮತ್ತು ಅವರು ಕಿರುಕುಳಕ್ಕೊಳಗಾಗದಿರಲು ಅದು ಅತ್ಯಂತ ಸೂಕ್ತವಾಗಿದೆ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು." [ಅಲ್-ಅಹ್ಝಾಬ್:59] ಮುಸ್ಲಿಮ್ ಮಹಿಳೆಗೆ ಹಿಜಾಬ್ ಧರಿಸುವುದನ್ನು ಮತ್ತು ಪರ-ಪುರುಷರಿಂದ ಅವಳ ಗುಪ್ತ ಭಾಗಗಳನ್ನು ಮತ್ತು ಸಂಪೂರ್ಣ ದೇಹವನ್ನು ಆಕೆಯ ಊರಿನಲ್ಲಿ ಸಾಮಾನ್ಯವಾಗಿ ಧರಿಸುವ ಉಡುಪಿನ ಮೂಲಕ ಮರೆಮಾಚುವುದನ್ನು ಅಲ್ಲಾಹು ಕಡ್ಡಾಯಗೊಳಿಸಿದ್ದಾನೆ. ಆಕೆ ತನ್ನ ಪತಿ ಅಥವಾ ಆಕೆಯ ಮಹ್ರಮ್ಗಳ ಮುಂದೆ ಹೊರತುಪಡಿಸಿ ತನ್ನ ಹಿಜಾಬ್ ಅನ್ನು ಕಳಚಲು ಆಕೆಗೆ ಅನುಮತಿ ಇಲ್ಲ. ಮಹ್ರಮ್ಗಳೆಂದರೆ: ಮುಸ್ಲಿಂ ಮಹಿಳೆಗೆ ವಿವಾಹವಾಗಲು ಶಾಶ್ವತವಾಗಿ ನಿಷಿದ್ಧರಾಗಿರುವವರು. ಅವರು ಯಾರೆಂದರೆ: ತಂದೆ, ಅವರ ತಂದೆ, ಅವರ ತಂದೆ ಹೀಗೆ ಮೇಲಿನವರೆಗೆ, ಮಗ, ಅವನ ಮಗ, ಅವನ ಮಗ ಹೀಗೆ ಕೆಳಗಿನವರೆಗೆ, ತಂದೆಯ ಸಹೋದರರು, ತಾಯಿಯ ಸಹೋದರರು, ಸಹೋದರ, ಸಹೋದರನ ಮಗ, ಸಹೋದರಿಯ ಮಗ, ತಾಯಿಯ ಗಂಡ, ಗಂಡನ ತಂದೆ, ಅವರ ತಂದೆ ಹೀಗೆ ಮೇಲಿನವರೆಗೆ, ಗಂಡನ ಮಕ್ಕಳು, ಅವರ ಮಕ್ಕಳು ಹೀಗೆ ಕೆಳಗಿನವರೆಗೆ, ಸ್ತನಪಾನ ಸಂಬಂಧದ ಸಹೋದರ ಮತ್ತು ಸ್ತನಪಾನ ಮಾಡಿದ ಮಹಿಳೆಯ ಗಂಡ, ಕುಟುಂಬ ಸಂಬಂಧದಿಂದ ನಿಷೇಧಿಸಲ್ಪಡುವದೆಲ್ಲವೂ ಸ್ತನಪಾನ ಸಂಬಂಧದಿಂದಲೂ ನಿಷೇಧಿಸಲ್ಪಡುತ್ತವೆ.
ಮುಸ್ಲಿಂ ಮಹಿಳೆ ತನ್ನ ಉಡುಪಿನಲ್ಲಿ ಹಲವಾರು ನಿಯಮಗಳನ್ನು ಪಾಲಿಸಬೇಕು:
ಒಂದು: ಹಿಜಾಬ್ ಸಂಪೂರ್ಣ ದೇಹವನ್ನು ಮುಚ್ಚಿಕೊಂಡಿರಬೇಕು.
ಎರಡು: ಮಹಿಳೆ ತನ್ನನ್ನು ಅಲಂಕರಿಸಿಕೊಳ್ಳಲು ಧರಿಸುವ ವಸ್ತುವಾಗಿರಬಾರದು.
ಮೂರು: ಅದು ತನ್ನ ದೇಹವನ್ನು ಪ್ರದರ್ಶಿಸುವ ರೀತಿಯಲ್ಲಿ ಪಾರದರ್ಶಕವಾಗಿರಬಾರದು.
ನಾಲ್ಕು: ಅದು ಸಡಿಲವಾಗಿರಬೇಕು, ಬಿಗಿಯಾಗಿರಬಾರದು, ಅದು ದೇಹದ ಉಬ್ಬು ತಗ್ಗುಗಳನ್ನು ಪ್ರದರ್ಶಿಸಬಾರದು.
ಐದು: ಅದು ಪರಿಮಳಯುಕ್ತವಾಗಿರಬಾರದು.
ಆರು: ಅದು ಪುರುಷರ ಉಡುಪನ್ನು ಹೋಲುವಂತಿರಬಾರದು.
ಏಳು: ಅದು ಮುಸ್ಲಿಮೇತರ ಮಹಿಳೆಯರು ತಮ್ಮ ಆರಾಧನೆ ಅಥವಾ ಹಬ್ಬಗಳಲ್ಲಿ ಧರಿಸುವ ಉಡುಗೆಯನ್ನು ಹೋಲುವಂತಿರಬಾರದು.
ಸತ್ಯ ವಿಶ್ವಾಸಿಗಳ ಗುಣಗಳು
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಲ್ಲಾಹನ ಬಗ್ಗೆ ಪ್ರಸ್ತಾಪಿಸಲಾಗುವಾಗ ಹೃದಯಗಳು ಭಯದಿಂದ ನಡುಗುವವರು, ಅವನ ದೃಷ್ಟಾಂತಗಳನ್ನು ಓದಿಕೊಡಲಾದಾಗ ವಿಶ್ವಾಸವು ಅಧಿಕಗೊಳ್ಳುವವರು ಮತ್ತು ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು ಮಾತ್ರ ಸತ್ಯವಿಶ್ವಾಸಿಗಳಾಗಿರುವರು." [ಅಲ್-ಅನ್ಫಾಲ್:2]
ಅವನು ಸತ್ಯವಂತ, ಸುಳ್ಳು ಹೇಳಲಾರ.
ಕರಾರು ಮತ್ತು ವಾಗ್ದಾನವನ್ನು ಪೂರೈಸುತ್ತಾನೆ.
ತರ್ಕ ಮಾಡುವಾಗ ನಿಂದಿಸುವುದಿಲ್ಲ
ಅವನು ನಂಬಿಕೆಯಿಂದ ಒಪ್ಪಿಸಿದ್ದನ್ನು ಹಿಂದಿರುಗಿಸುತ್ತಾನೆ.
ಅವನು ತನಗಾಗಿ ಇಷ್ಟಪಡುವುದನ್ನು ತನ್ನ ಮುಸ್ಲಿಂ ಸಹೋದರನಿಗಾಗಿಯೂ ಇಷ್ಟಪಡುತ್ತಾನೆ.
ಉದಾರ ಮನಸ್ಸಿನವನು.
ಜನರಿಗೆ ಒಳಿತು ಮಾಡುವವನು.
ಸಂಬಂಧಗಳನ್ನು ಕಾಪಾಡುತ್ತಾನೆ.
ಅವನು ಅಲ್ಲಾಹನ ವಿಧಿಯ ಬಗ್ಗೆ ತೃಪ್ತನಾಗಿರುತ್ತಾನೆ. ಸುಖದ ಸಮಯದಲ್ಲಿ ಕೃತಜ್ಞನಾಗಿರುತ್ತಾನೆ ಮತ್ತು ಕಷ್ಟದ ಸಮಯದಲ್ಲಿ ತಾಳ್ಮೆಯಿಂದಿರುತ್ತಾನೆ.
ನಾಚಿಕೆ ಮತ್ತು ಸಂಕೋಚ ಸ್ವಭಾವದವನು.
ಸೃಷ್ಟಿಗಳಿಗೆ ದಯೆ ತೋರುತ್ತಾನೆ.
ಅವನ ಹೃದಯದಲ್ಲಿ ಅಸೂಯೆಯಿಲ್ಲ ಮತ್ತು ಅವನ ಕೈಕಾಲುಗಳು ಇತರರ ವಿರುದ್ಧ ಅತಿರೋಕವೆಸಗುವುದಿಲ್ಲ.
ಜನರನ್ನು ಕ್ಷಮಿಸುತ್ತಾನೆ.
ಅವನು ಬಡ್ಡಿಯನ್ನು ತಿನ್ನುವುದಿಲ್ಲ ಮತ್ತು ಬಡ್ಡಿ ವ್ಯವಹಾರ ಮಾಡುವುದಿಲ್ಲ.
ಅವನು ವ್ಯಭಿಚಾರ ಮಾಡುವುದಿಲ್ಲ.
ಅವನು ಮದ್ಯಪಾನ ಮಾಡುವುದಿಲ್ಲ.
ಅವನು ನೆರೆಯವರಿಗೆ ಒಳಿತು ಮಾಡುತ್ತಾನೆ.
ಅವನು ಅನ್ಯಾಯ ಮಾಡುವುದಿಲ್ಲ, ವಂಚಿಸುವುದಿಲ್ಲ.
ಅವನು ಕಳ್ಳತನ ಮಾಡುವುದಿಲ್ಲ, ಮೋಸ ಮಾಡುವುದಿಲ್ಲ.
ಅವನು ತನ್ನ ಮಾತಾಪಿತರಿಗೆ ಅವರು ಮುಸ್ಲಿಮೇತರರಾಗಿದ್ದರೂ ಸಹ ಒಳಿತು ಮಾಡುತ್ತಾನೆ. ಒಳಿತಿನ ವಿಷಯಗಳಲ್ಲಿ ಅವರನ್ನು ಅನುಸರಿಸುತ್ತಾನೆ.
ಅವನು ತನ್ನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುತ್ತಾನೆ, ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸಲು ಆದೇಶಿಸುತ್ತಾನೆ. ಕೆಟ್ಟ ಮತ್ತು ನಿಷಿದ್ಧ ಕಾರ್ಯಗಳನ್ನು ಅವರಿಗೆ ವಿರೋಧಿಸುತ್ತಾನೆ.
ಮುಸ್ಲಿಮೇತರರ ಧಾರ್ಮಿಕ ವೈಶಿಷ್ಟ್ಯಗಳನ್ನು ಮತ್ತು ಅವರಿಗೆ ಮಾತ್ರ ಸೀಮಿತವಾಗಿರುವ ವೇಷ-ಭೂಷಣಗಳನ್ನು ಅನುಕರಿಸುವುದಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು." [ಅನ್ನಹ್ಲ್:97]. ಒಬ್ಬ ಮುಸಲ್ಮಾನ ಜೀವಂತ ಅಥವಾ ಮೃತ ಮಹಾಪುರುಷರು ಅಥವಾ ವಿಗ್ರಹಗಳ ಮಧ್ಯಸ್ತಿಕೆಯಿಲ್ಲದೆ ಅಲ್ಲಾಹನೊಂದಿಗೆ ನೇರ ಸಂಪರ್ಕ ಮಾಡುವಾಗ ಅವನ ಹೃದಯಕ್ಕೆ ಸಂತೋಷ, ಆಹ್ಲಾದ ಮತ್ತು ಸೌಭಾಗ್ಯ ಸಿಗುತ್ತದೆ. ತಾನು ತನ್ನ ದಾಸರಿಗೆ ಎಲ್ಲಾ ಸಮಯಗಳಲ್ಲೂ ಅವರ ಮಾತನ್ನು ಕೇಳುತ್ತಾ, ಅವರ ಪ್ರಾರ್ಥನೆಗಳಿಗೆ ಉತ್ತರಿಸುತ್ತಾ, ಅವರ ಹತ್ತಿರದಲ್ಲೇ ಇದ್ದೇನೆಂದು ಅಲ್ಲಾಹು ಪವಿತ್ರ ಕುರ್ಆನಿನಲ್ಲಿ ಹೇಳಿದ್ದಾನೆ: "ನನ್ನ ದಾಸರು ತಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಾನು (ಅವರಿಗೆ ಅತಿ) ನಿಕಟವಾಗಿರುವೆನು (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಆ ಪ್ರಾರ್ಥನೆಗೆ ಉತ್ತರವನ್ನು ನೀಡುವೆನು. ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆದವರಾಗಲೂ ಬಹುದು." [ಅಲ್-ಬಖರ:186] ಅಲ್ಲಾಹನು ನಮಗೆ ಅವನೊಂದಿಗೆ ಪ್ರಾರ್ಥಿಸಬೇಕೆಂದು ಆಜ್ಞಾಪಿಸಿದ್ದಾನೆ ಮತ್ತು ಅವನು ಈ ಪ್ರಾರ್ಥನೆಯನ್ನು ಅವನ ಸಾಮೀಪ್ಯವನ್ನು ಪಡೆಯುವ ಒಂದು ಮಹತ್ತರವಾದ ಆರಾಧನೆಯನ್ನಾಗಿ ಮಾಡಿದ್ದಾನೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನಿಮ್ಮ ಪ್ರಭು ಹೇಳಿರುವನು: ನೀವು ನನ್ನೊಂದಿಗೆ ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರವನ್ನು ನೀಡುವೆನು." [ಗಾಫಿರ್:60] ಒಬ್ಬ ಸಜ್ಜನ ಮುಸ್ಲಿಮನು ತನ್ನ ಅಗತ್ಯಗಳನ್ನು ಯಾವಾಗಲೂ ತನ್ನ ಪ್ರಭುವಿನ ಮುಂದಿಡುತ್ತಾನೆ, ಸದಾ ಅವನ ಮುಂದೆ ಪ್ರಾರ್ಥಿಸುತ್ತಾನೆ, ಮತ್ತು ಸತ್ಕರ್ಮಗಳ ಮೂಲಕ ಅವನ ಸಾಮೀಪ್ಯವನ್ನು ಪಡೆಯಲು ಪ್ರಯತ್ನಿಸುತ್ತಾನೆ.
ಸರ್ವಶಕ್ತನಾದ ಅಲ್ಲಾಹನು ನಮ್ಮನ್ನು ಈ ಜಗತ್ತಿನಲ್ಲಿ ಒಂದು ದೊಡ್ಡ ಉದ್ದೇಶಕ್ಕಾಗಿ ಸೃಷ್ಟಿಸಿದ್ದಾನೆಯೇ ಹೊರತು ವ್ಯರ್ಥವಾಗಿ ಅಲ್ಲ. ಆ ಉದ್ದೇಶವು ಅವನನ್ನು ಮಾತ್ರ ಆರಾಧಿಸುವುದು ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರುವುದು. ನಮ್ಮ ವೈಯುಕ್ತಿಕ ಮತ್ತು ಸಾರ್ವಜನಿಕ ಜೀವನದ ಎಲ್ಲಾ ವ್ಯವಹಾರಗಳನ್ನು ವ್ಯವಸ್ಥಿತಗೊಳಿಸುವ ಒಂದು ಸಮಗ್ರ ದೈವಿಕ ಧರ್ಮವನ್ನು ಅವನು ನಮಗೆ ದಯಪಾಲಿಸಿದ್ದಾನೆ. ಈ ನ್ಯಾಯಪೂರ್ಣ ಧರ್ಮಸಂಹಿತೆಯ ಮೂಲಕ, ನಮ್ಮ ಜೀವನದ ಅಗತ್ಯಗಳನ್ನು — ಅಂದರೆ ನಮ್ಮ ಧರ್ಮ, ನಮ್ಮ ಜೀವ, ನಮ್ಮ ಮಾನ, ನಮ್ಮ ಬುದ್ಧಿ ಮತ್ತು ನಮ್ಮ ಸಂಪತ್ತುಗಳನ್ನು ಸಂರಕ್ಷಿಸಿದ್ದಾನೆ. ಯಾರು ಧಾರ್ಮಿಕ ಆದೇಶಗಳಿಗೆ ಬದ್ಧವಾಗಿ ಮತ್ತು ನಿಷೇಧಿತ ವಿಷಯಗಳನ್ನು ವರ್ಜಿಸಿ ಬದುಕುವನೋ, ಅವನು ಈ (ಮೇಲಿನ) ಅಗತ್ಯಗಳನ್ನು ಸಂರಕ್ಷಿಸುತ್ತಾನೆ ಮತ್ತು ನಿಸ್ಸಂದೇಹವಾಗಿಯೂ ಸಂತೋಷದಿಂದ ಮತ್ತು ನೆಮ್ಮದಿಯಿಂದ ಬದುಕುತ್ತಾನೆ.
ಮುಸ್ಲಿಮನಿಗೆ ಅವನ ಪರಿಪಾಲಕ ಪ್ರಭುವಿನೊಂದಿಗೆ ಇರುವ ಸಂಬಂಧವು ಬಹಳ ಆಳವಾಗಿದ್ದು, ಸಮಾಧಾನ, ಮಾನಸಿಕ ನೆಮ್ಮದಿ, ಶಾಂತಿ, ಸುರಕ್ಷೆ ಮತ್ತು ಸಂತೋಷದ ಭಾವನೆಯನ್ನು ಒದಗಿಸುತ್ತದೆ; ಸರ್ವಶಕ್ತನಾದ ಅಲ್ಲಾಹನು ತನ್ನ ಸತ್ಯವಿಶ್ವಾಸಿ ದಾಸನ ಜೊತೆಗಿದ್ದಾನೆ, ಅವನನ್ನು ರಕ್ಷಿಸುತ್ತಾನೆ ಮತ್ತು ಅವನಿಗೆ ಸಹಾಯ ಮಾಡುತ್ತಾನೆಂಬ ಭಾವನೆಯನ್ನು ಮೂಡಿಸುತ್ತದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿರುವನು. ಅವನು ಅವರನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ಹೊರತರುವನು." [ಅಲ್-ಬಖರ:257].
ಈ ಮಹಾನ್ ಸಂಬಂಧವು ಒಂದು ಭಾವನಾತ್ಮಕ ಸ್ಥಿತಿಯಾಗಿದ್ದು, ಪರಮ ದಯಾಮಯನ (ಅಲ್ಲಾಹನ) ಆರಾಧನೆಯನ್ನು ಆನಂದಿಸುವಂತೆ ಮಾಡುತ್ತದೆ, ಅವನ ಭೇಟಿಗಾಗಿ ತವಕಿಸುತ್ತದೆ ಮತ್ತು ಸತ್ಯವಿಶ್ವಾಸದ ಮಾಧುರ್ಯವನ್ನು ಅನುಭವಿಸುವ ಮೂಲಕ ಅವನ ಅಂತರಾತ್ಮದಲ್ಲಿ ಸಂತೋಷಗಳ ಪ್ರಯಾಣವನ್ನು ಮಾಡಿಸುತ್ತದೆ.
ಸತ್ಕಾರ್ಯಗಳನ್ನು ಮಾಡುವ ಮತ್ತು ದುಷ್ಕೃತ್ಯಗಳನ್ನು ವರ್ಜಿಸುವವನಿಗೆ ಮಾತ್ರವಲ್ಲದೆ ಇನ್ನಾರಿಗೂ ಈ ಮಾಧುರ್ಯದ ಸವಿಯನ್ನು ವಿವರಿಸಲಾಗದು. ಆದುದರಿಂದಲೇ ಪ್ರವಾದಿ ಮುಹಮ್ಮದ್ ﷺ ರವರು ಹೇಳುತ್ತಾರೆ: "ಅಲ್ಲಾಹನನ್ನು ರಬ್ಬ್ ಎಂದು, ಇಸ್ಲಾಮನ್ನು ದೀನ್ ಎಂದು ಮತ್ತು ಮುಹಮ್ಮದ್(ಸ) ರನ್ನು ನಬಿ ಎಂದು ತೃಪ್ತರಾದವರು ಸತ್ಯವಿಶ್ವಾಸದ ಮಾಧುರ್ಯವನ್ನು ಸವಿದರು."
ಹೌದು, ಒಬ್ಬ ವ್ಯಕ್ತಿ ತನ್ನ ಸೃಷ್ಟಿಕರ್ತನ ಮುಂದೆ ತನ್ನ ಶಾಶ್ವತ ಉಪಸ್ಥಿತಿಯನ್ನು ಗ್ರಹಿಸಿದರೆ, ಅವನ ಅತಿಸುಂದರ ಹೆಸರುಗಳು ಮತ್ತು ಗುಣಲಕ್ಷಣಗಳ ಮೂಲಕ ಅವನನ್ನು ತಿಳಿದರೆ, ಮತ್ತು ಅವನ ಆರಾಧನೆಯಲ್ಲಿ ಇತರ ಯಾರಿಗೂ ಪಾಲು ನೀಡದೆ ಅವನನ್ನು ಮಾತ್ರ ನಿಷ್ಕಳಂಕವಾಗಿ ಆರಾಧಿಸಿದರೆ, ಅವನು ಈ ಜಗತ್ತಿನಲ್ಲಿ ಅತ್ಯುತ್ತಮವಾಗಿ ಮತ್ತು ಆಹ್ಲಾದಕರವಾಗಿ ಜೀವಿಸುತ್ತಾನೆ ಮತ್ತು ಪರಲೋಕದಲ್ಲಿ ಅವನ ಅಂತ್ಯವು ಅತ್ಯುತ್ತಮವಾಗಿರುತ್ತದೆ.
ಸತ್ಯವಿಶ್ವಾಸಿಗಳಿಗೆ ಭೂಲೋಕದಲ್ಲಿ ಸಂಭವಿಸುವ ವಿಪತ್ತುಗಳಲ್ಲೂ ಕೂಡ (ಅವರು ಅತ್ಯುತ್ತಮವಾಗಿ ಮತ್ತು ಆಹ್ಲಾದಕರವಾಗಿ ಜೀವಿಸುತ್ತಾರೆ). ಏಕೆಂದರೆ ಅವುಗಳ ಬಿಸಿಯು ಸತ್ಯವಿಶ್ವಾಸದ ತಂಪಿನಿಂದ, ಸರ್ವಶಕ್ತನಾದ ಅಲ್ಲಾಹನ ವಿಧಿ-ನಿರ್ಣಯಕ್ಕೆ ಸೂಚಿಸುವ ಸಂತೃಪ್ತಿಯಿಂದ, ಒಳಿತಾಗಿದ್ದರೂ, ಕೆಡುಕಾಗಿದ್ದರೂ ಅವನ ಎಲ್ಲಾ ವಿಧಿ-ನಿರ್ಣಯಗಳಿಗಾಗಿ ಅವನನ್ನು ಸ್ತುತಿಸುವುದರಿಂದ ಮತ್ತು ಅದರಲ್ಲಿ ಪೂರ್ಣ ತೃಪ್ತಿ ಹೊಂದುವುದರಿಂದ ನಿವಾರಣೆಯಾಗುತ್ತದೆ.
ಸರ್ವಶಕ್ತನಾದ ಅಲ್ಲಾಹುವನ್ನು ಅತಿಯಾಗಿ ಸ್ಮರಿಸುವುದು ಮತ್ತು ಪವಿತ್ರ ಕುರ್ಆನನ್ನು ಪಠಿಸುವುದು ಮುಸಲ್ಮಾನನು ತನ್ನ ಸಂತೋಷ ಮತ್ತು ನೆಮ್ಮದಿಯನ್ನು ಹೆಚ್ಚಿಸಲು ಆಸಕ್ತಿವಹಿಸಿ ಮಾಡಬೇಕಾದ ಕಾರ್ಯಗಳಾಗಿವೆ. ಸರ್ವಶಕ್ತನಾದ ಅಲ್ಲಾಹನು ಹೇಳಿದಂತೆ: "ಅಂದರೆ ವಿಶ್ವಾಸವಿಟ್ಟವರನ್ನು ಮತ್ತು ಅಲ್ಲಾಹುವಿನ ಸ್ಮರಣೆಯಿಂದಾಗಿ ಹೃದಯಗಳು ಶಾಂತಗೊಳ್ಳುವವರನ್ನು. ಅರಿಯಿರಿ! ಹೃದಯಗಳು ಶಾಂತಗೊಳ್ಳುವುದು ಅಲ್ಲಾಹುವಿನ ಸ್ಮರಣೆಯಿಂದಾಗಿದೆ." [ಅರ್ರಅ್ದ್:28] ಒಬ್ಬ ಮುಸಲ್ಮಾನ ಅಲ್ಲಾಹನ ಸ್ಮರಣೆಯನ್ನು ಮತ್ತು ಕುರ್ಆನ್ ಪಠಣವನ್ನು ಎಷ್ಟರಮಟ್ಟಿಗೆ ಹೆಚ್ಚಿಸುತ್ತಾನೋ, ಅಷ್ಟರಮಟ್ಟಿಗೆ ಅಲ್ಲಾಹನೊಂದಿಗಿರುವ ಅವನ ಸಂಬಂಧವು ಹೆಚ್ಚುತ್ತದೆ, ಅವನ ಆತ್ಮವು ಶುದ್ಧವಾಗುತ್ತದೆ ಮತ್ತು ಅವನ ವಿಶ್ವಾಸವು ಬಲಿಷ್ಠವಾಗುತ್ತದೆ. ಅಂತೆಯೇ, ಅಲ್ಲಾಹನನ್ನು ಒಳದೃಷ್ಟಿಯಿಂದ ಆರಾಧಿಸುವುದಕ್ಕಾಗಿ, ಮುಸಲ್ಮಾನನು ತನ್ನ ಧರ್ಮವನ್ನು ಸರಿಯಾದ ಮೂಲಗಳಿಂದ ಕಲಿಯಲು ಉತ್ಸುಕನಾಗುವುದು ಅತ್ಯಗತ್ಯವಾಗಿದೆ. ಏಕೆಂದರೆ, ಪ್ರವಾದಿ ﷺ ಹೇಳಿದರು: "ಜ್ಞಾನವನ್ನು ಹುಡುಕುವುದು ಪ್ರತಿಯೊಬ್ಬ ಮುಸಲ್ಮಾನನಿಗೂ ಕಡ್ಡಾಯವಾಗಿದೆ." ಅದೇ ರೀತಿ, ಅವನು ತನ್ನನ್ನು ಸೃಷ್ಟಿಸಿದ ಸರ್ವಶಕ್ತನಾದ ಅಲ್ಲಾಹನ ಆಜ್ಞೆಗಳಿಗೆ ಶರಣಾಗಬೇಕು ಮತ್ತು ವಿಧೇಯನಾಗಿರಬೇಕು. ಆ ಆಜ್ಞೆಗಳಲ್ಲಿರುವ ಯುಕ್ತಿಯನ್ನು ಅವನು ತಿಳಿದರೂ, ಅಥವಾ ತಿಳಿಯದಿದ್ದರೂ ಸಹ. ಏಕೆಂದರೆ, ಸರ್ವಶಕ್ತನಾದ ಅಲ್ಲಾಹು ತನ್ನ ದಿವ್ಯ ಗ್ರಂಥದಲ್ಲಿ ಹೇಳುತ್ತಾನೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರು ಒಂದು ವಿಷಯವನ್ನು ತೀರ್ಮಾನಿಸಿದ ಬಳಿಕ ಸತ್ಯವಿಶ್ವಾಸಿಗಾಗಲಿ, ಸತ್ಯವಿಶ್ವಾಸಿನಿಗಾಗಲಿ ತಮ್ಮ ವಿಷಯಕ್ಕೆ ಸಂಬಂಧಿಸಿ ಮುಕ್ತವಾದ ಅಭಿಪ್ರಾಯವಿರುವುದು ಭೂಷಣವಲ್ಲ. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುವನೋ ಅವನು ಸ್ಪಷ್ಟವಾದ ವಿಧದಲ್ಲಿ ಪಥಭ್ರಷ್ಟನಾಗಿರುವನು." [ಅಲ್-ಅಹ್ಝಾಬ್:36]
ಅಲ್ಲಾಹನ ಶಾಂತಿ ಮತ್ತು ಆಶೀರ್ವಾದವು ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ, ಮತ್ತು ಅವರ ಎಲ್ಲಾ ಸಂಗಡಿಗರ ಮೇಲೆ ಇರಲಿ.
ಈ ಪುಸ್ತಕ ಇಲ್ಲಿಗೆ ಮುಕ್ತಾಯವಾಗುತ್ತದೆ.
ವಿಷಯ ಸೂಚಿ
ಸಂಖ್ಯೆ
ವಿಷಯ
ಪುಟ
ಮುಖಪುಟಕ್ಕೆ ಹಿಂತಿರುಗಿ
ವಿಷಯ ಸೂಚಿಗೆ ಹೋಗಿ
ಪುಸ್ತಕದೊಂದಿಗಿನ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ
ದಯವಿಟ್ಟು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ
ಮೊಬೈಲ್ನೊಂದಿಗೆ ಹೊಂದಿಕೊಳ್ಳುವ ಪುಸ್ತಕ
ವಿಷಯಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ
ಮುಖಪುಟಕ್ಕೆ ಹಿಂತಿರುಗಲು ಈ ಚಿತ್ರದ ಮೇಲೆ ಕ್ಲಿಕ್ ಮಾಡಿ
ಬಾರ್ಕೋಡ್ ಸ್ಕ್ಯಾನ್ ಮಾಡಿ
ಶೈಕ್ಷಣಿಕ ಪ್ರಸ್ತುತಿ (ಪವರ್ಪಾಯಿಂಟ್)
ಯೋಜನೆಯ ಉತ್ಪನ್ನಗಳು
ಮುದ್ರಣಗೊಂಡ ಪುಸ್ತಕ
ಮೊಬೈಲ್ಗಾಗಿರುವ ಪುಸ್ತಕ
ಜಾಲತಾಣ
ಪವರ್ಪಾಯಿಂಟ್ ಪ್ರಸ್ತುತಿ
ಸ್ಮಾರ್ಟ್ ಫೋನ್ಗಳಿಗೆ ವಿಶೇಷವಾಗಿ ಸಿದ್ಧಪಡಿಸಿದ ಆವೃತ್ತಿ
ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ
ಪವಿತ್ರ ಕುರ್ಆನ್ ನನ್ನ ಪ್ರಭುವಿನ ವಚನ
ನಾನು ಈಗ ಇಸ್ಲಾಮಿನ ಸ್ತಂಭಗಳ ಪರಿಚಯ ನೀಡುತ್ತೇನೆ.
ನಾನು ಈಗ ವಿಶ್ವಾಸದ (ಈಮಾನ್) ಸ್ತಂಭಗಳ ಪರಿಚಯ ನೀಡುತ್ತೇನೆ.
ನಾನು ವುಝು ಮಾಡುವುದನ್ನು ಕಲಿಯುತ್ತೇನೆ.
ಪಾದರಕ್ಷೆಗಳು ಮತ್ತು ಕಾಲ್ಚೀಲಗಳ ಮೇಲೆ ಸವರುವುದು